ADVERTISEMENT

‘ಸಿಂದಗಿಯಲ್ಲಿ ಕಾಂಗ್ರೆಸ್‌ ಮೂರನೇ ಸ್ಥಾನ’

ಕಾಂಗ್ರೆಸ್‌ ಸೋಲಿಸಲು ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿಲ್ಲ: ಎಚ್.ಡಿ.ಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 16:32 IST
Last Updated 9 ಅಕ್ಟೋಬರ್ 2021, 16:32 IST
ಹಾಸನದ ಮಾರನಹಳ್ಳಿ ಬಳಿ ಎತ್ತಿನ ಹೊಳೆ ಯೋಜನೆ ಕಾಮಗಾರಿ ಕುರಿತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕಾರ್ಯಪಾಲಕ ಎಂಜಿನಿಯರ್‌ ಆನಂದ್‌ ಮಾಹಿತಿ ನೀಡಿದರು. ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ನಿಸರ್ಗ ನಾರಾಯಣ ಸ್ವಾಮಿ, ಕೃಷ್ಣಾರೆಡ್ಡಿ, ಅಶ್ವಿನ್ ಕುಮಾರ್‌ ಇದ್ದಾರೆ
ಹಾಸನದ ಮಾರನಹಳ್ಳಿ ಬಳಿ ಎತ್ತಿನ ಹೊಳೆ ಯೋಜನೆ ಕಾಮಗಾರಿ ಕುರಿತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕಾರ್ಯಪಾಲಕ ಎಂಜಿನಿಯರ್‌ ಆನಂದ್‌ ಮಾಹಿತಿ ನೀಡಿದರು. ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ನಿಸರ್ಗ ನಾರಾಯಣ ಸ್ವಾಮಿ, ಕೃಷ್ಣಾರೆಡ್ಡಿ, ಅಶ್ವಿನ್ ಕುಮಾರ್‌ ಇದ್ದಾರೆ   

ಹಾಸನ: ‘ಹಾನಗಲ್‌ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಸಕಲೇಶಪುರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮೂರನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಸೋಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ ಎಂದು ಹೇಳುವವರು, ಅಭ್ಯರ್ಥಿ ಹಾಕಲು ಯೋಗ್ಯತೆ ಇಲ್ಲದೆ ಜೆಡಿಎಸ್‌ನಿಂದ ಅಶೋಕ್‌ಮನಗೂಳಿ ಅವರನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ’ ಎಂದು ಟೀಕಿಸಿದರು.

‘ರಾಷ್ಟ್ರೀಯ ಹೆದ್ದಾರಿ 75ರ ದೇವ ರಾಯಪಟ್ಟಣದಿಂದ ಸಕಲೇಶಪುರ ತಾಲ್ಲೂಕಿನ ಹೆಗ್ಗದ್ದೆವರೆಗೆ ರಸ್ತೆ ಹದಗೆಟ್ಟಿದ್ದು, ಪ್ರತಿದಿನ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವವರಿಗೆ ಸಾಕಷ್ಟು ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ
ಪ್ರಾಧಿಕಾರ ಚತುಷ್ಪಥ ರಸ್ತೆ ಕಾಮಗಾರಿ ಕೈಗೊಂಡಿದೆ. ಕಾಮಗಾರಿ ವೇಗ ನೋಡಿದರೆ ಇನ್ನು ಹತ್ತು ವರ್ಷವಾದರೂ ಪೂರ್ಣಗೊಳ್ಳುವುದಿಲ್ಲ. ಲೋಕೋಪ ಯೋಗಿ ಇಲಾಖೆ ಸಚಿವರು ಸ್ಥಳ ಪರಿಶೀಲನೆ ನಡೆಸಬೇಕು. ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಸಚಿವರು ಚರ್ಚಿಸಿ, ಭೂ ಸ್ವಾಧೀನ ಸಮಸ್ಯೆ ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಹಲವು ವರ್ಷ ಗಳಿಂದ ಕಾಡಾನೆ ಹಾವಳಿ ಇದೆ. ಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ ಆನೆ ಹಾವಳಿ ತಡೆಯುವ ನಿಟ್ಟಿನಲ್ಲಿ ರೈಲ್ವೆ ಹಳಿ ತಡೆಗೋಡೆ ನಿರ್ಮಾಣ ಸಂಬಂಧ ನೂರು ಕೋಟಿ ರೂಪಾಯಿ ಅನುದಾನ
ನೀಡಲಾಗಿತ್ತು. ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಸಹ ಈ ಬಗ್ಗೆ
ಪ್ರಸ್ತಾಪಿಸಿದ್ದಾರೆ. ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವುದು ಅತ್ಯಗತ್ಯ’ ಎಂದು ಹೇಳಿದರು.

‘ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ರೈತರ ಖಾತೆಗಳಿಗೆ ಬಂದ
ಹಾಲು ಮಾರಾಟದ ಹಣವನ್ನು ಬ್ಯಾಂಕಿನ ಸಾಲಕ್ಕೆ ಜಮಾ ಮಾಡಿಕೊಳ್ಳು ತ್ತಿರುವುದನ್ನು ಖಂಡಿಸಿದ
ಅವರು, ಜಿಲ್ಲಾಧಿಕಾರಿ ಕೂಡಲೇ ಬ್ಯಾಂಕ್ ಅಧಿಕಾರಿಯನ್ನು ಸಂಪರ್ಕಿಸಿ, ಸಾಲಕ್ಕೆ ಹಣ ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು’ ಎಂದರು.

‘‘ಜೆಡಿಎಸ್‌ ನಂಬಿಕೆಗೆ ಅರ್ಹವಲ್ಲ’ ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ ವಿಶ್ವಾಸ ದ್ರೋಹಿ ಎಂದ ಮೇಲೆ ಬೆಂಬಲ ನೀಡಿ ಎಂದು ನಮ್ಮ ಬಳಿ ಯಾಕೆ ಬರುತ್ತಾರೆ. ಆಕಸ್ಮಿಕವಾಗಿ ಶಾಸಕರಾಗಿದ್ದಾರೆ. ಜನರು ಅದೇ ರೀತಿ ವಾಪಸ್‌ ಕಳುಹಿಸುತ್ತಾರೆ. ಅವರ ಹೇಳಿಕೆಗೆಪ್ರಾಮುಖ್ಯತೆ ನೀಡಬಾರದು’ ಎಂದುಟೀಕಿಸಿದರು.

ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಚಿಂತಾಮಣಿ ಶಾಸಕ ಕೃಷ್ಣಾ ರೆಡ್ಡಿ, ತಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್,ಮಂಡ್ಯ ಶಾಸಕ ಎಂ. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀ ಕಂಠೇಗೌಡ, ಮರಿತಿಬ್ಬೇಗೌಡ, ಅಪ್ಪಾಜಿಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.