
ಹಾಸನ: ‘ಶ್ರಮ ಶಕ್ತಿ ನೀತಿಯು ಸಂವಿಧಾನಾತ್ಮಕ ಹಕ್ಕುಗಳನ್ನು ನಾಶ ಮಾಡುವ, ಮನುಸ್ಮೃತಿ ಆಧಾರಿತ ನೀತಿಗಳನ್ನು ಜಾರಿಗೊಳಿಸುವ ಸಂಚು’ ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಹೇಮಲತಾ ಪ್ರತಿಪಾದಿಸಿದರು.
ನಗರದಲ್ಲಿ ಗುರುವಾರ ಆರಂಭವಾದ 3 ದಿನಗಳ ಸಿಐಟಿಯು 16 ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ‘ಈ ನೀತಿಯಲ್ಲಿ ಮಹಿಳಾ ಶೋಷಣೆ, ದೀನ ದಲಿತರ ಶೋಷಣೆ ಅಡಗಿದೆ. ಇದು ದುಡಿಯುವ ಜನರ ಮೇಲೆ ಆರ್‌ಎಸ್‌ಎಸ್ ನೀತಿಗಳನ್ನು ಹೇರುವ ಪ್ರಯತ್ನ’ ಎಂದು ಅಭಿಪ್ರಾಯಪಟ್ಟರು.
‘ಕಾರ್ಮಿಕರು ಶತಮಾನಗಳಿಂದ ಹೋರಾಟದ ಮೂಲಕ ಪಡೆದ ಹಕ್ಕುಗಳನ್ನ ಕಾನೂನು ತಿದ್ದುಪಡಿ ಮೂಲಕ ನಾಶ ಮಾಡಲಾಗುತ್ತಿದೆ.ಕಾರ್ಮಿಕ ಇಲಾಖೆ ಕಾರ್ಮಿಕರನ್ನು ರಕ್ಷಿಸುವ ಬದಲು, ಮಾಲೀಕರ ಪರವಾಗಿ ವಕಾಲತ್ತು ವಹಿಸುವ ಸಂಪರ್ಕ ಸಾಧನವಾಗುತ್ತಿದೆ’ ಎಂದು ದೂರಿದರು.
‘ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ಶ್ರಮ ಶಕ್ತಿ ನೀತಿಗಳ ವಿರುದ್ದ ಹೋರಾಟ ತೀವ್ರಗೊಳಿಸಬೇಕಾಗಿದೆ’ ಎಂದರು.
ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ, ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್. ಉಮೇಶ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಘಟಕದ ಉಪಾಧ್ಯಕ್ಷ ವಿ.ಜೆ.ಕೆ ನಾಯರ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.