ಅರಸೀಕೆರೆ (ಹಾಸನ): ತಾಲ್ಲೂಕಿನಲ್ಲಿ ಉಂಡೆ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹23 ಸಾವಿರಕ್ಕೆ ಏರಿದೆ. ಆದರೆ ಬೆಳೆಗಾರರು ಸಂತಸಪಡದ ಸನ್ನಿವೇಶದಲ್ಲಿದ್ದಾರೆ. ಏಕೆಂದರೆ ಮಾರಾಟ ಮಾಡಲು ಅವರ ಬಳಿ ಕೊಬ್ಬರಿಯೇ ಇಲ್ಲ.
ಮಳೆಯ ಕೊರತೆ, ನುಸಿ ಪೀಡೆ ಸೇರಿ ನಾನಾ ತೊಂದರೆಗಳ ಜೊತೆಗೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದರು. ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾಣುತ್ತಿದೆ. ಆದರೆ, ಇರುವ ತೆಂಗನ್ನು ನಾಫೆಡ್ ಮೂಲಕ ₹13,500 ದರದಲ್ಲಿ ಮಾರಾಟ ಮಾಡಿರುವುದರಿಂದ ಬೆಲೆ ಏರಿಕೆಯ ಲಾಭ ಸಿಗದಂತಾಗಿದೆ.
10 ತಿಂಗಳ ಹಿಂದೆ ₹10 ಸಾವಿರದ ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ, ಮೇ ತಿಂಗಳಿಂದ ಏರುಮುಖದಲ್ಲಿ ಸಾಗುತ್ತಿದೆ. ಮಂಗಳವಾರ (ಜೂನ್ 10)ದ ಟೆಂಡರ್‌ನಲ್ಲಿ ಬೆಲೆ ಕ್ವಿಂಟಲ್‌ಗೆ ₹23 ಸಾವಿರದ ಗಡಿದಾಟುವ ಮೂಲಕ ದಾಖಲೆ ಬರೆದಿದೆ.
‘ಬೆಲೆ ಕುಸಿತದಿಂದ ಕಂಗಾಲಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸಿತ್ತು. ಆಗ, ಸಿಕ್ಕಷ್ಟು ಸಿಗಲಿ ಎಂದು ರಾತ್ರಿಯಿಡೀ ಸರದಿಯಲ್ಲಿ ನಿಂತು ನೋಂದಣಿ ಮಾಡಿದ್ದೆವು. ಅಷ್ಟೇ ಕಷ್ಟಪಟ್ಟು ಮಾರಿದ್ದೆವು. ಈಗ ಪಶ್ಚಾತ್ತಾಪ ಪಡುವಂತಾಗಿದೆ’ ಎಂದು ಗಂಡಸಿಯ ರೈತ ವಿರೂಪಾಕ್ಷಪ್ಪ ಹೇಳುತ್ತಾರೆ.
‘ಎಳೆನೀರು ಮಾರಾಟಕ್ಕೆ ಆದ್ಯತೆ ಸಿಕ್ಕಿರುವುದು ಹಾಗೂ ಕೊಬ್ಬರಿಯನ್ನು ನಾಫೆಡ್‌ಗೆ ಮಾರಿರುವುದರಿಂದ ಮಾರುಕಟ್ಟೆಗೆ ಬೇಡಿಕೆಯಷ್ಟು ಕೊಬ್ಬರಿ ಬರುತ್ತಿಲ್ಲ. ಮತ್ತೊಂದೆಡೆ ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿ ಉತ್ತರ ಭಾರತದಲ್ಲಿ ಚಳಿಗಾಲ ಆರಂಭವಾಗುತ್ತಿದ್ದು, ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ದರ ಹೆಚ್ಚುತ್ತಿದೆ’ ಎನ್ನುತ್ತಾರೆ ಇಲ್ಲಿನ ವರ್ತಕರು.
ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಏರಿಕೆಯ ಲಾಭ ನಿಜವಾದ ರೈತರಿಗೆ ಸಿಗುತ್ತಿಲ್ಲ. ಕೊಬ್ಬರಿಯನ್ನು ದಾಸ್ತಾನುಳ್ಳ ಮಧ್ಯವರ್ತಿಗಳು ಹಾಗೂ ನಾಫೆಡ್‌ಗೆ ಮಾತ್ರ ಲಾಭ ಸಿಗುವಂತಾಗಿದೆಬೈರೇಶ್ ಕೊಬ್ಬರಿ ಬೆಳೆಗಾರ
ಕೊಬ್ಬರಿ ಸೇರಿ ರೈತರ ಉತ್ಪನ್ನಗಳಿಗೆ ಸರ್ಕಾರ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ಕಾಯ್ದುಕೊಳ್ಳದೇ ಹೋದರೆ ರೈತನ ಬೆವರು ಶ್ರಮ ಮತ್ತಾರಿಗೋ ಲಾಭ ತಂದುಕೊಡುತ್ತದೆಕನಕಂಚೇನಹಳ್ಳಿ ಪ್ರಸನ್ನ ಕುಮಾರ್ ರೈತ ಸಂಘದ ಜಿಲ್ಲಾ ಘಟಕದ ಸಂಚಾಲಕ
ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಇನ್ನೂ ಹೆಚ್ಚುವ ಸಾಧ್ಯತೆ ಇದೆ. ರೈತರು ಸ್ವಲ್ಪ ಕಾಯ್ದು ನಂತರ ಮಾರುಕಟ್ಟೆಗೆ ತಂದರೆ ಹೆಚ್ಚಿನ ಲಾಭ ಪಡೆಯಬಹುದುಸಿದ್ದರಂಗ ಸ್ವಾಮಿ ಅರಸೀಕೆರೆ ಎಪಿಎಂಸಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.