ADVERTISEMENT

ಸಕಲೇಶಪುರ: ಅರಣ್ಯ ಇಲಾಖೆಯಿಂದ ಬೆಳೆ ತೆರವು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:52 IST
Last Updated 25 ಸೆಪ್ಟೆಂಬರ್ 2020, 2:52 IST
ಸಕಲೇಶಪುರ ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಕಾಫಿ ಗಿಡಗಳನ್ನು ತೆರವುಗೊಳಿಸಿದರು
ಸಕಲೇಶಪುರ ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಕಾಫಿ ಗಿಡಗಳನ್ನು ತೆರವುಗೊಳಿಸಿದರು   

ಸಕಲೇಶಪುರ: ‘ಹಿಡುವಳಿ ಜಮೀನಿನಲ್ಲಿ ಬೆಳೆದಿದ್ದ ಕಾಫಿ, ಬಾಳೆ, ಕಾಳು ಮೆಣಸು ಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಿತ್ತು ಬೆಳೆ ಹಾನಿ ಮಾಡಿದ್ದಾರೆ’ ಎಂದು ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮದ ಕೆಲವು ರೈತರು ಆರೋಪಿಸಿದ್ದಾರೆ.

ಗ್ರಾಮದ ಕೆ.ಟಿ. ಗೋಪಾಲಗೌಡ ಅವರ ಸರ್ವೆ ನಂ.138 ರಲ್ಲಿ ಎರಡು ಎಕರೆ, ಕೆ.ಕೆ.ರಂಜನ್‌ ಅವರ ಸರ್ವೆ ನಂಬರ್‌ 47ರಲ್ಲಿ 2.30 ಎಕರೆ ಸೇರಿದಂತೆ ಕೆಲವು ರೈತರು ಬೆಳೆದಿರುವ ಗಿಡಗಳನ್ನು ಕಿತ್ತುಹಾಕಿರುವುದಾಗಿ ತಹಶೀಲ್ದಾರ್‌, ಉಪವಿಭಾಗಾಧಿಕಾರಿ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ ಎಂದು ರೈತ ಕೆ.ಜಿ.ಸುಬ್ರಹ್ಮಣ್ಯ ಹಾಗೂ ಕೆ.ಕೆ.ರಂಜನ್‌ ಸುದ್ದಿಗಾರರಿಗೆ ಹೇಳಿದರು.

ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತಹಶೀಲ್ದಾರ್‌ ಸ್ಥಳ ಪರಿಶೀಲಿಸಿ ಸಮಿತಿಗೆ ವರದಿ ಮಂಡಿಸುವಂತೆ ಆದೇಶಿಸಿದ್ದಾರೆ. ಭೂಮಿ ಮಂಜೂರಾತಿ ಹಂತದಲ್ಲಿ ಇರುವಾಗಲೇ ಅರಣ್ಯ ಇಲಾಖೆಯವರು ಗಿಡ ಕಿತ್ತು ಹಾನಿ ಮಾಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಹಿಡು‌ವಳಿ ಭೂಮಿಯಲ್ಲಿ ತೆರವುಗೊಳಿಸಿಲ್ಲ: ಕ್ಯಾನಹಳ್ಳಿ ಗ್ರಾಮದ ಹಿಡುವಳಿ ಭೂಮಿಯಲ್ಲಿ ಕಾಫಿ, ಬಾಳೆ, ಕಾಳುಮೆಣಸು ಗಿಡ ತೆರವುಗೊಳಿಸಿಲ್ಲ ಎಂದು ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಅಗಸೆ ಹೇಳಿದರು.

ಕೆಲವರು ಎಚ್‌ಆರ್‌ಪಿಯಿಂದ ಮಂಜೂರಾಗಿದೆ ಎಂದು ಹೇಳಿ ಸರ್ಕಾರಿ ನೆಡುತೋಪುಗಳಲ್ಲಿ ತೋಟ ಮಾಡಲು ಮುಂದಾಗಿದ್ದಾರೆ. ನೆಡುತೋಪುಗಳ ಎಚ್‌ಆರ್‌ಪಿ ಮಂಜೂರಾತಿ ರದ್ದುಗೊಳಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಮರಮಾಲಿಕೆ ಕಟ್ಟುವುದಕ್ಕೆ ಅವಕಾಶವೂ ಇಲ್ಲ. ಗ್ರಾಮದಲ್ಲಿ ಇರುವ ಸ್ವಲ್ಪ ಪ್ರಮಾಣದ ನೆಡುತೋಪು ಉಳಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಸರ್ಕಾರ ಇಲಾಖೆಗೆ ನೀಡಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.