ADVERTISEMENT

ಹಾಸನದಲ್ಲಿ ಸಿಪಿಐ ಸಮ್ಮೇಳನ: ಸಾಥಿ

​ಪ್ರಜಾವಾಣಿ ವಾರ್ತೆ
Published 9 ಮೇ 2022, 15:51 IST
Last Updated 9 ಮೇ 2022, 15:51 IST

ಹಾಸನ: ಭಾರತ ಕಮ್ಯುನಿಸ್ಟ್ ಪಕ್ಷದ 24 ನೇ ರಾಜ್ಯ ಸಮ್ಮೇಳನ ಸೆ.25 ರಿಂದ 27 ರ ವರೆಗೆ ಹಾಸನದಲ್ಲಿ ನಡೆಯಲಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ ತಿಳಿಸಿದರು.

‘ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಾಹಿತಿ ಬಾನು ಮುಷ್ತಾಕ್ ಆಯ್ಕೆಯಾಗಿದ್ದಾರೆ. ಪಕ್ಷದ ಮಹಾಧಿವೇಶನ ಈ ಬಾರಿ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಅ.14 ರಿಂದ 18ರ ವರೆಗೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇಶದ ಎಲ್ಲ ರಾಜ್ಯಗಳಲ್ಲೂ ಸಮ್ಮೇಳನಗಳು ನಡೆಯಲಿವೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಮ್ಮೇಳನದಲ್ಲಿ 500 ಕ್ಕೂ ಹೆಚ್ಚು ಪ್ರತಿನಿಧಿಗಳು ವಿವಿಧ ಜಿಲ್ಲೆಗಳಿಂದ ಭಾಗವಹಿಸಲಿದ್ದಾರೆ. ಭಗತ್ ಸಿಂಗ್ ಅವರ ಜನ್ಮ ದಿನವಾದ ಸೆ. 27 ರಂದು ನಗರದಲ್ಲಿ ಮೆರವಣಿಗೆ ಹಾಗೂ ಬಹಿರಂಗ ಅಧಿವೇಶನ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

ಸಿಪಿಐ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಡಿ. ರಾಜಾ, ರಾಜ್ಯಸಭಾ ಸದಸ್ಯ ಕಾಂ.ವಿನಯ್ ವಿಶ್ವಂ ಹಾಗೂ ಕೇರಳ ಕಂದಾಯ ಸಚಿವ ಕಾ.ಕೆ. ರಾಜನ್ ಭಾಗವಹಿಸಲಿದ್ದಾರೆ. ರಾಜ್ಯ, ಜಿಲ್ಲೆಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸ್ಥಳಗಳಿಂದ ಐದು ಜಾಥಾಗಳು ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳೆ ದಲಿತ ಹಾಗೂ ಆದಿವಾಸಿ ಜನರ ಶ್ರೇಯೋಭಿವೃದ್ಧಿಗೆ ಪೂರಕವಾದ ಬೇಡಿಕೆ ಹೊತ್ತು ಸಮ್ಮೇಳನ ಸ್ಥಳಕ್ಕೆ ಆಗಮಿಸಲಿವೆ ಎಂದು ವಿವರಿಸಿದರು.

ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಜನರನ್ನು ಭಾವನಾತ್ಮಕ ವಿಷಯಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದಿಕ್ಕು ತಪ್ಪಿಸುತ್ತಿವೆ. ಬಡತನ, ಹಸಿವು, ನಿರುದ್ಯೋಗ ಭ್ರಷ್ಟಾಚಾರ, ಕೋಮುವಾದ ವಿರೋಧಿಸುವ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗೋಷ್ಟಿಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಂ.ಸಿ. ಡೋಂಗ್ರೆ, ರಾಜ್ಯ ಕಾರ್ಯದರ್ಶಿ ಎಚ್.ಎಂ. ಸಂತೋಷ, ಸಹ ಕಾರ್ಯದರ್ಶಿ ಸಿ. ಧರ್ಮರಾಜು, ರಾಜ್ಯ ಮಂಡಳಿ ಸದಸ್ಯ ಗುಣಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.