ADVERTISEMENT

ಗಡುವು ಪೂರೈಸದ ಗುತ್ತಿಗೆದಾರ ಕಂಪನಿ

ಕಾಮಗಾರಿ ಪೂರ್ಣಗೊಳಿಸದೇ ಹೆದ್ದಾರಿ ಬಂದ್‌ಗೆ ಮುಂದಾಗಿದ್ದ ಅಧಿಕಾರಿಗಳು

ಚಿದಂಬರ ಪ್ರಸಾದ್
Published 24 ಜುಲೈ 2022, 16:31 IST
Last Updated 24 ಜುಲೈ 2022, 16:31 IST
ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ ಬಳಿ ಹಗಲಿನಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿವೆ.
ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ ಬಳಿ ಹಗಲಿನಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿವೆ.   

ಹಾಸನ: ರಾಷ್ಟ್ರೀಯ ಹೆದ್ದಾರಿ–75 ರಲ್ಲಿ ಹಾಸನ ಬೈಪಾಸ್‌ನಿಂದ ಸಕಲೇಶಪುರ ಬೈಪಾಸ್‌ವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸದೇ, ಸಕಲೇಶಪುರ– ಹೆಗ್ಗದ್ದೆ ಕಾಮಗಾರಿಗೆ ಹೆದ್ದಾರಿಯನ್ನು ಬಂದ್ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಾಗಿದ್ದರು.

ಜನವರಿಯಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿಯೇ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾನ್‌ಬಾಜ್‌, ಈ ಪ್ರಸ್ತಾವ ಮುಂದಿಟ್ಟಿದ್ದರು. ಆದರೆ, ಹಾಸನ ಬೈಪಾಸ್‌ನಿಂದ ಸಕಲೇಶಪುರ ಬೈಪಾಸ್‌ವರೆಗಿನ ಒಂದು ಬದಿಯ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಮಾತ್ರ ಹೆದ್ದಾರಿ ಬಂದ್ ಮಾಡುವ ಬಗ್ಗೆ ಯೋಚನೆ ಮಾಡಬಹುದು ಎಂದು ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳಿದ್ದರು.

ಆದರೆ, ಇದುವರೆಗೆ ಒಂದು ಬದಿಯ ಕಾಮಗಾರಿಯೂ ಪೂರ್ಣವಾಗಿಲ್ಲ. ವಾಹನಗಳ ಸಂಚಾರವೂ ಸುಗಮವಾಗಿಲ್ಲ. ಇಂಥದ್ದರಲ್ಲಿ ಏಳು ತಿಂಗಳ ಹಿಂದೆಯೇ ಹೆದ್ದಾರಿ ಬಂದ್‌ ಮಾಡುವ ಪ್ರಸ್ತಾವವನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಂಡಿಸಿದ್ದರು.

ADVERTISEMENT

ಪ್ರತಿ ಸಭೆಯಲ್ಲೂ ಕಾಮಗಾರಿ ಮುಗಿಸಲು ಗಡುವು ವಿಧಿಸಲಾಗುತ್ತದೆ. ಮುಂದಿನ ಸಭೆಯಲ್ಲಿ ಮತ್ತೊಂದು ಗಡುವು ನೀಡಲಾಗುತ್ತದೆ. ಸಭೆಗಳ ನಡಾವಳಿಗಳಲ್ಲಿ ಗಡುವು ದಾಖಲಾಗುತ್ತಿದೆಯೇ ಹೊರತು, ಕಾಮಗಾರಿಯಲ್ಲಿ ಅನ್ವಯವಾಗುತ್ತಿಲ್ಲ ಎನ್ನುವ ಬೇಸರವನ್ನು ಜನಪ್ರತಿನಿಧಿಗಳೇ ವ್ಯಕ್ತಪಡಿಸುತ್ತಿದ್ದಾರೆ.

ಜನವರಿಯಲ್ಲಿ ನಡೆದ ಸಭೆಯಲ್ಲಿ ಮಾರ್ಚ್‌ವರೆಗೆ, ಮಾರ್ಚ್‌ನಲ್ಲಿ ನಡೆದ ಸಭೆಯಲ್ಲಿ ಜೂನ್‌ವರೆಗೆ ಗಡುವು ನೀಡಲಾಗಿತ್ತು. ಆದರೆ, ಜುಲೈನಲ್ಲಿ ನಡೆದ ದಿಶಾ ಸಭೆಯಲ್ಲಿ ಒಂದು ಬದಿಯಲ್ಲಿ ಬಾಕಿ ಉಳಿದಿರುವ 9 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು 2023 ರ ಜನವರಿವರೆಗೆ ಅವಕಾಶ ಕೇಳಿದ್ದು, ಜನಪ್ರತಿನಿಧಿಗಳನ್ನು ಕೆರಳಿಸುವಂತೆ ಮಾಡಿತ್ತು.

ಅಧಿಕಾರಿಗಳ ಉತ್ತರದಿಂದ ರೋಸಿ ಹೋದ ಸಂಸದ ಪ್ರಜ್ವಲ್‌ ರೇವಣ್ಣ, ‘ಇಲ್ಲಿ ತಮಾಷೆ ಮಾಡುತ್ತಿದ್ದೀರಾ? ಮರಳು, ಕಲ್ಲು ಸೇರಿದಂತೆ ಎಲ್ಲ ಇಲಾಖೆಗಳಿಂದ ಅಗತ್ಯ ಸಹಕಾರ ನೀಡುತ್ತಿದ್ದರೂ, ಒಂದು ಬದಿಯ ಕಾಮಗಾರಿಯನ್ನು ಪೂರ್ಣಗೊಳಿಸುತ್ತಿಲ್ಲ. ಆದರೆ, ರಸ್ತೆ ಬಂದ್ ಮಾಡಲು ಕೇಳುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡಿದ್ದು ಆಗಿದೆ.

ಜುಲೈ ಆರಂಭದಲ್ಲಿ ನಡೆದ ದಿಶಾ ಸಭೆಯಲ್ಲೂ ಹೆದ್ದಾರಿ ಕಾಮಗಾರಿಯದ್ದೇ ಪ್ರಮುಖ ವಿಷಯವಾಗಿತ್ತು. ಒಂದು ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆಯೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಂಸದರು, ಶಾಸಕರೇ ಒತ್ತಾಯಿಸಿದರು.

ಚನ್ನರಾಯಪಟ್ಟಣದವರೆಗಿನ ಕಾಮಗಾರಿಯನ್ನು 2017 ರ ನಂತರ ಆರಂಭಿಸಿದ್ದರೂ, ಈಗಾಗಲೇ ಕಾಮಗಾರಿ ಪೂರ್ಣವಾಗಿದೆ. ಆದರೆ, ಹಾಸನ– ಸಕಲೇಶಪುರ ಕಾಮಗಾರಿ ಮಾತ್ರ ಇನ್ನೂ ಮುಂದೆ ಸಾಗುತ್ತಲೇ ಇಲ್ಲ. ಗುತ್ತಿಗೆದಾರ ಕಂಪನಿ ಪೂರ್ಣ ಪ್ರಮಾಣದಲ್ಲಿ ಯಂತ್ರೋಪಕರಣ, ಕಾರ್ಮಿಕರನ್ನು ಬಳಸದೇ ಇರುವುದೇ ಇದಕ್ಕೆ ಕಾರಣ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.

ಸಚಿವರ ಮಾತಿಗೂ ಸಿಗದ ಸ್ಪಂದನೆ

ಹೆದ್ದಾರಿಯ ದುಸ್ಥಿತಿಯ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ಕುಮಾರ್‌, 10 ದಿನದಲ್ಲಿ ಸಕಲೇಪುರ– ಹೆಗ್ಗದ್ದೆವರೆಗಿನ ರಸ್ತೆಯನ್ನು ಸರಿ ಮಾಡುವಂತೆ ಸೂಚನೆ ನೀಡಿದ್ದರು. ಆದರೆ, ಇಂದಿನವರೆಗೆ ಹೆದ್ದಾರಿಯ ಸ್ಥಿತಿ ಹಾಗೆಯೇ ಉಳಿದಿದೆ.

ಸ್ವತಃ ಸಚಿವ ಸಿ.ಸಿ. ಪಾಟೀಲರೇ ಸ್ಥಳಕ್ಕೆ ಬಂದು ಕಾಮಗಾರಿ ವೀಕ್ಷಿಸಿದ್ದಾರೆ. ಕಾಮಗಾರಿ ಕಳಪೆ ಆಗಿರುವುದು, ಗುತ್ತಿಗೆ ಕಂಪನಿ ಸರಿಯಾಗಿ ಕೆಲಸ ಮಾಡದೇ ಇರುವುದನ್ನು ನೋಡಿದ್ದಾರೆ. ‘ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ಆಗಿರುವುದನ್ನು ನೋಡಿದ್ದೇನೆ. ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಗಮನಕ್ಕೂ ತರುತ್ತೇನೆ’ ಎಂದು ಸಿ.ಸಿ. ಪಾಟೀಲರೇ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.