ADVERTISEMENT

ದರ ಹೆಚ್ಚಿಸಿಕೊಂಡ ತೆಂಗಿನ ಉತ್ಪನ್ನ

ಎಳನೀರು, ತೆಂಗಿನ ಕಾಯಿ, ಕೊಬ್ಬರಿ, ಕರಟ, ಸಿಪ್ಪೆಯ ಬೆಲೆಯೂ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:56 IST
Last Updated 12 ಜುಲೈ 2025, 4:56 IST
ಮನೆಗಳಲ್ಲಿ ಸಂಗ್ರಹಿಸಿದ್ದ ತೆಂಗಿನ ಚಿಪ್ಪುಗಳನ್ನು ಕೊಂಡು ಹಿರೀಸಾವೆ ಗೂಡ್ಸ್ ಆಟೋದಲ್ಲಿ ಸಾಗಣೆ ಮಾಡುತ್ತಿರುವುದು.
ಮನೆಗಳಲ್ಲಿ ಸಂಗ್ರಹಿಸಿದ್ದ ತೆಂಗಿನ ಚಿಪ್ಪುಗಳನ್ನು ಕೊಂಡು ಹಿರೀಸಾವೆ ಗೂಡ್ಸ್ ಆಟೋದಲ್ಲಿ ಸಾಗಣೆ ಮಾಡುತ್ತಿರುವುದು.   

ಹಿರೀಸಾವೆ: ಕೊಬ್ಬರಿಯ ಬೆಲೆ ಏರಿಕೆಯಾಗುತ್ತಿದ್ದಂತೆ, ತೆಂಗಿನ ಇತರೆ ಉತ್ಪನ್ನಗಳ ದರವು ಹೆಚ್ಚಳವಾಗಿದೆ.

ಕೊಬ್ಬರಿ ಬೆಲೆಯ ಕುಸಿತದಿಂದ ಕಂಗಲಾಗಿದ್ದ ರೈತರು, ಈಗ ಕೊಬ್ಬರಿ ಜೊತೆಗೆ ಕಾಯಿ, ಚಿಪ್ಪು, ಕಾಯಿ ಸಿಪ್ಪೆ (ಕಾಯಿ ಮೊಟ್ಟೆ) ಬೆಲೆ ಕೂಡ ಏರಿಕೆ ಆಗಿರುವುದು ತೆಂಗು ಬೆಳೆಯುವ ರೈತರಲ್ಲಿ ಖುಷಿಯನ್ನು ಇಮ್ಮಡಿಗೊಳಿಸಿದೆ. ಆದರೆ, ಈ ವರ್ಷ ಫಸಲು ಕಡಿಮೆಯಾಗಿರುವುದು ಬೇಸರ ಮೂಡಿಸಿದೆ.

ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯು ಎರಡು ತಿಂಗಳಲ್ಲಿ ಕ್ವಿಂಟಲ್‌ಗೆ ₹25ಸಾವಿರದಿಂದ ₹31 ಸಾವಿರದವರೆಗೆ ಮಾರಾಟವಾಗಿದೆ. ಇದ್ದಿಲಿಗೆ ಬಳಕೆಯಾಗುವ ತೆಂಗಿನ ಒಂದು ಜೊತೆ ಚಿಪ್ಪಿಗೆ ಕಳೆದ ವರ್ಷ ಐವತ್ತು ಪೈಸೆ ಇತ್ತು, ಇದೀಗ ₹2.50 ರಿಂದ ₹ 3 ಕ್ಕೆ ಮಾರಾಟವಾಗುತ್ತಿದೆ. ಚಿಪ್ಪಿನ ಬೆಲೆ ಹೆಚ್ಚುತ್ತಿದ್ದಂತೆ, ಅಡುಗೆ ಬಳಸಿದ ಕಾಯಿಯ ಚಿಪ್ಪನ್ನು ಮಹಿಳೆಯರು ಸಂಗ್ರಹಿಸಿ ಇಟ್ಟು, ಮಾರಾಟ ಮಾಡುತ್ತಿದ್ದಾರೆ.

ADVERTISEMENT

ಕಾಯಿ ಸಿಪ್ಪೆಯನ್ನು ಕಳೆದ ವರ್ಷ ಕೇಳುವವರು ಇಲ್ಲದೆ, ಕೊಬ್ಬರಿ, ಕಾಯಿ ಸುಲಿದ ನಂತರ ಸಾವಿರಾರು ಸಿಪ್ಪೆಗಳನ್ನು ರಸ್ತೆ ಪಕ್ಕ, ತೋಟಗಳ ಬದಿಗೆ ಹಾಕುತ್ತಿದ್ದರು. ಈಗ ಒಂದು ಸಾವಿರ ಸಿಪ್ಪೆಯ (ಮಟ್ಟೆ) ಬೆಲೆ ₹ 800 ರಿಂದ ₹ 1 ಸಾವಿರ ದಾಟಿದೆ.

ನರ್ಸರಿಯಲ್ಲಿ ಗಿಡಗಳನ್ನು ಬೆಳೆಸಲು ಬಳಸುವ ಗೊಬ್ಬರ ಮಾಡಲು ಹಾಗೂ ನಾರಿನ ಹಾಸಿಗೆ (ಕಾಯರ್ ಬೆಡ್) ತಯಾರು ಮಾಡಲು ತಮಿಳುನಾಡು ರಾಜ್ಯಕ್ಕೆ ಹೆಚ್ಚಾಗಿ ಸಿಪ್ಪೆ ಪೂರೈಕೆ ಆಗುತ್ತಿರುವುದರಿಂದ ಇದರ ಬೆಲೆಯೂ ಹೆಚ್ಚಿದೆ.

ಸಂತೆಗಳಲ್ಲಿ ತೆಂಗಿನ ಕಾಯಿ ಕೆ.ಜಿ.ಗೆ ₹ 60 ರಿಂದ ₹ 70 ಆಗಿದೆ. ಶ್ರಾವಣ ಮಾಸದಲ್ಲಿ ಹಬ್ಬಗಳು, ಶುಭ ಸಮಾರಂಭಗಳು ಪ್ರಾರಂಭವಾಗಲಿದ್ದು, ಕಾಯಿ ಬೆಲೆ ಇನ್ನೂ ಹೆಚ್ಚಬಹುದು ಎನ್ನುತ್ತಾರೆ ಸ್ಥಳಿಯ ವ್ಯಾಪಾರಿಗಳು.

ತೆಂಗು ಬೆಳೆಯೂ ರೈತರಿಗೆ ಕಲ್ಪವೃಕ್ಷವಾದರೆ, ಇದರ ಉತ್ಪನ್ನಗಳ ಬೆಲೆ ಏರಿಕೆಯಿಂದ ನಿತ್ಯ ಬಳಸುವ ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ.

ಮನೆಯಲ್ಲಿ ಅಡುಗೆ ಬಳಸಿದ ತೆಂಗಿನ ಕಾಯಿ ಚಿಪ್ಪನ್ನು ಹಿರೀಸಾವೆ ವ್ಯಾಪಾರಿ ಲೆಕ್ಕ ಮಾಡಿ ಕೊಳ್ಳುತ್ತಿರುವುದು.

- ‘ತೆಂಗಿನ ಫಸಲು ಕಡಿಮೆ’

ಕಳೆದ ವರ್ಷ ಎಳನೀರಿಗೆ ಉತ್ತಮ ಬೆಲೆ ಇತ್ತು ಎಂದು ಬಹುತೇಕ ರೈತರು ಎಳನೀರು ಮಾರಾಟ ಮಾಡಿದ್ದಾರೆ. 2022–23 ರಲ್ಲಿ ಹೆಚ್ಚು ಮಳೆಯಾಗಿದ್ದು ತೇವಾಂಶ ಹೆಚ್ಚಾಗಿ ತೆಂಗಿನಲ್ಲಿ ಹಲವು ರೋಗಗಳು ಕಾಣಿಸಿಕೊಂಡಿವೆ. ಈ ವರ್ಷ ತೆಂಗಿನ ಫಸಲು ಕಡಿಮೆಯಾಗಿದೆ. ಇದರಿಂದ ತೆಂಗಿನ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ. ‘ಎಳನೀರನ್ನು ಮೊದಲು ಬೇಸಿಗೆ ಸಮಯದಲ್ಲಿ ಮಾತ್ರ ಕೀಳುತ್ತಿದ್ದರು. ಬೇಡಿಕೆ ಹೆಚ್ಚಾಗಿರುವುದರಿಂದ ಈಗ ವರ್ಷ ಪೂರ್ತಿ ವ್ಯಾಪಾರಸ್ಥರು ರೈತರಿಂದ ತೋಟದಲ್ಲಿ ಒಂದು ಎಳನೀರನ್ನು ₹ 40ಕ್ಕೆ ಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಹಿರೀಸಾವೆ ರೈತ ಕಿಟ್ಟಿ. ಇಲ್ಲಿಂದ ಹೊರರಾಜ್ಯಗಳಿಗೆ ಸರಬರಾಜು ಮಾಡುವ ಮಧ್ಯವರ್ತಿಗಳು ಕಳೆದ ವರ್ಷ 25 ಸಾವಿರದಿಂದ 50 ಸಾವಿರ ಕಾಯಿ ಸಿಪ್ಪೆಯನ್ನು ಸಂಗ್ರಹಿಸಿ ಇಟ್ಟಿದ್ದರು. ಈಗ ಹೆಚ್ಚಿನ ಬೆಲೆಗೆ ಮಾರಾಟ ಮಾಡುವು ಮೂಲಕ ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.