ADVERTISEMENT

‘ಹೊಸ ಆವಿಷ್ಕಾರದ ಮೂಲಕ ಕೊಡುಗೆ ನೀಡಿ’

ಐಇಇಇ ಮೈಸೂರುಕಾನ್ -2021 ಅಂತರರಾಷ್ಟ್ರೀಯ ಸಮ್ಮೇಳನ; ಡಾ.ಕರಿಸಿದ್ದಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 3:33 IST
Last Updated 25 ಅಕ್ಟೋಬರ್ 2021, 3:33 IST
ಹಾಸನ ತಾಲ್ಲೂಕಿನ ಕಂದಲಿಯ ನವಕೀ‌ಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಐಇಇಇ ಮೈಸೂರು ಕಾನ್ -2021 ರ ಪ್ರಮುಖ ಅಂತರರಾಷ್ಟ್ರೀಯ ಸಮ್ಮೇಳನ ಸರಣಿ 1ನೇ ಆವೃತ್ತಿಯಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ವಿದ್ಯಾರ್ಥಿಗಳು
ಹಾಸನ ತಾಲ್ಲೂಕಿನ ಕಂದಲಿಯ ನವಕೀ‌ಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಐಇಇಇ ಮೈಸೂರು ಕಾನ್ -2021 ರ ಪ್ರಮುಖ ಅಂತರರಾಷ್ಟ್ರೀಯ ಸಮ್ಮೇಳನ ಸರಣಿ 1ನೇ ಆವೃತ್ತಿಯಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ವಿದ್ಯಾರ್ಥಿಗಳು   

ಹಾಸನ: ‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಆವಿಷ್ಕಾರಗಳ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು’ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕುಲಪತಿ ಡಾ. ಕರಿಸಿದ್ದಪ್ಪ ಸಲಹೆ ನೀಡಿದರು.

ತಾಲ್ಲೂಕಿನ ಕಂದಲಿಯ ನವಕೀ‌ಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಐಇಇಇ ಮೈಸೂರು ಕಾನ್ -2021 ರ ಪ್ರಮುಖ ಅಂತರರಾಷ್ಟ್ರೀಯ ಸಮ್ಮೇಳನ ಸರಣಿ 1ನೇ ಆವೃತ್ತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣ ಏಕಮುಖವಾಗಿರದೇ ಎಲ್ಲಾ ಆಯಾಮಗಳನ್ನು ಒಳಗೊಂಡಿರಬೇಕು. ಇಂದು ಜ್ಞಾನ ಮತ್ತು ಮಾಹಿತಿ ಕೇವಲ ಶಿಕ್ಷಕ ಮತ್ತು ಪಠ್ಯ ಪುಸ್ತಕಗಳಿಂದ ಸಿಗುತ್ತಿಲ್ಲ. ಮೊಬೈಲ್‌ ಇರುವುದರಿಂದ ಇಡೀ ವಿಶ್ವ ವಿದ್ಯಾಲಯವೇ ಜೇಬಿನಲ್ಲಿ ಇದ್ದಂತೆ. ಇಡೀ ವಿಶ್ವಕ್ಕೆ ನೀವು ತೆರೆದುಕೊಳ್ಳಬಹುದು, ವಿವಿಧ ಬಗೆಯ ತಜ್ಞರಿಂದ ವಿದ್ಯಾರ್ಥಿಗಳು ಕಲಿಯಲು ಅವಕಾಶವಿದೆ’ ಎಂದರು.

ADVERTISEMENT

‘ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಸಾಕಷ್ಟು ಜ್ಞಾನ ಮತ್ತು ಮಾಹಿತಿ ಸಿಕ್ಕರೂ ವಿದ್ಯಾರ್ಥಿಗಳು ತರಗತಿಗೆ ಬಂದು ಏಕೆ ಕಲಿಯಬೇಕು ಎಂಬ ಬಗ್ಗೆ ಶಿಕ್ಷಕರು ಪ್ರಶ್ನೆ ಮಾಡಿಕೊಳ್ಳಬೇಕು. ಶಿಕ್ಷಕರು ಕೇವಲ ಪಠ್ಯಕ್ಕೆ ಸೀಮಿತರಾಗಿರದೆ, ಒಬ್ಬ ಮೆಂಟರ್‌ ಆಗಿ, ಕೋಚ್‌ ಆಗಿ, ಅವಕಾಶಗಳನ್ನು ತೋರಿಸುವ ವ್ಯಕ್ತಿಯಾಗಿಯೂ ಇರಬೇಕು’ ಎಂದು ಹೇಳಿದರು.

ತಂತ್ರಜ್ಞಾನಗಳ ಆವಿಷ್ಕಾರದಿಂದ ಕೇವಲ ಹಣ ಗಳಿಸುವುದೇ ಮುಖ್ಯ ಉದ್ದೇಶ ಆಗಬಾರದು, ಅದರಿಂದ ಸಮಾಜದ ಜನರ ಸಮಸ್ಯೆಗಳು ನಿವಾರಣೆ ಆಗುವಂತಿರಬೇಕು. ಜತೆಗೆ ಸಮಾಜಕ್ಕೆ ಏನಾದರೂ ಉಪಯೋಗವಾಗುವಂತಿರಬೇಕು. ಈ ರೀತಿಯ ಸಮ್ಮೇಳನಗಳು ನಡೆಯುವುದರಿಂದ ಸಾಕಷ್ಟು ಗುಣಮಟ್ಟದ ಪ್ರಬಂಧಗಳು ಮಂಡನೆ ಆಗಲಿವೆ. ಪ್ರಬಂಧಗಳ ಮಂಡನೆಯಿಂದ ಸಮ್ಮೇಳನ ಯಶಸ್ವಿ ಆಗುವುದಿಲ್ಲ. ಅವು ಕಾರ್ಯರೂಪಕ್ಕೆ ಬರುವಂತಾಗಬೇಕು ಎಂದರು.

ಬೆಂಗಳೂರಿನ ಸಿಟಿಒ ಸ್ಯಾಮ್‌ಸಾಂಗ್‌ ಆರ್‌ ಆಂಡ್‌ ಡಿ ಇನ್‌ಸ್ಟಿಟ್ಯೂಟ್‌ ಇಂಡಿಯಾದ ಉಪಾಧ್ಯಕ್ಷ ಡಾ.ಅಲೋಕನಾಥ್ ಡೇ ಮಾತನಾಡಿ, ‘ಎಂಜಿನಿಯರಿಂಗ್‌ ಮುಗಿಸಿದ ಬಳಿಕ ರಾಷ್ಟ್ರ ಮತ್ತು ರಾಜ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಬೆಂಗಳೂರು, ಮೈಸೂರು ಹೊಸ ಮಾಹಿತಿ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಸೂಕ್ತ ನಗರಗಳು. ಇಂದಿನ ಸಮ್ಮೇಳನಕ್ಕೆ 550 ಪ್ರಬಂಧಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 150 ಪ್ರಬಂಧಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅ ರೀತಿಯ ಗುಣಮಟ್ಟದ ಪ್ರಬಂಧಗಳು ರಚನೆಯಾಗಬೇಕು’ ಎಂದು ಹೇಳಿದರು.

ಯುಎಸ್‌ಎ ಮೇರಿಲ್ಯಾಂಡ್‌ನ ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾನಿಲಯದ ಅಧ್ಯಕ್ಷ ಡಾ.ಅಶುತೋಷ್‌ ದತ್ತ, ಬೆಂಗಳೂರು ಇಸ್ರೋ ಹಾಗೂ ಮೈಸೂರುಕಾನ್‌ ಗೌರವಾಧ್ಯಕ್ಷ ಡಾ.ಪಿ. ಪುನಿತ್‌ ಕುಮಾರ್‌, ಐಇಇಇ ಅಧ್ಯಕ್ಷೆ ಬಿ.ಎಸ್‌. ಬಿಂಧು ಮಾದವ, ಮೈಸೂರು ಕಾನ್‌ ಜನರಲ್‌ ಚೇರ್‌ ಡಾ.ಪರಮೇಶಾಚಾರಿ, ನವಕೀಸ್‌ ಎಂಜಿನಿಯರಿಂಗ್‌ ಕಾಲೇಜಿನ ಅಧ್ಯಕ್ಷ ಎಂ.ಆರ್‌. ಆನಂದ್‌ರಾಮ್‌, ಪ್ರಾಂಶುಪಾಲ ಡಾ.ಎಚ್.ಎಸ್. ಮೋಹನ್, ನಿರ್ದೇಶಕ ಎಂ.ಜಿ. ವೆಂಕಟೇಶಮೂರ್ತಿ ಇದ್ದರು.

ಪ್ರಬಂಧ ಮಂಡನೆ ಇಂದು

ಅ. 25ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಸ್ಟ್ರೇಲಿಯಾದ ಸಿಡ್ನಿ ಯುನಿವರ್ಸಿಟಿ ಆಫ್ ಟೆಕ್ನಾಲಜಿಯ ಪ್ರೊ.ಅಮೀರ್ ಎಚ್. ಗಂಡೋಮಿ ಸೇರಿದಂತೆ ಇತರೆ ಯುನಿವರ್ಸಿಟಿಯ ಪ್ರೊಫೆಸರ್‌ಗಳು ಭಾಗವಹಿಸುವರು. 150 ಸಂಶೋಧಕರು ಸಲ್ಲಿಸಿದ ಪ್ರಬಂಧಗಳನ್ನು ಸಮ್ಮೇಳನದ ಕಲಾಪದಲ್ಲಿ ಮಂಡನೆ ಆಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.