ADVERTISEMENT

ಆಧುನಿಕ ಗುಲಾಮಗಿರಿಗೆ ತಳ್ಳುತ್ತಿರುವ ಸರ್ಕಾರಗಳು: ಎಸ್.ವರಲಕ್ಷ್ಮಿ

ಕಾರ್ಮಿಕರ ಹಕ್ಕುಗಳ ಕಗ್ಗೊಲೆ, ಕಾರ್ಮಿಕ ಸಂಹಿತೆ ವಿರುದ್ಧ ಫೆಬ್ರುವರಿ 12ರಂದು ಮುಷ್ಕರ: ಎಸ್. ವರಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:06 IST
Last Updated 28 ಜನವರಿ 2026, 7:06 IST
ಹಾಸನದ ನಿವೃತ್ತ ನೌಕರರ ಭವನದಲ್ಲಿ ನಡೆದ ಜಿಲ್ಲಾ ಸಮಾವೇಶದಲ್ಲಿ ಎಸ್.ವರಲಕ್ಷ್ಮಿ ಮಾತನಾಡಿದರು 
ಹಾಸನದ ನಿವೃತ್ತ ನೌಕರರ ಭವನದಲ್ಲಿ ನಡೆದ ಜಿಲ್ಲಾ ಸಮಾವೇಶದಲ್ಲಿ ಎಸ್.ವರಲಕ್ಷ್ಮಿ ಮಾತನಾಡಿದರು    

ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ನೂತನ ಕಾರ್ಮಿಕ ನೀತಿಗಳು ಮತ್ತು ಖಾಸಗೀಕರಣದ ನಡೆಗಳು, ದೇಶದ ಬಂಡವಾಳಗಾರರ ಹಿತಾಸಕ್ತಿ ಕಾಪಾಡುತ್ತಿದ್ದು, ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುತ್ತಿವೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ಆರೋಪಿಸಿದರು.

ನಗರದ ನಿವೃತ್ತ ನೌಕರರ ಭವನದಲ್ಲಿ ಸೋಮವಾರ ನಡೆದ ಕಾರ್ಮಿಕ ಸಂಘಟನೆಗಳು ಮತ್ತು ಹಾಸನ ಜಿಲ್ಲಾ ಜನಪರ ಸಂಘಟನೆಗಳ ಜಿಲ್ಲಾ ಸಮಾವೇವಶದಲ್ಲಿ ಅವರು ಮಾತನಾಡಿದರು.

‘ಈ ನೀತಿಗಳನ್ನು ಹಿಮ್ಮೆಟ್ಟಿಸಲು ಫೆಬ್ರುವರಿ 12ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರವನ್ನು ಯಶಸ್ವಿಗೊಳಿಸಬೇಕು. ಬಂಡವಾಳ ಮತ್ತು ಶ್ರಮದ ನಡುವಿನ ಹೋರಾಟ ತೀವ್ರಗೊಂಡಿದ್ದು, ಫೆ. 12ರ ಮುಷ್ಕರವು ಕೇವಲ ಪ್ರತಿಭಟನೆಯಲ್ಲ, ಬದಲಾಗಿ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧದ ಪ್ರಬಲ ಜನ ಚಳವಳಿ’ ಎಂದು ತಿಳಿಸಿದರು.

ADVERTISEMENT

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ವಿದ್ಯುತ್ ಕಾಯ್ದೆ ತಿದ್ದುಪಡಿ ಮತ್ತು ಕೃಷಿ ವಿರೋಧಿ ಕಾಯ್ದೆ ಕೈಬಿಡಬೇಕು. ಸರ್ಕಾರ ಜೀವನೋಪಾಯ ವೇತನ ನೀಡಬೇಕು. ಮುಷ್ಕರದ ಹಕ್ಕಿನ ಮೇಲೆ ನಿರ್ಬಂಧ ಕಾರ್ಮಿಕರ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುವ ತಂತ್ರವಾಗಿದೆ’ ಎಂದು ಹೇಳಿದರು.

ದಲಿತರು, ರೈತರು ಮತ್ತು ಕಾರ್ಮಿಕರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಎಲ್ಲರೂ ಒಗ್ಗೂಡಿ ಹೋರಾಡುವ ಅನಿವಾರ್ಯತೆ ಇದೆ. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವವರ ವಿರುದ್ಧ ಸಂಘಟಿತರಾಗಿ ಫೆ. 12ರಂದು ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದು ಹೇಳಿದರು.

ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ಬ್ಯಾಂಕ್ ಉದ್ಯೋಗಿಗಳೂ ಕೂಡ ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದು, ಫೆ. 12 ರಂದು ಬ್ಯಾಂಕ್ ಒಕ್ಕೂಟಗಳು ಮುಷ್ಕರದಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.

ಹಾಸನ ಜಿಲ್ಲೆಯ ಪ್ಲಾಂಟೇಶನ್ ಕಾರ್ಮಿಕರು, ಕೆಎಸ್‍ಆರ್‌ಟಿಸಿ ನೌಕರರು, ಅಂಗನವಾಡಿ ಮತ್ತು ಬಿಸಿಯೂಟ ನೌಕರರು ಈ ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಎಐಟಿಯುಸಿ ರಾಜ್ಯ ಮುಖಂಡ ಅಮಜದ್ ಮಾತನಾಡಿದರು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪಾ, ಖಜಾಂಚಿ ಅರವಿಂದ, ಎಐಟಿಯುಸಿ ಮುಖಂಡ ಧರ್ಮರಾಜ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ನವೀನ್‍ಕುಮರ್, ನಿವೃತ್ತ ಬ್ಯಾಂಕ್ ನೌಕರರ ಸಂಘದ ಪರಮಶಿವಯ್ಯ, ಎಲ್‍ಐಸಿ ನೌಕರರ ಸಂಘದ ಮಂಜುನಾಥ್, ದಲಿತ ಮುಖಂಡ ರಾಜಶೇಖರ್ ಭಾಗವಹಿಸಿದ್ದರು. ಕಾರ್ಮಿಕ ಸಂಹಿತೆಗಳ ಅಪಾಯಗಳ ಕುರಿತ ಕಿರುಪುಸ್ತಕ ಬಿಡುಗಡೆಮಾಡಲಾಗಿತು. ಹೊರಗುತ್ತಿಗೆ ನೌಕರರ ಸಂಘದ ಮುಖಂಡ ಕಾಂತರಾಜು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.