ADVERTISEMENT

ಹಾಸನ: ಮಕ್ಕಳ ಕಲಿಕಾ ಹಬ್ಬ ವಿಶಿಷ್ಟ ಕಾರ್ಯಕ್ರಮ

ಉದ್ಘಾಟಿಸಿದ ಡಿಡಿಪಿಐ ಕೆ.ಎಸ್. ಪ್ರಕಾಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 6:48 IST
Last Updated 23 ಫೆಬ್ರುವರಿ 2023, 6:48 IST
ಹಾಸನದ ದಾಸರಕೊಪ್ಪಲು ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಿಕಾ ಹಬ್ಬವನ್ನು ಡಿಡಿಪಿಐ ಕೆ.ಎಸ್‌. ಪ್ರಕಾಶ್‌ ಉದ್ಘಾಟಿಸಿದರು
ಹಾಸನದ ದಾಸರಕೊಪ್ಪಲು ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಿಕಾ ಹಬ್ಬವನ್ನು ಡಿಡಿಪಿಐ ಕೆ.ಎಸ್‌. ಪ್ರಕಾಶ್‌ ಉದ್ಘಾಟಿಸಿದರು   

ಹಾಸನ: ಮಕ್ಕಳ ಕಲಿಕಾ ಹಬ್ಬ ವಿಶಿಷ್ಟವಾದ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳಲ್ಲಿ ಸಂತಸದಾಯಕ ಕಲಿಕೆಯ ಮೂಲಕ ಹೆಚ್ಚು ಜ್ಞಾನಾರ್ಜನೆಗೆ ಸಹಕಾರಿಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಕೆ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು .

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕಗಳ ಸಹಯೋಗದೊಂದಿಗೆ ಈಚೆಗೆ ದಾಸರಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ಎರಡು ವರ್ಷಗಳಲ್ಲಿ ಕೋವಿಡ್-19 ಕಾರಣದಿಂದಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ವಿದ್ಯಾರ್ಥಿಗಳ ಕಲಿಕೆಯಲ್ಲಿ ಆದ ಕೊರತೆಯನ್ನು ಸರಿದೂಗಿಸಲು ಇಲಾಖೆ ವತಿಯಿಂದ 2022-23 ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಿ ಚಟುವಟಿಕೆಯಾಧಾರಿತ ಕಲಿಕೆಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ADVERTISEMENT

ಕ್ಲಸ್ಟರ್ ಹಂತ ಹಾಗೂ ಜಿಲ್ಲಾ ಹಂತಗಳಲ್ಲಿ ನಡೆಯುವ ಈ ಕಾರ್ಯಕ್ರಮ ಮಗುವಿಗೆ ನಿತ್ಯದ ಅನುಭವಗಳು ಕಲಿಕಾ ಪ್ರಕ್ರಿಯೆಯಲ್ಲಿ ಬಳಕೆಯಾಗುತ್ತವೆ. ವಿದ್ಯಾರ್ಥಿಗಳು ತಮ್ಮಲ್ಲಿ ಚರ್ಚಿಸಿ ತಾರ್ಕಿಕವಾಗಿ ಆಲೋಚಿಸಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ. ಶಿಕ್ಷಕರು ಇದನ್ನು ಉತ್ತೇಜಿಸುವ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯ ಹೇಳಲು ಮುಕ್ತ ಅವಕಾಶ ನೀಡುತ್ತಾರೆ. ಪ್ರಯೋಗ, ಅವಲೋಕನ, ಯೋಜನೆ ವಿಧಾನಗಳ ಮೂಲಕ ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಶಿಕ್ಷಕರು ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಬಳಕೆ ಸರಿಯಾದ ರೀತಿಯಲ್ಲಿ ಮಾಡಿಕೊಂಡು ಕಲಿಕೆಯಲ್ಲಿ ಪ್ರಗತಿ ಸಾಧಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮ ಕೆ.ಎನ್. ಮಾತನಾಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷ ಗುರುರಾಜ್, ದಾಸರ ಕೊಪ್ಪಲು ಶಾಲೆ ಮತ್ತು ಹರಳಹಳ್ಳಿ ಶಾಲೆಯ ಶಿಕ್ಷಕರು, ಸಿಬ್ಬಂದಿ, ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳು ಭಾಗವಹಿಸಿದ್ದರು.

ಮುಖ್ಯ ಶಿಕ್ಷಕಿ ನಳಿನಿ ಆರ್. ಸ್ವಾಗತಿಸಿದರು. ಸಹಾಯಕ ಯೋಜನಾ ಸಮನ್ವಯಾಧಿಕಾರಿ ರೇಣುಕಾಂಬ ಎಂ.ಆರ್. ವಂದಿಸಿದರು. ಶಿಕ್ಷಕ ದೇವರಾಜು ನಿರೂಪಿಸಿದರು.

208 ಕ್ಲಸ್ಟರ್‌ಗಳಲ್ಲಿ ಕಾರ್ಯಕ್ರಮ

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ನೋಡಲ್ ಅಧಿಕಾರಿ ಮಹೇಶ ಬಿ., ಈಗಾಗಲೇ ಜಿಲ್ಲೆಯ 208 ಕ್ಲಸ್ಟರ್‌ಗಳಲ್ಲಿ ಕಲಿಕಾ ಹಬ್ಬ ಯಶಸ್ವಿಯಾಗಿ ನಡೆದಿದ್ದು, ಪ್ರತಿ ಕ್ಲಸ್ಟರ್‌ನಿಂದ 4ನೇ ತರಗತಿಯಿಂದ 9ನೇ ತರಗತಿಯವರೆಗಿನ 120 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈಗ ಜಿಲ್ಲಾ ಹಂತದಲ್ಲಿ ಹಾಸನ ತಾಲ್ಲೂಕಿನ 150 ವಿದ್ಯಾರ್ಥಿಗಳು ಆತಿಥೇಯರಾಗಿ ಮತ್ತು ಜಿಲ್ಲೆಯ ಉಳಿದ ತಾಲ್ಲೂಕುಗಳಿಂದ 150 ವಿದ್ಯಾರ್ಥಿಗಳು ಅತಿಥಿಗಳಾಗಿ ಕಲಿಕಾ ಹಬ್ಬದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಈ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಶಿಕ್ಷಕರ ಮೂಲಕ ಹಾಡು-ಆಡು, ಮಾಡು-ಆಡು, ಕಾಗದ-ಕತ್ತರಿ, ಊರು-ತಿಳಿಯೋಣ ಎಂಬ ನಾಲ್ಕು ಕಾರ್ನರ್‌ಗಳಲ್ಲಿ ವಿಶಿಷ್ಟವಾದ ಚಟುವಟಿಕೆಳ ಮೂಲಕ ತರಬೇತಿ ನೀಡಲಾಗುತ್ತದೆ. ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಮೂಲಕ ಶಾಲೆಗಳಲ್ಲಿ ಸಂಪೂರ್ಣವಾಗಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಸಹಕರಿಸುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.