ADVERTISEMENT

ಜಾತಿನಿಂದನೆ ಪ್ರಕರಣ ದಾಖಲು: JDS ಮುಖಂಡ ಸಂತೋಷ್‌ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 13:27 IST
Last Updated 27 ಜನವರಿ 2025, 13:27 IST
ಅರಸೀಕೆರೆಯ ಪಿ.ಪಿ. ವೃತ್ತದಲ್ಲಿ ಜೆಡಿಎಸ್‌ ಮುಖಂಡ ಎನ್‌.ಆರ್. ಸಂತೋಷ್‌, ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು
ಅರಸೀಕೆರೆಯ ಪಿ.ಪಿ. ವೃತ್ತದಲ್ಲಿ ಜೆಡಿಎಸ್‌ ಮುಖಂಡ ಎನ್‌.ಆರ್. ಸಂತೋಷ್‌, ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು   

ಅರಸೀಕೆರೆ: ತಮ್ಮ ಹಾಗೂ ಬೆಂಬಲಿಗರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಜೆಡಿಎಸ್ ಮುಖಂಡ ಎನ್‌.ಆರ್. ಸಂತೋಷ್‌, ಭಾನುವಾರ ಮಧ್ಯರಾತ್ರಿಯಿಂದಲೇ ಇಲ್ಲಿನ ಪಿ.ಪಿ. ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಿಂದಾಗಿ ಸೋಮವಾರ ಮಧ್ಯಾಹ್ನ ಪ್ರತಿಭಟನೆ ಹಿಂಪಡೆದರು.

ಈ ವೇಳೆ ಮಾತನಾಡಿದ ಅವರು, ‘ಜನಪರ ಹೋರಾಟ ಮಾಡುತ್ತಿರುವ ನನ್ನ ಹಾಗೂ ಬೆಂಬಲಿಗರ ವಿರುದ್ಧ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ನಗರಸಭಾ ಅಧ್ಯಕ್ಷ ಎಂ. ಸಮೀವುಲ್ಲ ಅಟ್ರಾಸಿಟಿ ಪ್ರಕರಣ ದಾಖಲು ಮಾಡಿರುವುದು ಖಂಡನೀಯ. ಮಧ್ಯರಾತ್ರಿಯಿಂದ ಆಹೋರಾತ್ರಿ ಧರಣಿ ಆರಂಭಿಸಿದ್ದು, ಪೊಲೀಸ್ ಇಲಾಖೆಯ ಮಧ್ಯಸ್ಥಿಕೆಯಿಂದ ತಾತ್ಕಾಲಿಕವಾಗಿ ಧರಣಿ ಹಿಂಪೆಡೆಯಲಾಗಿದೆ’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ಹಗರಣಗಳು, ಕಳಪೆ ಕಾಮಗಾರಿಗಳು ಹಾಗೂ ನಗರಸಭೆಯ ಭ್ರಷ್ಟಾಚಾರ ಬಯಲು ಮಾಡುತ್ತಿರುವ ನನ್ನ ಹಾಗೂ ಬೆಂಬಲಿಗರ ಮೇಲೆ ಪ್ರಕರಣ ದಾಖಲಿಸಿ ನನ್ನ ದನಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ತಾಲ್ಲೂಕಿನ ಸೌರ ಹಗರಣ, ಜಾಜೂರಿನ 21 ಎಕರೆ ಲೇಔಟ್‌, ದಲಿತರು ಹಾಗೂ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ, ಮುದುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳೇ ಟ್ಯಾಂಕ್‌ಗೆ ಹೊಸ ಬಿಲ್‌, ಚಗಚಗೆರೆ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಹಗರಣ ಬಯಲಿಗೆ ಎಳೆದಿದ್ದು, ಸತ್ಯಾಂಶ ಎಲ್ಲಿ ಹೊರಗೆ ಬರುತ್ತದೆ ಎಂದು ಭಯಬಿದ್ದು ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾರೆ. ಹೋರಾಟದಿಂದ ಹಿಂದೆ ಸರಿಯುವ ಜಾಯಮಾನ ನನ್ನದಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಗರಣ ಹಾಗೂ ಭ್ರಷ್ಟಾಚಾರದ ಮಾಹಿತಿ ಕೇಳಿದರೆ, ಅಧಿಕಾರಿಗಳು ತಬ್ಬಿಬ್ಬು ಆಗುತ್ತಿದ್ದಾರೆ. ನಮಗೆ ಸಮಯವೇ ನೀಡುತ್ತಿಲ್ಲ. ಇದರ ಬಗ್ಗೆ ಲೋಕಾಯುಕ್ತಗೆ ದೂರು ನೀಡಲಾಗಿದೆ. ನಾಳೆಯಿಂದ ಪ್ರತಿ ಹಳ್ಳಿ ಹಳ್ಳಿಗಳಿಗೆ ಪಾದಯಾತ್ರೆ ಸಾಗಿ, ದಲಿತರ ಮನೆಯಲ್ಲಿ ಊಟ ಸೇವಿಸಿ, ನ್ಯಾಯ ಕೇಳುತ್ತೇವೆ. ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲ ಜೊತೆಗೂಡಿ ಗೂಂಡಾ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಏಳು ದಿನಗಳ ಹಿಂದೆ ನಗರಸಭೆಯ ಮುಂಭಾಗ ನ್ಯಾಯ ಕೇಳಿದ ನಮಗೆ, ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹೋರಾಟ ಪ್ರಾರಂಭಿಸಲಾಗಿದೆ. ಅಮರಣಾಂತ ಉಪವಾಸ ಸತ್ಯಾಗ್ರಹವೂ ಅರಂಭಿಸುತ್ತೇನೆ. ಬೇಕಿದ್ದರೆ ಪ್ರಾಣ ಇಲ್ಲಿಯೇ ಹೋಗಲಿ ನಾವೂ ಹೆದರುವುದಿಲ್ಲ’ ಎಂದು ಹೇಳಿದರು.

ನಂತರ ಡಿವೈಎಸ್ಪಿ ಲೋಕೇಶ್‌ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ಮಾತನಾಡಿ, ಅಟ್ರಾಸಿಟಿ ಪ್ರಕರಣ ಸಂಬಂಧ ತನಿಖೆ ನಡೆಸಿ, ವಿಚಾರ ತಿಳಿಸುವುದಾಗಿ ಹೇಳಿದರು. ಪೊಲೀಸರು ಕಾಲಾವಕಾಶ ಕೇಳಿದ್ದರಿಂದ ಸೋಮವಾರ ಮಧ್ಯಾಹ್ನ ಪ್ರತಿಭಟನೆ ಹಿಂಪೆಡಲಾಯಿತು.

Cut-off box - ಸಂತೋಷ್‌ ಸೇರಿ 14 ಮಂದಿ ವಿರುದ್ಧ ಪ್ರಕರಣ ನಗರಸಭೆ ಉಪಾಧ್ಯಕ್ಷ ಮನೋಹರ್‌ ಮೇಸ್ತ್ರೀ ನೀಡಿದ ದೂರಿನ ಹಿನ್ನೆಲೆಯಲ್ಲಿ ಜೆಡಿಎಸ್‌ ಮುಖಂಡ ಎನ್‌.ಆರ್‌. ಸಂತೋಷ್‌ ಸೇರಿ ಒಟ್ಟು 14 ಬೆಂಬಲಿಗರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಎನ್.ಆರ್. ಸಂತೋಷ್‌ ಮೊದಲ ಆರೋಪಿಯಾಗಿದ್ದು ಶಿವು ಶೇಖರ್‌ ಯಾದವ್‌ ದಂಡೂರು ರವಿ ಮೇಲಗಿರಿಯಪ್ಪ ಜಯರಾಂ ಎಸ್‌.ಎಂ.ಎಸ್‌. ಕುಮಾರ್‌ ಪವನ ಸುಮಿತ್‌ ಅಭಿ ತೇಜಾ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್‌ ಹರ್ಷವರ್ಧನ ಮತ್ತು ಉಮೇಶ್‌ಬೋವಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.