ADVERTISEMENT

ಹಾಸನ: ಕೋವಿಡ್‌ಗೆ ಐದು ಮಂದಿ ಸಾವು

131 ಜನರಿಗೆ ಕೊರೊನಾ ಪಾಸಿಟಿವ್, ಸೋಂಕಿತರ ಸಂಖ್ಯೆ 2548ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 14:14 IST
Last Updated 3 ಆಗಸ್ಟ್ 2020, 14:14 IST
ಹಾಸನದ ಹಿಮತ್ ಸಿಂಗ್ ಕಾ ಕಾರ್ಖಾನೆಯಲ್ಲಿ ಸೋಂಕಿತ ಕಾರ್ಮಿಕರು ಹಾಸಿಗೆ ಇಲ್ಲದೇ ನೆಲದ ಮೇಲೆ ಮಲಗಿರುವ ದೃಶ್ಯ
ಹಾಸನದ ಹಿಮತ್ ಸಿಂಗ್ ಕಾ ಕಾರ್ಖಾನೆಯಲ್ಲಿ ಸೋಂಕಿತ ಕಾರ್ಮಿಕರು ಹಾಸಿಗೆ ಇಲ್ಲದೇ ನೆಲದ ಮೇಲೆ ಮಲಗಿರುವ ದೃಶ್ಯ   

ಹಾಸನ: ಜಿಲ್ಲೆಯಲ್ಲಿ ಸೋಮವಾರ 131 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಐದು ಮಂದಿ ಮೃತಪಟ್ಟಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 2548ಕ್ಕೇರಿದೆ. ಈವರೆಗೆ 70 ಜನರು ಅಸುನೀಗಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹಾಸನ ತಾಲ್ಲೂಕಿನ 70 ವರ್ಷದ ಪುರುಷ, ಅರಕಲಗೂಡು ತಾಲ್ಲೂಕಿನ 58
ವರ್ಷದ ವ್ಯಕ್ತಿ, ಅರಸೀಕೆರೆ ತಾಲ್ಲೂಕಿನ 65 ವರ್ಷದ ಮಹಿಳೆ, ಬೇಲೂರು ತಾಲ್ಲೂಕಿನ 75 ವರ್ಷ ವೃದ್ಧ ಹಾಗೂ
ಚನ್ನರಾಯಪಟ್ಟಣ ತಾಲ್ಲೂಕಿನ 50 ವರ್ಷದ ವ್ಯಕ್ತಿ ಹಿಮ್ಸ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ
ಸ್ಪಂದಿಸದೆ ಮೃತಪಟ್ಟಿದ್ದಾರೆ. ಸರ್ಕಾರದ ನಿಯಮ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಕೆಎಸ್‌ಆರ್‌ಟಿಸಿ ನೌಕರ, ಆರೋಗ್ಯ ಇಲಾಖೆ ಸಿಬ್ಬಂದಿ, ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ, ಶೀತ ಜ್ವರ ಮಾದರಿ ಅನಾರೋಗ್ಯ, ಉಸಿರಾಟದ ತೊಂದರೆ ಹಾಗೂ ಅನ್ಯ ಜಿಲ್ಲೆಗಳ ಪ್ರಯಾಣ ಇತಿಹಾಸ ಹೊಂದಿರುವವರಿಗೆ ಸೋಂಕು ತಗುಲಿದೆ. ಕೆಲ ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ.

ಹೊಸದಾಗಿ ಹಾಸನ 70, ಅರಸೀಕೆರೆ 10, ಚನ್ನರಾಯಪಟ್ಟಣ 9, ಅರಕಲಗೂಡು 20, ಹೊಳೆನರಸೀಪುರ 15, ಸಕಲೇಶಪುರ 1, ಬೇಲೂರು 5 ಮತ್ತು ಇತರ ಜಿಲ್ಲೆಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ADVERTISEMENT

ಈವರೆಗೆ 1057 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 1421 ಸಕ್ರಿಯ ಪ್ರಕರಣಗಳಿವೆ.
43 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜ್ವರ, ಶೀತ, ಕೆಮ್ಮು, ಗಂಟಲು ನೋವು ಲಕ್ಷಣಗಳು ಇರುವವರು ಗಂಟಲು ದ್ರವ ತಪಾಸಣೆಗೆ ಒಳಪಟ್ಟು, ಕೋವಿಡ್‌ ತಡೆಗೆ ಸಹಕರಿಸಬೇಕು. ಸೋಂಕಿನ ಲಕ್ಷಣಗಳು ಇಲ್ಲದ ಕೋವಿಡ್‌ ಬಾಧಿತರನ್ನು ಹೋಂ ಐಸೋಲೇಷನ್‌ನಲ್ಲಿ ಇರಿಸಲಾಗುತ್ತಿದೆ. ಈಗಾಗಲೇ 398 ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಯಾರು ಭಯ ಪಡುವ ಅಗತ್ಯವಿಲ್ಲ. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.