ADVERTISEMENT

ಹಾಸನ: ₹ 5.10 ಲಕ್ಷ ಮೌಲ್ಯದ ಎಳನೀರು ದರೋಡೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 6:43 IST
Last Updated 4 ಸೆಪ್ಟೆಂಬರ್ 2023, 6:43 IST
ಎಳನೀರು
ಎಳನೀರು   

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಬಳಿ ಶನಿವಾರ ಸಂಜೆ ಲಾರಿ ಅಡ್ಡಗಟ್ಟಿದ ದುಷ್ಕರ್ಮಿಗಳು, ₹5.10 ಲಕ್ಷ ಮೌಲ್ಯದ 15,200 ಎಳೆನೀರು ಕಾಯಿಗಳನ್ನು ದರೋಡೆ ಮಾಡಿದ್ದಾರೆ.

ಶಾಂತಮ್ಮ ಎಂಬುವವರು ಖರೀದಿಸಿದ್ದ ಕಾಯಿಗಳನ್ನು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ರಾಜ್‍ಸಿಂಗ್ ಅವರ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಶ್ರವಣಬೆಳಗೊಳದಿಂದ ಜುಟ್ಟನಹಳ್ಳಿ ಬಾರೆ ಮೂಲಕ ಹಿರಿಸಾವೆಗೆ ಬಂದಿದ್ದು, ಹಿಂದಿನಿಂದ ಕಾರಿನಲ್ಲಿ ಬಂದಿದ್ದ ನಾಲ್ಕೈದು ಜನರ ತಂಡ, ಹಿರೀಸಾವೆ ರೈಲ್ವೆ ಸೇತುವೆ ಬಳಿ ಲಾರಿಯನ್ನು ಅಡ್ಡಗಟ್ಟಿದೆ.

ರಾಜ್‌ಸಿಂಗ್ ಅವರಿಗೆ ಚಾಕು ತೋರಿಸಿ, ಹೇಳಿದ ಕಡೆ ಲಾರಿ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. 15 ರಿಂದ 20 ಕಿ.ಮೀ. ದೂರ ಬಂದು, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಲಾರಿಯನ್ನು ನಿಲ್ಲಿಸಿ, ರಾಜ್‌ಸಿಂಗ್ ಬಳಿ ಇದ್ದ ₹ 40ಸಾವಿರ ಕಿತ್ತುಕೊಂಡಿದ್ದಾರೆ. ರಾಜ್‍ಸಿಂಗ್ ಮತ್ತು ಲಾರಿ ಕ್ಲೀನರ್ ಅಜಯ್ ಸಿಂಗ್ ಅವರನ್ನು ಕಾರಿನಲ್ಲಿ ಕೂರಿಸಿದ್ದಾರೆ.

ADVERTISEMENT

ಈ ಮಧ್ಯೆ ಮತ್ತೊಂದು ಲಾರಿಯನ್ನು ತಂದು, ಎಲ್ಲ ಎಳನೀರು ಕಾಯಿಗಳನ್ನು ಲೋಡ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.