ADVERTISEMENT

ಮಲೆನಾಡಿನಲ್ಲಿ ಮಳೆ: ಕಾಫಿ ಕೊಯ್ಲಿಗೆ ತೊಡಕು

ಮಳೆಯಿಂದ ಬೆಳೆ ರಕ್ಷಿಸಲು ರೈತರ ‍ಪರದಾಟ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:41 IST
Last Updated 16 ಜನವರಿ 2026, 7:41 IST
ಹೆತ್ತೂರು ಭಾಗದಲ್ಲಿ ಕಾಫಿ ಹಣ್ಣಾಗಿದ್ದು, ಕಾರ್ಮಿಕರ ಕೊರತೆಯಿಂದ ಕೊಯ್ಲು ಆಗದೇ ಉಳಿದಿದೆ.
ಹೆತ್ತೂರು ಭಾಗದಲ್ಲಿ ಕಾಫಿ ಹಣ್ಣಾಗಿದ್ದು, ಕಾರ್ಮಿಕರ ಕೊರತೆಯಿಂದ ಕೊಯ್ಲು ಆಗದೇ ಉಳಿದಿದೆ.   

ಹೆತ್ತೂರು: ಮಲೆನಾಡು ಭಾಗವಾದ ಹೆತ್ತೂರು, ಯಸಳೂರು ಹೋಬಳಿಯ ಸುತ್ತಮುತ್ತ ಸಂಜೆ ಒಂದು ಗಂಟೆಗೂ ಅಧಿಕ ಕಾಲ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ಅಕಾಲಿಕ ಮಳೆ ಕೃಷಿ ವಲಯದಲ್ಲಿ ಆತಂಕ ಮೂಡಿಸಿದೆ.

ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಕಾಫಿ, ಭತ್ತದ ಕೊಯ್ಲು ಆರಂಭಗೊಂಡಿದ್ದು, ರೈತರು ಬಹುತೇಕ ಬೆಳೆಗಳನ್ನು ಒಣಗಲು ಅಂಗಳದಲ್ಲಿ ಹಾಕಿದ್ದರು. ದಿಢೀರ್ ಮಳೆಯಿಂದಾಗಿ ಬೆಳೆಗಳನ್ನು ರಕ್ಷಿಸಲು ಹೆಣಗಾಡಿದರು.

ಕೊಯ್ಲಿನ ಹಂತದಲ್ಲಿ ಸುರಿದ ಮಳೆಯಿಂದಾಗಿ ಮುಂದಿನ ವಾರ ಕಾಫಿ ಗಿಡದಲ್ಲಿ ಹೂವು ಅರಳಲಿವೆ. ಮೂರು ದಿನದ ನಂತರ ಕಾಫಿ ಕೊಯ್ಲು ನಿಲ್ಲಿಸಬೇಕಾದ ಅನಿವಾರ್ಯತೆ ಬೆಳೆಗಾರರಿಗೆ ಎದುರಾಗಿದೆ. ಕೆಲವು ದಿನಗಳಿಂದ ಕೊರೆಯುವ ಚಳಿ, ಮೋಡದ ವಾತಾವರಣ ಕಾಫಿ ಬೆಳೆಗಾರರನ್ನು ಆತಂಕಕ್ಕೆ ದೂಡಿತ್ತು.

ADVERTISEMENT

ರೋಬಸ್ಟಾ ಕಾಫಿ ಇನ್ನೂ ಹಲವೆಡೆ ಹಣ್ಣಾಗಿಲ್ಲ. ಕಾಫಿ, ಕೊಯ್ಲು ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಕಾಫಿ ಕಟಾವು ಕಾರ್ಯ ಇನ್ನೂ ಮುಗಿದಿಲ್ಲ. ಹೋಬಳಿಯಲ್ಲಿ ಆರೇಬಿಕಾ ಕಾಫಿ ಕೊಯ್ಲು ಬಹುತೇಕ ಮುಗಿದಿದೆ. ಕೊಯ್ಲು ಮಾಡಿರುವ ಕಾಫಿ ಬೀಜಗಳು ಒಣಗಲು ಇನ್ನೂ 10 ದಿನಗಳ ಕಾಲ ಜೋರು ಬಿಸಿಲು ಬೇಕಾಗಿದೆ. ಆದರೆ ವಾರದಾದ್ಯಂತ ಬಿಸಿಲು ಕಡಿಮೆ ಇದ್ದು, ಮೋಡ ಇರುವುದರಿಂದ ತೊಡಕಾಗಲಿದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

ಮೋಡ ಕವಿದ ವಾತಾವರಣ ಮುಂದುವರಿದರೆ, ರೋಬಸ್ಟಾ ಕಾಫಿ ಹಣ್ಣಾಗುವುದೂ ತಡವಾಗಲಿದೆ. ಹೀಗಾಗಿ, ಮಳೆ ಇರಲಿ, ಮೋಡ ಕವಿದ ಮೋಡ ವಾತಾವರಣವೂ ಬೆಳೆಗಾರರ ಪಾಲಿಗೆ ನಷ್ಟ ತರಿಸಿದೆ.

ಬೆಳೆಗಾರರು ವರ್ಷ ಪೂರ್ತಿ ದುಡಿದು, ಬೆಳೆ ಕಟಾವು ಮಾಡುವ ಸಮಯದಲ್ಲಿ ಅಕಾಲಿಕ ಮಳೆಯಿಂದ ಬೆಳೆಗಳು ಕೈಗೆ ಸಿಗದಂತಾಗಿವೆ. ಇದರಿಂದ ಬೆಳೆಗಾರರ ಆದಾಯಕ್ಕೆ ದೂಡ್ಡ ಪೆಟ್ಟು ಬಿದ್ದಾಗಿದೆ ಎಂದು ಹೆತ್ತೂರು ಗ್ರಾಮದ ಬೆಳೆಗಾರ ಸುರೇಶ್ ಎಚ್.ಎಂ. ತಿಳಿಸಿದರು.

ಮೋಡ ಕವಿದರೆ ರೋಬಸ್ಟಾ ಕಾಫಿ ಹಣ್ಣಾಗುವುದೂ ತಡ ಮೋಡದ ವಾತಾವರಣದಿಂದ ರೈತರಿಗೆ ಆತಂಕ 10 ದಿನಗಳ ಕಾಲ ಜೋರು ಬಿಸಿಲು ಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.