ಅರಸೀಕೆರೆ: ‘ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿ ಕಾಮಗಾರಿಗಳು ಆಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತವೆ. ನೀವು ಇಲ್ಲಿಗೆ ಬಂದು ಕಣ್ಣಾರೆ ನೋಡಿ, ಅರಸೀಕೆರೆ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಗಮನಿಸಿ. ಪ್ರತಿಪಕ್ಷಗಳ ಟೀಕೆಗೆ ಅಭಿವೃದ್ಧಿಯೇ ಉತ್ತರವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ, ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಇಂದು ₹570 ಕೋಟಿ ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡಿರುವ ಕಾಮಗಾರಿಗಳಿವು’ ಎಂದ ಅವರು, ‘136 ಸ್ಥಾನಗಳನ್ನು ಗೆಲ್ಲಿಸಿದ್ದೀರಿ. 2028ರಲ್ಲೂ ಅದೇ ರೀತಿ ಆಶೀರ್ವಾದ ಮಾಡಬೇಕು. ಕಾಂಗ್ರೆಸ್ ಸರ್ಕಾರ ಮಾತ್ರ ಜನರ ಕಷ್ಟ–ಸುಖಗಳಿಗೆ ಸ್ಪಂದಿಸುವ ಸರ್ಕಾರ’ ಎಂದರು.
‘ಚುನಾವಣಾ ಪ್ರಚಾರ, ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸೇರಿದಂತೆ ನಾನು ಅನೇಕ ಬಾರಿ ಅರಸೀಕೆರೆಗೆ ಬಂದಿದ್ದೇನೆ. ಆದರೆ, ಇಷ್ಟೊಂದು ಜನರು ಸೇರಿರುವುದು ಇತಿಹಾಸ. ಶಿವಲಿಂಗೇಗೌಡರು ಜನಪರ ಶಾಸಕರಾಗದೇ ಇದ್ದರೆ, ಇಷ್ಟು ಜನ ಸೇರಲು ಸಾಧ್ಯ ಆಗುತ್ತಿರಲಿಲ್ಲ. ಶಿವಲಿಂಗೇಗೌಡರ ಜನಪ್ರಿಯತೆಯನ್ನು ಇದು ಸೂಚಿಸುತ್ತದೆ’ ಎಂದು ಹೇಳಿದರು.
‘ಡಿ.ಕೆ. ಶಿವಕುಮಾರ್ ಹಾಗೂ ನನ್ನ ಬಳಿ ಬಂದು, ಇದು ಆಗಲೇಬೇಕು ಎಂದು ಶಿವಲಿಂಗೇಗೌಡರು ಹಟ ಹಿಡಿಯುತ್ತಾರೆ. ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆದರೂ, ಅದರಲ್ಲಿ ಭಾಗವಹಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಶಿವಲಿಂಗೇಗೌಡರನ್ನು ಶಾಸಕರನ್ನಾಗಿ ಪಡೆದಿರುವ ನೀವೆಲ್ಲರೂ ಧನ್ಯರು’ ಎಂದರು.
‘ನಾನು ಅನೇಕ ಶಾಸಕರನ್ನು ನೋಡಿದ್ದೇನೆ. ಆದರೆ, ಶಿವಲಿಂಗೇಗೌಡರು ಕಚೇರಿಗಳಿಗೆ ಹೋಗಿ, ತಮ್ಮ ಕ್ಷೇತ್ರದ ಕೆಲಸಗಳನ್ನು ಕಾರ್ಯಗತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ಇವರೇ ಗೆದ್ದು ಬರುತ್ತಾರೆ. ಬೇರೆ ಯಾರೂ ಮಾಡದಷ್ಟು ಕೆಲಸವನ್ನು ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ರಾಹುಲ್ ಗಾಂಧಿಯವರಿಗೆ ಸಾಮಾಜಿಕ ವ್ಯವಸ್ಥೆಯ ಪೂರ್ಣ ಮಾಹಿತಿ ಸಿಕ್ಕಿದ್ದು, ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆಯಿಂದ ಮಾತನಾಡುತ್ತಿದ್ದಾರೆ. ಸಮಾಜದ ಎಲ್ಲ ಬಡಜನರು, ಹಿಂದುಳಿದವರು, ದಲಿತರು, ರೈತರು, ಅಲ್ಪಸಂಖ್ಯಾತರು ಮುಖ್ಯವಾಹನಿಗೆ ಬರಬೇಕು. ಅಸಮಾನತೆಯನ್ನು ತೊಡೆದು ಹಾಕಬೇಕು. ಹೀಗಾಗಿ ಎಲ್ಲ ರಾಜ್ಯಗಳಲ್ಲೂ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಗಣತಿ ಮಾಡಲಾಗುತ್ತಿದೆ’ ಎಂದರು.
ಕನಕಪುರ, ವರುಣಕ್ಕಿಂತ ಅರಸೀಕೆರೆಯಲ್ಲಿ ಹೆಚ್ಚು ಅಭಿವೃದ್ಧಿ:
‘ಅರಸೀಕೆರೆ ತಾಲ್ಲೂಕಿನ ಜನರು ಶಾಸಕರು ಮತ್ತು ಸಂಸದರನ್ನು ಆಯ್ಕೆ ಮಾಡುವ ಮೂಲಕ ಎರಡು ಕಣ್ಣುಗಳನ್ನು ಕೊಟ್ಟಿದ್ದೀರಿ. ಕನಕಪುರ ಹಾಗೂ ವರುಣ ಕ್ಷೇತ್ರಕ್ಕೆ ಹೆಚ್ಚು ಕೆಲಸಗಳನ್ನು ಅರಸೀಕೆರೆ ಕ್ಷೇತ್ರಕ್ಕೆ ಶಿವಲಿಂಗೇಗೌಡರು ಮಾಡಿಸಿದ್ದಾರೆ. ಕನಕಪುರದಲ್ಲಿ ಸರ್ಕಾರಿ ಎಂಜಿನಿಯರಿಂಗ್, ಡಿಪ್ಲೊಮಾ ಕಾಲೇಜುಗಳಿಲ್ಲ. ಎತ್ತಿನಹೊಳೆ, ಹೇಮಾವತಿ ನೀರು ಕೊಡಲೇಬೇಕು ಎಂದು ಸಚಿವ ಸಂಪುಟದಲ್ಲಿ ಅನುಮೋದನೆ ಕೊಡಿಸಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ಮಲ್ಲಿಕಾರ್ಜುನ ಖರ್ಗೆ ಅವರು 371 ‘ಜೆ’ ಮೂಲಕ ಕಲ್ಯಾಣ ಕರ್ನಾಟಕದ ಜನರ ಋಣ ತೀರಿಸಿದಂತೆ, ಶಾಸಕ ಶಿವಲಿಂಗೇಗೌಡರು ಮತದಾರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಯೋಗಿ ಅನ್ನಿಸಿಕೊಳ್ಳುವ ಮೊದಲು, ಉಪಯೋಗಿ ಅನ್ನಿಸಿಕೊಳ್ಳಬೇಕು. ನಾವು ಮಾಡುವ ಕೆಲಸಗಳಿಂದ ಜನರ ಹೃದಯ ಗೆಲ್ಲಬೇಕು. ಕೆರೆಗಳಿಗೆ ನೀರು ತುಂಬಿಸಬೇಕು. ನೀರಾವರಿ ಆಗಬೇಕು ಎಂದು ಪಟ್ಟು ಹಿಡಿದ ಶಿವಲಿಂಗೇಗೌಡರು, ಈ ಎಲ್ಲ ಯೋಜನೆಗಳನ್ನು ಉದ್ಘಾಟಿಸಿದ್ದಾರೆ’ ಎಂದರು.
‘ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಕೂಡ ಮುಖ್ಯ. ಶಿವಲಿಂಗೇಗೌಡರ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ್ದೀರಿ. ಇಡೀ ರಾಜ್ಯಕ್ಕೆ ದೊಡ್ಡ ಸಂದೇಶ ಕೊಟ್ಟಿದ್ದೀರಿ. ಜಿಲ್ಲೆಯಲ್ಲಿ ಒಬ್ಬರೇ ಗೆದ್ದಿರಬಹುದು. ಆದರೆ, ಶಿವಲಿಂಗೇಗೌಡ, ಶ್ರೇಯಸ್ ಪಟೇಲ್ ಹಾಗೂ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳನ್ನು ಗೆಲ್ಲುವ ಆತ್ಮವಿಶ್ವಾಸವಿದೆ’ ಎಂದು ಹೇಳಿದರು.
ಸಚಿವ ಕೆ.ಎನ್. ರಾಜಣ್ಣ, ಸಂಸದ ಶ್ರೇಯಸ್ ಪಟೇಲ್, ಶಾಸಕ ಶ್ರೀನಿವಾಸ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಎಸ್ಪಿ ಮೊಹಮ್ಮದ್ ಸುಜೀತಾ, ಉಪ ವಿಭಾಗಾಧಿಕಾರಿಗಳಾದ ಮಾರುತಿ, ಡಾ.ಎಂ.ಕೆ. ಶ್ರುತಿ, ನಗರಸಭೆ ಅಧ್ಯಕ್ಷ ಸಮೀವುಲ್ಲ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್‌ಕುಮಾರ್, ಮುಖಂಡರಾದ ಮುರುಳಿಮೋಹನ್, ಎಂ.ಎ. ಗೋಪಾಲಸ್ವಾಮಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಕೇವಲ ಅಧಿಕಾರ ಬೇಕು. ಜಾತಿ ಧರ್ಮಗಳ ಮೇಲೆ ರಾಜಕಾರಣ ಮಾಡಬೇಡಿ. ಅಭಿವೃದ್ಧಿ ಮೂಲಕ ರಾಜಕಾರಣ ಮಾಡಿಜಮೀರ್ ಅಹಮ್ಮದ್ ಖಾನ್, ವಸತಿ ಸಚಿವ
ಅಭಿಮಾನಿಗಳ ಒತ್ತಾಯ: ಸಿಎಂಗೆ ಸಿಟ್ಟು
ಮುಖ್ಯಮಂತ್ರಿ ಮಾತನಾಡುತ್ತಿದ್ದ ವೇಳೆ ‘ಶಿವಲಿಂಗೇಗೌಡರನ್ನು ಸಚಿವರನ್ನಾಗಿ ಮಾಡಬೇಕು’ ಎಂದು ಜನರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಅವರಿಗೆ ಒಳ್ಳೆಯ ರಾಜಕೀಯ ಭವಿಷ್ಯವಿದೆ’ ಎಂದು ಹೇಳಿದರು. ಆದರೂ ಕೂಗಾಟ ಮುಂದುವರಿಸಿದ್ದರಿಂದ ಮಾತು ನಿಲ್ಲಿಸಿದ ಸಿದ್ದರಾಮಯ್ಯ ಕುರ್ಚಿಯತ್ತ ತೆರಳಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಶಿವಲಿಂಗೇಗೌಡ ಜನರನ್ನು ಸುಮ್ಮನೆ ಕೂರಿಸಿದರು. ನಂತರ ಮಾತು ಮುಂದುವರಿಸಿದ ಸಿದ್ದರಾಮಯ್ಯ ‘ಸಚಿವರನ್ನು ಮಾಡುವುದು ಹೈಕಮಾಂಡ್ ಮತ್ತು ನಮ್ಮ ಸರ್ಕಾರ. ಶಿವಲಿಂಗೇಗೌಡರು ಸಚಿವರಾಗಲು ಎಲ್ಲ ಅರ್ಹತೆ ಹೊಂದಿದ್ದಾರೆ. ನಿಮ್ಮ ಅಭಿಮಾನ ಪ್ರೀತಿ ಅವರ ಮೇಲೆ ಇದೇ ರೀತಿ ಇರಲಿ. ಇದೆಲ್ಲವನ್ನೂ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ’ ಎಂದರು.
ಕೆರೆಗಳಿಗೆ ನೀರು ತುಂಬಿಸಿ: ಶಿವಲಿಂಗೇಗೌಡ
‘ಅರಸೀಕೆರೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪಾಲಿಟೆಕ್ನಿಕ್ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. ₹36 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಆರಂಭಿಸಲಾಗುತ್ತಿದೆ. ಅರಸೀಕೆರೆ ತಾಲ್ಲೂಕಿಗೆ ಶುದ್ಧ ಕುಡಿಯುವ ನೀರು ಒದಗಿಸಿದ್ದಾರೆ. ಇದೀಗ ಎತ್ತಿನಹೊಳೆ ಯೋಜನೆ ನೀರು ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ಹರಿಯಬೇಕಿದೆ’ ಎಂದು ಕೆ.ಎಂ. ಶಿವಲಿಂಗೇಗೌಡ ಹೇಳಿದರು. ‘ಎತ್ತಿನಹೊಳೆ ಯೋಜನೆ ಮುಂದುವರಿಸಲು ಕೇಂದ್ರ ಸರ್ಕಾರದವರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇದನ್ನು ಖಂಡಿಸಬೇಕಿದೆ. ಕಾವೇರಿಯಿಂದ ಗಂಡಸಿ ಹೋಬಳಿ ಕೆರೆಗಳ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ಬರಡು ನಾಡಾದ ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದು ಇನ್ನೂ ಹಲವು ಕೆರೆಗಳಿಗೆ ನೀರು ಹರಿಸಬೇಕು’ ಎಂದರು. ‘ತೆಂಗಿಗೆ ನಾಲ್ಕು ರೀತಿಯ ರೋಗ ಬಂದಿದೆ. ಇದರಿಂದ ಮರಗಳು ಹಾಳಾಗುತ್ತಿವೆ. ವಿಶೇಷ ಅನುದಾನ ಒದಗಿಸುವ ಮೂಲಕ ರೋಗ ನಿಯಂತ್ರಣಕ್ಕೆ ಮುಂದಾಗಬೇಕು’ ಎಂದರು.
ಯೂರಿಯಾ ಗೊಬ್ಬರ ಕೊರತೆ ಇಲ್ಲ
ರಾಜ್ಯದಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಇಲ್ಲ. ಈ ಬಾರಿ ಐದು ಲಕ್ಷ ಹೆಕ್ಟೇರ್ ಹೆಚ್ಚು ಬಿತ್ತನೆ ಆಗಿರುವುದರಿಂದ ಗೊಬ್ಬರದ ಬೇಡಿಕೆ ಸ್ವಲ್ಪ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಳೆ ಹೆಚ್ಚಾಗಿದ್ದು ಮುಂಗಾರು ಮಳೆ ಬೇಗ ಶುರುವಾಯಿತು. ಜೋಳ ಹಾಕಿರುವುದು ಜಾಸ್ತಿ ಆಗಿದೆ. ಹಾಗಾಗಿ ಜಾಸ್ತಿ ರಸಗೊಬ್ಬರ ಉಪಯೋಗಿಸಿದ್ದಾರೆ ಎಂದರು. ಸಂಪುಟ ಪುನರ್ ರಚನೆ ಆದಾಗ ನೋಡೋಣ. ಈಗಲೇ ಹೇಳಲು ಬರಲ್ಲ. ಯಾರ‍್ಯಾರು ಆಕಾಂಕ್ಷಿಗಳಿದ್ದಾರೋ ಎಲ್ಲರಿಗೂ ಅವಕಾಶ ಸಿಗುತ್ತದೆ ಎಂದು ಹೇಳಿದರು. ಹಾಸನ ಮಹಾನಗರಪಾಲಿಕೆಗೆ ಹಣ ಬಿಡುಗಡೆ ಮಾಡಲ್ಲ ಎಂದು ಸರ್ಕಾರ ಕಾರ್ಯದರ್ಶಿಗಳು ಬರೆದಿರುವ ಪತ್ರದ ಬಗ್ಗೆ ವಿಚಾರ ಮಾಡುತ್ತೇನೆ ಎಂದು ಹೇಳಿದರು. ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಮಹಾರಾಜರಿಗಿಂತ ಹೆಚ್ಚು ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಮಾತ್ರ ಎಂಬ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಮೈಸೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತ ಹೆಚ್ಚು ಕೆಲಸ ಮಾಡಿದೆ ಎಂದಷ್ಟೇ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.