ADVERTISEMENT

ಚುನಾವಣೆ ಬಳಿಕ ಯಡಿಯೂರಪ್ಪ ನಾಟಕ ಕಂಪನಿ ಬಂದ್‌: ರೇವಣ್ಣ

ಮಂಡ್ಯ, ತುಮಕೂರಲ್ಲೂ ಮೈತ್ರಿ ಅಭ್ಯರ್ಥಿಗೆ ಗೆಲುವು: ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 15:01 IST
Last Updated 12 ಏಪ್ರಿಲ್ 2019, 15:01 IST

ಹಾಸನ: ಬಹಿರಂಗ ಪ್ರಚಾರಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ದೋಸ್ತಿ ಹಾಗೂ ಬಿಜೆಪಿ ಅಭ್ಯರ್ಥಿಗಳು ಬಿರುಸಿನ ಮತಬೇಟೆ ಮುಂದುವರಿಸಿದ್ದಾರೆ.

ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಅವರ ಸಹೋದರ ಡಾ.ಸೂರಜ್, ಚನ್ನರಾಯಪಟ್ಟಣ ತಾಲ್ಲೂಕು ದಂಡಿಗನಹಳ್ಳಿ ಹೋಬಳಿಗಳಲ್ಲಿ ರೋಡ್ ಶೋ ನಡೆಸಿದರು.

ಬಿಜೆಪಿ ಅಭ್ಯರ್ಥಿ ಎ.ಮಂಜು ಸಹ ಹೊಳೆನರಸೀಪುರ ತಾಲ್ಲೂಕಿನ ವಿವಿಧೆಡೆ ಮತಯಾಚನೆ ನಡೆಸಿದರು. ಹಾಗೆಯೇ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

ADVERTISEMENT

ಅಣ್ಣ ಸೂರಜ್, ‘ನಮ್ಮ ತಂದೆ ಹಾಗೂ ತಾತ ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಬೆಂಬಲ ನೀಡಿ’ ಎಂದು ಮನವಿ ಮಾಡಿದರೇ, ಪ್ರಜ್ವಲ್ ರೇವಣ್ಣ, ‘ಬಿಜೆಪಿ ಅಭ್ಯರ್ಥಿ ಶಾಸಕರಾಗಿ, ಸಚಿವರಾಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಅವರು ಸಿದ್ಧಾಂತ-ಬದ್ಧತೆ ಇಲ್ಲದ ರಾಜಕಾರಣಿ’ ಎಂದು ಜರಿದರು.

ಸಚಿವ ಎಚ್.ಡಿ.ರೇವಣ್ಣ ಹಾಸನ ನಗರ ಹಾಗೂ ತಾಲ್ಲೂಕಿನಲ್ಲಿ ಸಾರ್ವಜನಿಕ ಸಭೆ ನಡೆಸಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ತಾಲೂಕುಗಳಲ್ಲಿ ಪ್ರಜ್ವಲ್ ಗೆ ಅತ್ಯಧಿಕ ಮತ ಸಿಗಲಿವೆ ಎಂದು
ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಅಭ್ಯರ್ಥಿ ನಾನು ರೌಡಿ ಎಂದು ಹೇಳಿಕೊಂಡಿದ್ದು, ಅವರನ್ನು ಮನೆಗೆ ಕಳಿಸಲು ಜನ ತೀರ್ಮಾನ ಮಾಡಿದ್ದಾರೆ. ‘ಲೋಕಸಭೆ ಚುನಾವಣೆ ನಂತರ ದೇವೇಗೌಡರ ಕುಟುಂಬ ನಾಟಕದ ಕಂಪನಿ ಬಂದ್ ಆಗಲಿದೆ’ ಎಂಬ ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿದ ರೇವಣ್ಣ, ‘ಬಂದ್ ಆಗುವುದು ಯಡಿಯೂರಪ್ಪ ಅಂಡ್ ಕಂಪನಿ’ ಎಂದು ತಿರುಗೇಟು ನೀಡಿದರು.

ಇದೇ ವೇಳೆ ಬಾಯಿಗೆ ಬಂದ ಮಾತನಾಡುತ್ತಿರುವ ಕೆ.ಎಸ್.ಈಶ್ವರಪ್ಪ ಅವರಿಗೂ ಒಂದು ನಿಂಬೆಹಣ್ಣು ಕೊಡೋಣ ಎಂದು ನಗುತ್ತಲೇ ಟಾಂಗ್ ಕೊಟ್ಟ ರೇವಣ್ಣ, ‘ಮಂಡ್ಯ-ತುಮಕೂರಲ್ಲಿ ಗೆಲುವು ನಮ್ಮದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.