ADVERTISEMENT

ತೆಂಗಿನ ರೋಗ ತಡೆಗಟ್ಟಲು ಮುಂದಾಗಲಿ: ಶಾಸಕ ಕೆ.ಎಂ.ಶಿವಲಿಂಗೇಗೌಡ

ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 2:07 IST
Last Updated 20 ಜುಲೈ 2025, 2:07 IST
ಶಾಸಕ ಕೆ.ಎಂ.ಶಿವಲಿಂಗೇಗೌಡ
ಶಾಸಕ ಕೆ.ಎಂ.ಶಿವಲಿಂಗೇಗೌಡ   

ಅರಸೀಕೆರೆ: ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಹಾಗೂ ರೈತರ ಬದುಕಿಗೆ ಸಹಕಾರಿಯಾಗಿರುವ ತೆಂಗಿನ ಬೆಳೆಗೆ ತಗುಲಿರುವ ರೋಗಗಳನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಮುಂದಾಗಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆ ಕಲ್ಪತರು ನಾಡು, ತೆಂಗು ಬೆಳೆಯು ಕಲ್ಪತರು, ಕಾಮಧೇನು ಎಂದೂ ಹೆಸರುವಾಸಿಯಾಗಿದೆ. ಇಂದು ತೆಂಗಿಗೆ ದೊಡ್ಡ ಪ್ರಮಾಣದಲ್ಲಿ ಕಂಟಕ ಎದುರಾಗಿದೆ. ಜಿಲ್ಲೆಯಲ್ಲಿ 1,18, 792 ಎಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 56,473 ಎಕ್ಟೇರ್‌ ಪ್ರದೇಶದ ತೆಂಗು ಬೆಳೆ ಅರಸೀಕೆರೆ ತಾಲ್ಲೂಕಿನಲ್ಲಿ ಇದೆ ಎಂದು ತಿಳಿಸಿದರು.

ತೆಂಗಿಗೆ ನಾಲ್ಕು ಬಗೆಯ ರೋಗಗಳು ಆವರಿಸಿವೆ. ಕಪ್ಪು ತಲೆ ಹುಳಗಳ ಬಾಧೆ, ಬಿಳಿ ನೊಣಗಳ ಬಾಧೆ, ಕಾಂಡ ಸೋರುವ ರೋಗ ಹಾಗೂ ಅಣಬೆ ರೋಗ ಹಾವಳಿ ಹೆಚ್ಚಾಗಿದೆ. ತೆಂಗಿನ ಬೆಳೆ ಭಾರಿ ಪ್ರಮಾಣದಲ್ಲಿ ಕುಂಠಿತವಾಗಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ತೆಂಗು ಬೆಳೆ ಕ್ಷೀಣಿಸುವ ಸನ್ನಿವೇಶ ಎದುರಾಗಿದೆ. ಸರ್ಕಾರ ಹಾಗೂ ಇದಕ್ಕೆ ಸಂಬಂಧ ಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಕೊಬ್ಬರಿ ಹಾಗೂ ತೆಂಗು ಬೆಲೆ ಏರಿಕೆಯಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಹೆಚ್ಚಾಗಿ ಕಾಣಿಸಿಕೊಳ್ಳುವ ಕಪ್ಪು ತಲೆ ಹುಳುಗಳ ನಿಯಂತ್ರಣಕ್ಕಾಗಿ ಗೋನಿಯೋಜಸ್‌ ನೆಫಾಂಡಿಟಿಸ್‌ ಪರೋಪ ಜೀವಿಗಳನ್ನು ಹೆಚ್ಚೆಚ್ಚು ಉತ್ಪಾದಿಸಿ ತೆಂಗಿನ ಮರಗಳಿಗೆ ಬಿಡಬೇಕು. ಇಲ್ಲದಿದ್ದರೆ ರೋಗ ನಿಯಂತ್ರಣ ಸಾಧ್ಯವಾಗುವುದಿಲ್ಲ. ಇಂತಹ ಪರೋಪ ಜೀವಿಗಳನ್ನು ಕೇವಲ ತಾಲ್ಲೂಕಿನಲ್ಲಿ ಅಲ್ಲದೇ ರಾಜ್ಯದಲ್ಲಿ ತೆಂಗು ಬೆಳೆಯುವ ಎಲ್ಲ ಪ್ರದೇಶಗಳಿಗೆ ವಿಸ್ತರಿಸಬೇಕು.ರಾಜ್ಯದಲ್ಲಿ ತೆಂಗು ಬೆಳೆ ಉಳಿಸಲು ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದರು.

ಬಿಳಿ ನೊಣ ಕೀಟ ಬಾಧೆಗೆ ಬೇವಿನ ಹಿಂಡಿ ಎಥೇಚ್ಛವಾಗಿ ನೀಡಬೇಕು. ಹೆಚ್ಚು ಹಾನಿ ಮಾಡುತ್ತಿರುವ ಕಾಂಡ ಸೋರುವ ರೋಗವನ್ನು ತಡೆಗಟ್ಟಬೇಕು. ಈ ಬಾಧೆಗೆ ಎಕ್ಸೋ ಫಾನೇಜನ್‌ ಔಷಧಿಯನ್ನು ನೀರಿನ ಜೊತೆ ಬೆರೆಸಿ ಸಿಂಪಡಿಸಬೇಕಿದೆ. ಈ 4 ರೋಗಗಳನ್ನು ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ಹತೋಟಿಗೆ ತರಬೇಕು. ಸರ್ಕಾರ ನೂರಾರು ಕೋಟಿ ಹಣ ಒದಗಿಸಿ ತೆಂಗು ಬೆಳೆ ರಕ್ಷಿಸಲು ತಕ್ಷಣವೇ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ತೆಂಗು ಬೆಳೆ ರೋಗ ನಿಯಂತ್ರಣ ಕೈಗೊಂಡರೆ ಸಾಲದು. ಈ ರೋಗವು ಗಾಳಿಯ ಮೂಲಕ ಹರಡುತ್ತಿದ್ದು, ಇಡೀ ರಾಜ್ಯದಲ್ಲೇ ಕ್ರಮ ತೆಗೆದುಕೊಳ್ಳಬೇಕು. ಜುಲೈ 26ರಂದು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಅಧಿವೇಶನದಲ್ಲೂ ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

‘ಇಳುವರಿ ಕುಂಠಿತದ ಕಾರಣ ಪತ್ತೆಗೆ ಪ್ರಯತ್ನ’

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸೀಮಾ ಮಾತನಾಡಿ ತಾಲ್ಲೂಕಿನ ತೆಂಗು ಬೆಳೆಗಾರರು ಸಂಕಷ್ಟದಲ್ಲಿರುವುದನ್ನು ಗಮನಿಸಿ ಜಿಲ್ಲೆಯ ಅಧಿಕಾರಿಗಳ ತಂಡಗಳನ್ನು ಒಳಗೊಂಡತೆ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರದ ಕಾಸರಗೋಡಿನ ವಿಜ್ಞಾನಿಗಳನ್ನು ಕರೆಸಿಕೊಂಡು ಕೆ.ವೆಂಕಟಾಪುರ ಬೈರನಾಯಕನಹಳ್ಳಿ ನಾಗತೀಹಳ್ಳಿ ಜಾಜೂರು ಹಿರಿಯೂರು ಸೇರಿ ಹಲವು ಗ್ರಾಮಗಳ ತೆಂಗು ಬೆಳೆಗಳ ಪ್ರದೇಶಕ್ಕೆ ಭೇಟಿ ಮಾಡಿಸಿ ಇಳುವರಿ ಕುಂಠಿತದ ಕಾರಣ ಏನೆಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು. ತೋಟಗಾರಿಕೆ ಅಧಿಕಾರಿ ಶಿವಕುಮಾರ್‌ ಸೇರಿ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.