ADVERTISEMENT

ದೊಡ್ಡತಪ್ಪಲೆ ಬಳಿ ನಿರಂತರ ಭೂಕುಸಿತ: ಶಿರಾಡಿ ಮಾರ್ಗದ ಸಂಚಾರ ಅಸ್ತವ್ಯಸ್ತ

ಲಾರಿಯಲ್ಲೇ ಅಡುಗೆ, ಊಟ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 8:20 IST
Last Updated 3 ಆಗಸ್ಟ್ 2024, 8:20 IST
ಸಕಲೇಶಪುರ ತಾಲ್ಲೂಕಿನ ಆನೇಮಹಲ್‌ ಬಳಿ ಗುರುವಾರ ಸಂಜೆಯಿಂದ  ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿರುವುದು.
ಸಕಲೇಶಪುರ ತಾಲ್ಲೂಕಿನ ಆನೇಮಹಲ್‌ ಬಳಿ ಗುರುವಾರ ಸಂಜೆಯಿಂದ  ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿರುವುದು.   

ಸಕಲೇಶಪುರ: ‘ದೊಡ್ಡತಪ್ಪಲೆ ಬಳಿ ಆಗಾಗ್ಗೆ ಸಂಭವಿಸಿರುತ್ತಿರುವ ಭೂಕುಸಿತದಿಂದಾಗಿ ನಾಲ್ಕು ದಿನಗಳಿಂದ ರಸ್ತೆಯಲ್ಲಿಯೇ ಲಾರಿಗಳು ನಿಂತಿವೆ. ಊಟ, ತಿಂಡಿ, ನೀರು, ನಿದ್ರೆ, ಶೌಚಾಲಯ ವ್ಯವಸ್ಥೆ ಇಲ್ಲದೇ ನಮ್ಮ ಪಾಡು ನಾಯಿಪಾಡಾಗಿದೆ. ಆದಷ್ಟು ಬೇಗ ಶಿರಾಡಿ ಘಾಟ್‌ ಮಾರ್ಗದಲ್ಲಿ ಲಾರಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಿ’.

ಹೀಗೆಂದು ಅಂಗಲಾಚುತ್ತಿರುವುದು ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್‌ ಮಾರ್ಗದಲ್ಲಿ ನಿತ್ಯ ಸರಕು ಸಾಗಣೆ ಮಾಡುವ ಲಾರಿ ಚಾಲಕರು ಹಾಗೂ ಕ್ಲೀನರ್‌ಗಳು.

ಶುಕ್ರವಾರ ಬೆಳಿಗ್ಗೆ ಇಲ್ಲಿಯ ಬೈಪಾಸ್ ಹಾಗೂ ಆನೇಮಹಲ್‌ ಗ್ರಾಮದಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಕೆಲವು ಚಾಲಕರು, ಕ್ಲೀನರ್‌ಗಳು ರಸ್ತೆಯಲ್ಲಿಯೇ ಹಲ್ಲು ಉಜ್ಜುತ್ತಿದ್ದರೆ, ಆಂಧ್ರಪ್ರದೇಶದ ಚಾಲಕ ನಾಗೇಂದ್ರ ಲಾರಿಯೊಳಗೆ ಮಿನಿ ಸಿಲಿಂಡ್‌ ಸ್ಟೌನಲ್ಲಿ ಅಡುಗೆ ಮಾಡುತ್ತಿದ್ದರು.

ADVERTISEMENT

ಕೆಲವು ಚಾಲಕರು ಸುರಿಯುತ್ತಿದ್ದ ಮಳೆಯಲ್ಲಿಯೇ ನೆನೆಯುತ್ತಾ ದೋಣಿಗಾಲ್‌ ಕಡೆಯಿಂದ ಬರುತ್ತಿದ್ದ 112 ಪೊಲೀಸ್ ವಾಹನ ನಿಲ್ಲಿಸಿ, ‘ದೊಡ್ಡತಪ‍್ಪಲೆಯಲ್ಲಿ ಮಣ್ಣು ಕ್ಲಿಯರ್ ಆಯ್ತಾ. ನಮ್ಮ ಲಾರಿಗಳನ್ನು ಯಾವಾಗ ಬಿಡ್ತೀರಿ? ಏನಾದರೂ ಮಾಡಿ ಬೇಗ ಬಿಡಿ. ಮನೆ ಬಿಟ್ಟು ವಾರ ಆಯ್ತು’ ಎಂದು ಮಂಗಳೂರಿನ ಚಾಲಕ ಅಶ್ರಫ್‌ ಹಾಗೂ ಇತರರು ಕೇಳುತ್ತಿದ್ದರು.

ದೊಡ್ಡತಪ್ಪಲೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು, ಮಣ್ಣು ರಸ್ತೆಯ ಮೇಲೆ ಪದೇ ಪದೇ ಬೀಳುತ್ತಿರುವುದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ.

ನಿತ್ಯ 35 ಸಾವಿರಕ್ಕೂ ಹೆಚ್ಚು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಮಣ್ಣು ಕುಸಿತ ಸಮಸ್ಯೆಯಿಂದಾಗಿ ಪ್ರತಿ ಅರ್ಧ, ಒಂದು ಗಂಟೆಗೊಮ್ಮೆ ಸಂಚಾರ ಸಂಪೂರ್ಣ ಬಂದ್ ಆದರೆ, ಒಂದು ಕಡೆ ವಾಹನಗಳನ್ನು ಬಿಟ್ಟು ಮತ್ತೊಂದು ಕಡೆ ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಲಾರಿಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.

‘ಬಳ್ಳಾರಿಯಿಂದ ಮಂಗಳೂರಿಗೆ ಸಿಮೆಂಟ್‌ ತರಲು ಹೋಗುತ್ತಿದ್ದೇವೆ. ಹಾಸನದ ಬೈಪಾಸ್‌ನಲ್ಲಿಯೇ ಎರಡು ದಿನ ನಿಲ್ಲಿಸಿದ್ದರು. ಪೊಲೀಸರನ್ನು ಕಾಡಿ ಬೇಡಿಕೊಂಡು ಗುರುವಾರ ರಾತ್ರಿ ಸಕಲೇಶಪುರ ಬೈಪಾಸ್‌ಗೆ ಬಂದಿದ್ದೇವೆ. 13 ಗಂಟೆಯಿಂದ ರಸ್ತೆಯಲ್ಲಿಯೇ ಇದ್ದೇವೆ. ಮೂರು ದಿನಗಳಿಂದ ಊಟ, ತಿಂಡಿಗೆ ಸಮಸ್ಯೆ ಆಗಿದೆ’ ಎಂದು ಆಂಧ್ರಪ್ರದೇಶದ ಚಾಲಕ ನಾಗಾರ್ಜುನ ಸಮಸ್ಯೆ ಹೇಳಿಕೊಂಡರು.

‘ಗಾಡಿಯನ್ನು ಈಗ ಬಿಡಬಹುದು, ಆಗ ಬಿಡಬಹುದು ಎಂದು ನಿದ್ರೆ ಸಹ ಮಾಡದೇ ರಸ್ತೆ ನೋಡುತ್ತ ಕುಳಿತುಕೊಂಡಿದ್ದೇವೆ. ಸ್ವಲ್ಪ ರೇಷನ್ ಇತ್ತು. ಹೇಗೋ ಗಾಡಿಯಲ್ಲೇ ಅನ್ನ– ಸಾರು ಮಾಡಿಕೊಂಡು ತಿನ್ನುತ್ತಿದ್ದೇವೆ’ ಎಂದು ತಿಳಿಸಿದರು.

‘ಬಳ್ಳಾರಿಯಿಂದ ಮಂಗಳೂರಿಗೆ ಸಿಮೆಂಟ್‌ ಸಾಗಣೆ ಮಾಡುತ್ತಿದ್ದೇವೆ. ನಾಲ್ಕು ದಿನಗಳಲ್ಲಿ ಹೋಗಿ ಬರುತ್ತೇವೆ. ಇದೀಗ 9 ದಿನಗಳಿಂದ ರಸ್ತೆಯಲ್ಲಿಯೇ ಬಾಕಿಯಾಗಿದ್ದೇವೆ. ಹೋಗುವಾಗಲೂ ರಸ್ತೆ ಬಂದ್‌, ಬರುವಾಗಲೂ ಶಿರಾಡಿ ಬಂದ್ ಆಗಿ ಸಕಲೇಶಪುರದಲ್ಲಿ 18 ಗಂಟೆಯಿಂದ ರಸ್ತೆಯಲ್ಲಿಯೇ ಇದ್ದೇವೆ’ ಎಂದು ಚಾಲಕ ಅಶ್ರಫ್‌ ತಿಳಿಸಿದರು.

ನಾನು ಪಕ್ಕದ ಪುತ್ತೂರಿನವ. ಸಕಲೇಶಪುರ–ಹೆಗ್ಗದ್ದೆ ನಡುವೆ ನಾಲ್ಕು ಪಥದ ರಸ್ತೆ ಕಾಮಗಾರಿ ಶುರು ಮಾಡಿದ ಮೇಲೆ ಪ್ರತಿ ವರ್ಷದ ಮಳೆಗಾಲದಲ್ಲಿ ನಮ್ಮ ಪಾಡು ಇದೀ ರೀತಿ. 8 ವರ್ಷಗಳಿಂದ ಈ 10 ಕಿ.ಮೀ. ರಸ್ತೆ ಮಾಡೋಕಾಗದೇ, ಪ್ರಯಾಣಿಕರು ಹಾಗೂ ನಮಗೆಲ್ಲಾ ಭಾರೀ ಸಮಸ್ಯೆ ಉಂಟು ಮಾಡಿದ್ದಾರೆ. ಮನೆಗೆ ಹೋಗಿ ಹೆಂಡತಿ ಮಕ್ಕಳ ಮುಖ ನೋಡಿ 9 ದಿನಗಳಾಯ್ತು’ ಎಂದು ಚಾಲಕ ಅಶ್ರಫ್‌ ಹೇಳಿದರು.

ಆನೇಮಹಲ್‌ ಬಳಿ ಹೆದ್ದಾರಿಯಲ್ಲಿ ನಿಂತಿರುವ ಲಾರಿಯಲ್ಲಿಯೇ ಚಾಲಕ ಅಡುಗೆ ಮಾಡುತ್ತಿರುವುದು.
2017 ರಿಂದ ಇದೇ ಪಾಡು
‘ಪ್ರತಿ ವರ್ಷದ ಮಳೆಗಾಲದಲ್ಲಿ ದೋಣಿಗಾಲ್ ಹಾಗೂ ದೊಡ್ಡತಪ್ಪಲೆ ಬಳಿ ಗುಡ್ಡ ಕುಸಿಯುವುದು ದಿನಗಟ್ಟಲೆ ವಾರಗಟ್ಟಲೆ ಕೊನೆಗೆ ತಿಂಗಳುಗಟ್ಟಲೆ ಸಂಚಾರ ಬಂದ್‌ ಆಗಿದ್ದು ಈಗಲೂ ಇದೇ ಸಮಸ್ಯೆ ಮುಂದುವರಿದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ ಆಗಿದೆ’ ಎಂದು ಚಾಲಕರು ಅಲವತ್ತಿಕೊಳ್ಳುತ್ತಿದ್ದಾರೆ. ‘ಹಾಸನ–ಬಿ.ಸಿ. ರೋಡ್‌ ನಡುವೆ ಚತುಷ್ಪಥ ಕಾಮಗಾರಿ ಪ್ರಾರಂಭಗೊಂಡಿದ್ದು 2017ರಲ್ಲಿ. ನಾಲ್ಕು ಪಥಕ್ಕಾಗಿ ಮರಗಳನ್ನು ಕಡಿದು ಗುಡ್ಡಗಳನ್ನು ಬಗೆದರು. ಪ್ರಾರಂಭದಲ್ಲಿ ಗುತ್ತಿಗೆ ಪಡೆದಿದ್ದ ಐಸೋಲೆಕ್ಸ್‌ ಕಂಪನಿ ಬ್ಯಾಂಕ್ ದಿವಾಳಿಯಾಗಿ ರಾಜ್‌ಕಮಲ್‌ ಬಿಲ್ಡರ್‌ಗೆ ಉಪ ಗುತ್ತಿಗೆ ನೀಡಿತು. 2019ರ ವರೆಗೆ ಯಾವುದೇ ಕಾಮಗಾರಿಗಳು ಆಗಲೇ ಇಲ್ಲ. ಈಗ ಕಾಮಗಾರಿಯಿಂದ ಸಮಸ್ಯೆ ಆಗುತ್ತಿದೆ’ ಎನ್ನುವ ಆಕ್ರೋಶ ಅವರದ್ದು.
ಅವೈಜ್ಞಾನಿಕ ಕಾಮಗಾರಿ
ರಾಜಧಾನಿ ಬೆಂಗಳೂರು ಹಾಗೂ ಇತರೆ ರಾಜ್ಯಗಳನ್ನು ಬಂದರು ನಗರ ಮಂಗಳೂರಿಗೆ ಸಂಪರ್ಕಿಸಲು ಇದೊಂದು ಪ್ರಮುಖ ಹೆದ್ದಾರಿಯಾಗಿದೆ. ಚಾರ್ಮಾಡಿ ಹಾಗೂ ಸಂಪಾಜೆ ಘಾಟ್‌ ಮಾರ್ಗಗಳು ಕಿರಿದಾಗಿರುವುದರಿಂದ ಸರಕು ಸಾಗಣೆ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಇಂತಹ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪ್ರಾಧಿಕಾರ ಹಾಗೂ ಗುತ್ತಿಗೆದಾರ ರಾಜ್‌ಕಮಲ್‌ ಕಂಪನಿ ಅವೈಜ್ಞಾನಿಕವಾಗಿ ಮಾಡುತ್ತಿದ್ದು ಮಳೆಗಾಲದಲ್ಲಿ ಈ ಮಾರ್ಗದ ಸಂಚಾರಕ್ಕೆ ಸಂಚಕಾರ ತಂದೊಡ್ಡಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.