ಚನ್ನರಾಯಪಟ್ಟಣ: ಸ್ವಚ್ಛ ಪರಿಸರದಿಂದ ಉತ್ತಮ ಆಲೋಚನೆ ಉಂಟಾಗುತ್ತದೆ ಎಂದು ಅರಣ್ಯಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಪಟ್ಟಣದ ಹೊರವಲಯದಲ್ಲಿ ಭಾನುವಾರ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಯಿಂದ ನವೀಕೃತ ಬೆಲಸಿಂದ ಪ್ರಕೃತಿ ವನದ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಉದ್ಯಾನ ಇರಬೇಕು ಎಂಬ ಯೋಜನೆಯಂತೆ, ಉದ್ಯಾನ ನಿರ್ಮಿಸಲಾಗಿದೆ. ಎಲ್ಲೆಲ್ಲಿ ಇಲ್ಲವೋ ಅಂಥ ಕಡೆ ಉದ್ಯಾನ ನಿರ್ಮಿಸಲಾಗುವುದು. ದೇಶಪ್ರಗತಿ ಪಥದತ್ತ ಸಾಗಬೇಕಾದರೆ ಶೇ33ರಷ್ಟು ಅರಣ್ಯಸಂಪತ್ತು ಇರಬೇಕು. ಸ್ವಚ್ಛಪರಿಸರಕ್ಕೆ ಸಸ್ಯಸಂಪತ್ತು ಅತ್ಯವಶ್ಯಕ. ಎಲ್ಲರೂ ಗಿಡನೆಟ್ಟು ಪೋಷಣೆ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಆನೆಕಾರಿಡಾರ್ ಪ್ರಾರಂಭಿಸಲು ₹53 ಕೋಟಿ ಮಂಜೂರಾತಿಗೆ ರಾಜ್ಯ ಸಚಿವ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಕೇಂದ್ರ ಒಪ್ಪಿದ ನಂತರ ಆರಂಭಿಸಲಾಗುವುದು. ರಾಜ್ಯದಲ್ಲಿ 6500 ಆನೆಗಳಿವೆ. 565 ಹುಲಿಗಳಿವೆ. ಕ್ರಮವಾಗಿ ದೇಶದಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದೇವೆ. ವನ್ಯಜೀವಿಗಳ ಸಂರಕ್ಷಣೆ ಮಾಡುವ ಹೊಣೆ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಪಟ್ಟಣದ ಪೊರವಲಯದಲ್ಲಿರುವ ಬೆಲಸಿಂದ ವನ 285 ಎಕರೆ ಪ್ರದೇಶದಲ್ಲಿದೆ. ಇದರಲ್ಲಿ 50 ಎಕರೆ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ದಿ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತ್ತಿರುವ ಬೆಲಸಿಂದವನದಲ್ಲಿ ಅರಣ್ಯ ಇಲಾಖೆಯಿಂದ ಪ್ರವಾಸಿ ಮಂದಿರ ನಿರ್ಮಿಸಬೇಕು. ಹೊರಗುತ್ತಿಗೆಯ ಆಧಾರದ ಮೇಲೆ ಅರಣ್ಯರಕ್ಷಕರನ್ನು ನೇಮಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಅರಣ್ಯಸಂರಕ್ಷಣಾಧಿಕಾರಿ ಏಡುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‍ಕುಮಾರ್, ಪುರಸಭಾಧ್ಯಕ್ಷ ಸಿ.ಎನ್. ಮೋಹನ್, ಪರಿಸರವಾದಿ ಸಿ.ಎನ್. ಅಶೋಕ್, ನಿವೃತ್ತವಲಯ ಅರಣ್ಯಾಧಿಕಾರಿ ಧರ್ಮಪ್ಪ, ಅಧಿಕಾರಿಗಳಾದ ಮದುಸೂಧನ್, ಖಲಂದರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.