ADVERTISEMENT

ಯುವಜನರಿಗೆ ಉದ್ಯೋಗ ಸೃಷ್ಟಿಸಿ

ಕೇಂದ್ರ ಸರ್ಕಾರ ವಿರುದ್ಧ ಭೀಮ್ ಆರ್ಮಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 13:13 IST
Last Updated 24 ಸೆಪ್ಟೆಂಬರ್ 2020, 13:13 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಭೀಮ್‌ ಆರ್ಮಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಭೀಮ್‌ ಆರ್ಮಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.   

ಹಾಸನ: ಸರ್ಕಾರಿ ವಲಯಗಳ ಖಾಸಗೀಕರಣ ನಿಲ್ಲಿಸಬೇಕು. ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಭೀಮ್‌ ಆರ್ಮಿ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರ ಜಾತಿ ಮತ್ತು ಬಂಡವಾಳ ವ್ಯವಸ್ಥೆಯನ್ನು ದೇಶದ ಮೇಲೆ ಹೇರುತ್ತಿದೆ. ಈ ಕಾರಣದಿಂದಾಗಿ ದುರ್ಬಲ ಹಾಗೂ ಶೋಷಣೆಗೆ ಒಳಗಾದ ವರ್ಗಗಳ ಜನರು ಬಹುತೇಕ ವಿನಾಶದ ಅಂಚಿನಲ್ಲಿದ್ದಾರೆ. ರೈಲ್ವೆ, ಬ್ಯಾಂಕ್‌, ವಿಮಾನಯಾನ ಮತ್ತು ಇತರೆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ, ಬಂಡವಾಳಶಾಹಿಗಳಿಗೆ ತಲೆಬಾಗುವಲ್ಲಿ ನಿರತವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಮೇಲೆ ಬಹುದೊಡ್ಡ ದಾಳಿ ನಡೆದಿದೆ. ದೇಶದಾದ್ಯಂತ ನಿರುದ್ಯೋಗದ ವಿರುದ್ಧ ಯುವ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ. ಕೋವಿಡ್‌ನಂತಹ ರಾಷ್ಟ್ರೀಯ ವಿಪತ್ತು ಸಂದರ್ಭದಲ್ಲಿ ಸರ್ಕಾರ ಜನರಿಗೆ ಸಹಾಯ ಮಾಡುವ ಬದಲು ರೈತ, ಕಾರ್ಮಿಕ ಹಾಗೂ ಜನ ವಿರೋಧಿ ಮಸೂದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಜಾರಿಗೆ ತಂದಿದೆ. ದೇಶದಲ್ಲಿ ಒಂದೇ ವರ್ಷದಲ್ಲಿ ಅಂದಾಜು 42,000 ರೈತರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರಾಷ್ಟ್ರೀಯ ಹಿತಾಸಕ್ತಿಯಿಂದಾಗಿ ಸರ್ಕಾರಿ ಸಂಸ್ಥೆಗಳ ಖಾಸಗೀಕರಣವನ್ನು ತಕ್ಷಣ ನಿಲ್ಲಿಸಬೇಕು. ಪ್ರಸ್ತುತ ಅಧಿವೇಶನದಲ್ಲಿ ಅಂಗೀಕರಿಸಲಾದ ಮೂರು ರೈತ ವಿರೋಧಿ ಮಸೂದೆಗಳನ್ನು ತಕ್ಷಣ ರದ್ದು ಮಾಡಬೇಕುಮತ್ತು ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಅಧ್ಯಕ್ಷ ಎಂ.ಎಸ್‌. ಪ್ರದೀಪ್‌, ಸಕಲೇಶಪುರ ತಾಲ್ಲೂಕು ಘಟಕದ ಅಧ್ಯಕ್ಷ ವಿಕ್ರಮ್‌ ಸಕ್ಪಾಲ್‌, ಚನ್ನರಾಯಪಟ್ಟಣದ ಸ್ವಾಮಿ, ಸಂತೋಷ್‌, ಪ್ರತಾಪ್‌ ಸಿದ್ಧಯ್ಯನಗರ, ರಕ್ಷಿತ್‌ ಸಾಣೇನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.