ADVERTISEMENT

ಮಲೆನಾಡಿನಲ್ಲಿ ಮೋಡದ ‘ಆತಂಕ’

ಕಾಫಿ ಕೊಯ್ಲು, ಭತ್ತದ ಕಟಾವು ಬಾಕಿ: ಮಳೆ ಬಂದರೆ ಮತ್ತಷ್ಟು ನಷ್ಟದ ಭೀತಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 4:37 IST
Last Updated 10 ಜನವರಿ 2026, 4:37 IST
ಹೆತ್ತೂರು ಭಾಗದಲ್ಲಿ ಕಾಫಿ ಗಿಡಗಳಲ್ಲಿ ಹಣ್ಣಾಗಿರುವುದು
ಹೆತ್ತೂರು ಭಾಗದಲ್ಲಿ ಕಾಫಿ ಗಿಡಗಳಲ್ಲಿ ಹಣ್ಣಾಗಿರುವುದು   

ಹೆತ್ತೂರು: ಮಲೆನಾಡು ಭಾಗವಾದ ಹೆತ್ತೂರು, ಯಸಳೂರು ಹೋಬಳಿಯಲ್ಲಿ ಬಿಸಿಲು ಹಾಗೂ ಅಸಾಧ್ಯ ಚಳಿಯ ವಾತಾವರಣದ ಮಧ್ಯೆ ಕಳೆದೆರಡು ದಿನಗಳಿಂದ ಇದ್ದಕ್ಕಿದ್ದಂತೆ ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡಿದ್ದು ಬೆಳೆಗಾರರಲ್ಲಿ ಆತಂಕ ಶುರುವಾಗಿದೆ.

ಬುಧವಾರ ಬೆಳಿಗ್ಗೆಯಿಂದಲೇ ಆರಂಭವಾದ ಮೋಡ ಕವಿಯುವಿಕೆ, ಮಧ್ಯಾಹ್ನದವರೆಗೂ ಬಿಸಿಲು ನೆಲಕ್ಕೆ ತಾಗದಂತೆ ಮಾಡಿತು. ಕವಿದ ಮೋಡಗಳು ಮುಂಗಾರಿನಂತಹ ವಾತಾವರಣ ಸೃಷ್ಟಿಸಿದ್ದವು. ಗುರುವಾರ ಸ್ವಲ್ಪ ಬಿಸಿಲಿನ ವಾತಾವರಣವಿತ್ತು. ಆದರೆ, ಮೋಡ ಮುಸುಕಿದ ವಾತಾವರಣ ಕಾಫಿ ಬೆಳೆಗಾರರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

ಮಲೆನಾಡು ಭಾಗದಲ್ಲಿ ಇನ್ನೂ ಭತ್ತ ಕಟಾವು ಹಾಗೂ ಕಾಫಿ ಕೊಯ್ಲು ಮುಗಿದಿಲ್ಲ. ಇನ್ನೂ ಹಲವು ಕಡೆ ಕೊಯ್ಲಿಗೆ ಬಾಕಿ ಇದೆ. ಕಾಫಿ ಕೊಯ್ದು ಆಗಿರುವ ಕಡೆಗಳಲ್ಲಿ ಇನ್ನೂ ಕಾಫಿ ಒಣಗಿಲ್ಲ. ಈ ಹಂತದಲ್ಲಿ ಮಳೆ ಬಂದರೆ ಅಪಾರ ನಷ್ಟವಾಗುವ ಭೀತಿ ಎದುರಾಗಿದೆ.

ADVERTISEMENT

ಹಲವೆಡೆ ರೊಬಸ್ಟ ಕಾಫಿ ಇನ್ನೂ ಹಣ್ಣಾಗಿಲ್ಲ. ಬಿಸಿಲು ಬಾರದೇ ಈ ರೀತಿ ಮೋಡ ಕವಿದ ವಾತಾವರಣ ಇದ್ದರೆ ಹಣ್ಣಾಗುವುದೂ ತಡವಾಗಲಿದೆ. ಜೊತೆಗೆ ಮೋಡ ಕವಿದ ವಾತಾವರಣದಿಂದ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲಾರದೇ ಪರದಾಡಬೇಕಾಗುತ್ತದೆ. ಹೀಗಾಗಿ, ಮಳೆ ಇರಲಿ, ಮೋಡ ಕವಿದ ವಾತಾವರಣವೂ ಬೆಳೆಗಾರರ ಪಾಲಿಗೆ ನಷ್ಟ ತರಿಸುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಬೆಳೆಗಾರರು.

ಅಸ್ವಾಭಾವಿಕ ಗಾಳಿ ತಿರುಗುವಿಕೆಯ ವ್ಯಾಪ್ತಿ ಹೆಚ್ಚಾಗಿ, ಬಂಗಾಳಕೊಲ್ಲಿಯ ಕಡೆಯಿಂದ ಗಾಳಿಯು ಬೀಸುತ್ತಿದ್ದು, ಅರಬ್ಬಿ ಸಮುದ್ರದ ಕೇರಳ ಕರಾವಳಿ ಸಮೀಪ ವಾಯುಭಾರ ಕುಸಿತದಿಂದಾಗಿ ಮೋಡ ಕವಿದ ವಾತಾವರಣ ಉಂಟಾಗಿದೆ. ಸದ್ಯದಲ್ಲೇ ಬಿಸಿಲು ಮೂಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಂದು ವೇಳೆ ಮಳೆಯಾದರೆ ಗಿಡದಲ್ಲಿರುವ ಕಾಫಿ ಉದುರಲಿದ್ದು, ಕೊಳೆಯಲಿದೆ. ಕಾಫಿ ಹಣ್ಣು ಬಿರಿದು ನೆಲಕಚ್ಚಲಿದೆ. ಆಗ ಬಿದ್ದ ಕಾಫಿಯನ್ನು ತೆಗೆಯುವುದು ಇನ್ನೂ ಕಷ್ಟದ ಕೆಲಸ. ಇದಕ್ಕೆ ಹೆಚ್ಚಿನ ಕೂಲಿ ನೀಡಬೇಕಾಗುತ್ತದೆ. ಒಂದು ವೇಳೆ ಹಾಗೆ ಬಿಟ್ಟರೆ, ರೋಗಕ್ಕೆ ಕಾರಣವಾಗಲಿದೆ.

ಮತ್ತೊಂದೆಡೆ ಕಾಫಿ ಕೊಯ್ದು ಒಣಗು ಹಾಕಿರುವುದು ಸಹ ಮಳೆಯಿಂದ ನಷ್ಟವಾಗಲಿದೆ. ಮೋಡ ಕವಿದ ವಾತಾವರಣದಿಂದ ಒಣಗುವುದೂ ನಿಧಾನವಾಗಲಿದೆ. ಯಾವಾಗ ಮಳೆ ಹನಿ ಬೀಳುವುದೋ ಎಂಬ ಆತಂಕದಲ್ಲೇ ಬೆಳೆಗಾರರು ಇರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಇಷ್ಟೆಲ್ಲ ಆತಂಕಗಳ ಮಧ್ಯೆ ಹೆಚ್ಚಿನ ಮಳೆಯಾಗದು, ಕವಿದ ಮೋಡಗಳು ತಿಳಿಯಾಗುವ ನಿರೀಕ್ಷೆ ಇದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದು ಕೊಂಚ ಸಮಾಧಾನಕ್ಕೆ ಕಾರಣವಾಗಿದ್ದರೂ, ನಿತ್ಯ ಮೋಡದ ಕವಿದ ವಾತಾವರಣ ನೋಡಿದ ಬೆಳೆಗಾರರ ಆತಂಕ ಮಾತ್ರ ದೂರವಾಗಿಲ್ಲ.

ಹೆತ್ತೂರು ಭಾಗದಲ್ಲಿ ಕಾಫಿ ಗಿಡದಲ್ಲಿ ಹಣ್ಣಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.