ADVERTISEMENT

ಕೋವಿಡ್‌: 14 ಸಾವಿರ ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 14:23 IST
Last Updated 4 ಅಕ್ಟೋಬರ್ 2020, 14:23 IST

ಹಾಸನ: ಕೋವಿಡ್‌ ಪೀಡಿತರಲ್ಲಿ ಮತ್ತೆ 411 ಮಂದಿಗೆ ಕಾಯಿಲೆ ವಾಸಿಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ
ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 14 ಸಾವಿರ ಗಡಿ ದಾಟಿದೆ.

ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಮತ್ತೊಂದೆಡೆ ಚೇತರಿಸಿಕೊಳ್ಳುವವರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ.
ಈವರೆಗೆ ಒಟ್ಟು 14,282 ಮಂದಿ ಗುಣಮುಖರಾಗಿದ್ದಾರೆ.

ಹೊಸದಾಗಿ ಭಾನುವಾರ 303 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ
18,226ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಇದರೊಂದಿಗೆ
ಸಾವಿಗೀಡಾದವರ ಸಂಖ್ಯೆ 350 ತಲುಪಿದೆ. ತೀವ್ರ ನಿಗಾ ಘಟಕ (ಐಸಿಯು)ದಲ್ಲಿ 51 ಜನ ಚಿಕಿತ್ಸೆ
ಪಡೆಯುತ್ತಿದ್ದಾರೆ.

ADVERTISEMENT

ಸದ್ಯ 3,594 ಸೋಂಕಿತರು ಕೋವಿಡ್ ಆರೈಕೆ ಕೇಂದ್ರ, ಕೋವಿಡ್‌ ಆಸ್ಪತ್ರೆ, ಹೋಂ ಐಸೋಲೇಷನ್‌ನಲ್ಲಿ
ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಜ್ವರ, ಉಸಿರಾಟದ ಸಮಸ್ಯೆಯಿಂದ ದಾಖಲಾಗಿದ್ದ ಬೇಲೂರಿನ ಇಬ್ಬರು ಹಾಗೂ ಹಾಸನದ ಒಬ್ಬರು ಚಿಕಿತ್ಸೆಗೆ
ಸ್ಪಂದಿಸಲಿಲ್ಲ. ಕೋವಿಡ್‌ ನಿಯಮ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಹೊಸದಾಗಿ ಅರಸೀಕೆರೆ 49,
ಚನ್ನರಾಯಪಟ್ಟಣ 46, ಆಲೂರು 4, ಹಾಸನ 117, ಹೊಳೆನರಸೀಪುರ 11, ಅರಕಲಗೂಡು 33,
ಬೇಲೂರು 31, ಸಕಲೇಶಪುರ 12 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.‌‌

ಕೋವಿಡ್‌ ರೋಗದ ಲಕ್ಷಣಗಳಾದ ಜ್ವರ, ಶೀತ, ಗಂಟಲು, ತಲೆ ನೋವು, ಉಸಿರಾಟದ ಸಮಸ್ಯೆ ಕಂಡು ಬಂದಲ್ಲಿ
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಅಥವಾ ಹಿಮ್ಸ್‌
ಆಸ್ಪತ್ರೆಯಲ್ಲಿ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಸಭೆ,
ಸಮಾರಂಭಗಳಿಂದ ದೂರ ಇರಬೇಕು ಎಂದು ಅವರು‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.