ADVERTISEMENT

ಹಾಸನ: ಚಿರತೆ ದಾಳಿಗೆ ಕುರಿ, ಮೇಕೆ ಮರಿ ಬಲಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 12:24 IST
Last Updated 3 ಆಗಸ್ಟ್ 2020, 12:24 IST
ಚಿರತೆ ದಾಳಿಗೆ ಮೃತಪಟ್ಟಿರುವ ಕುರಿಗಳು
ಚಿರತೆ ದಾಳಿಗೆ ಮೃತಪಟ್ಟಿರುವ ಕುರಿಗಳು   

ಹಾಸನ: ತಾಲ್ಲೂಕಿನ ದೊಡ್ಡಬಾಗನಹಳ್ಳಿಯ ಪಾಂಡು ಕುಮಾರ್‌ ಮತ್ತು ಮಂಜು ಅವರಿಗೆ ಸೇರಿದ ಕುರಿ ಹಾಗೂ ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ.

ಭಾನುವಾರ ಸಂಜೆ ಅವರ ಶೆಡ್‌ಗೆ ತನ್ನ ಎರಡು ಮರಿಗಳೊಂದಿಗೆ ನುಗ್ಗಿದ ಚಿರತೆ 18 ಕುರಿ ಹಾಗೂ ಮೇಕೆ ಮರಿಗಳನ್ನು ತಿಂದು ಹಾಕಿವೆ. ಎಂಟು ಮರಿಗಳನ್ನು ಕಚ್ಚಿ ಗಾಯಗೊಳಿಸಿದ್ದು, ಅವುಗಳು ಸಾವು, ಬದುಕಿನ ನಡುವೆ ಹೋರಾಡುತ್ತಿವೆ.

ಕುರಿ, ಮೇಕೆ ಮರಿಗಳು ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಚೀರಾಡುವುದನ್ನು ಕೇಳಿದ ಸ್ಥಳೀಯರು ಶೆಡ್‌ ಬಳಿ ಓಡಿ ಬಂದಿದ್ದಾರೆ. ಜನರನ್ನು ಕಂಡ ಮೂರು ಚಿರತೆಗಳು ಅಲ್ಲಿಂದ ಓಡಿ ಹೋಗಿವೆ. ಅಷ್ಟರಲ್ಲಿ ಮರಿಗಳ ಜೀವ ಹೋಗಿತ್ತು. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಕೊರೊನಾ ಲಾಕ್‌ಡೌನ್‌ನಿಂದ ಸಂಷ್ಟದಲ್ಲಿದ್ದ ಮಾಲೀಕರಿಗೆ ಕುರಿ ಮರಿಗಳ ಸಾವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನೂ ಹದಿನೈದು ದಿನ ಹಾಗೂ ಎರಡು ತಿಂಗಳ ಕುರಿ, ಮೇಕೆ ಮರಿಗಳು ಬಲಿಯಾಗಿವೆ.

‘ಎಳೆಯ ಮರಿಗಳನ್ನು ಚಿರತೆ ಕೊಂದು ಹಾಕಿರುವುದರಿಂದ ಅಪಾರ ನಷ್ಟ ಉಂಟಾಗಿದೆ. ಪರಿಹಾರ ಕೊಡಿಸಬೇಕು’ ಎಂದು ಮಾಲೀಕರು ಕಣ್ಣೀರಿಟ್ಟರು.

ಪಾಂಡು ಮತ್ತು ಮಂಜು ಅವರು ನೂರಾರು ಆಡು ಮತ್ತು ಕುರಿಗಳನ್ನು ಒಟ್ಟಿಗೆ ಮೇಯಿಸುತ್ತಿದ್ದರು. ಪ್ರತಿ ವರ್ಷವೂ ಒಟ್ಟಾಗಿ ಬೇರೆ ಕಡೆಗಳಿಗೆ ಹೋಗುತ್ತಿದ್ದರು. ಈ ಬಾರಿ ಕೊರೊನಾದಿಂದಾಗಿ ಬೇರೆ ಊರುಗಳಿಗೆ ಹೋಗದೆ, ಗ್ರಾಮದ ಸಮೀಪವೆ ತಾವೇ ಒಂದು ಶೆಡ್‌ ನಿರ್ಮಿಸಿಕೊಂಡು, ಸಣ್ಣ ಕುರಿ, ಮೇಕೆ ಕೂಡಿ ಹಾಕಿ, ದೊಡ್ಡ ಕುರಿ ಮತ್ತು ಆಡುಗಳನ್ನು ಮೇಯಿಸಲು ಹೋಗಿದ್ದ ವೇಳೆ ಘಟನೆ ನಡೆದಿದೆ.

ಈ ಘಟನೆಯಿಂದ ಸಹಜವಾಗಿ ಗ್ರಾಮಸ್ಥರು ಭಯಭೀತರಾಗಿದ್ದು, ಈ ಭಾಗದಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಮತ್ತೊಂದು ದುರಂತ ಸಂಭವಿಸುವ ಮುನ್ನ ಚಿರತೆಗಳನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.