ADVERTISEMENT

ಡಿ ಗ್ರೂಪ್ ನೌಕರರ ಮುಂದುವರಿಸಲು ಆಗ್ರಹ

ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 14:16 IST
Last Updated 2 ಫೆಬ್ರುವರಿ 2019, 14:16 IST
ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಎದುರು ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು
ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಎದುರು ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು   

ಹಾಸನ: ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಡಿ ಗ್ರೂಪ್ ನೌಕರರನ್ನೇ ಪ್ರಸಕ್ತ ಸಾಲಿನಲ್ಲೂ ಮುಂದುವರೆಸಬೇಕು ಹಾಗೂ ನವೀಕರಣ ಹಣ ಕಟ್ಟಿಸಿಕೊಳ್ಳಬಾರದು’ ಎಂದು ಆಗ್ರಹಿಸಿ ಹೊರಗುತ್ತಿಗೆ ನೌಕರರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಜಿಲ್ಲೆಯಾದ್ಯಂತ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ 275ಕ್ಕೂ ಹೆಚ್ಚು ಡಿ ಗ್ರೂಪ್ ನೌಕರರು ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಸ್ವಿಸ್ ಕಂಪೆನಿ ಗುತ್ತಿಗೆ ಪಡೆದಿದೆ. ಕಳೆದ ವರ್ಷ ಮುಂಗಡ ಹಣ ಎಂದು ಪ್ರತಿ ಅಭ್ಯರ್ಥಿಗಳಿಂದ₹ 10 ಸಾವಿರ ಕಟ್ಟಿಸಿ ಕೊಂಡಿದ್ದಾರೆ’ ಎಂದರು.

'ಇದೀಗ ಗುತ್ತಿಗೆ ಅವಧಿ ಮುಗಿದು ಮತ್ತೆ ಸ್ವಿಸ್ ಕಂಪೆನಿಗುತ್ತಿಗೆ ಪಡೆದುಕೊಂಡಿದೆ. ಕಂಪೆನಿಯಉಸ್ತುವಾರಿ ಇರುವ ಮಹೇಶ್ ಎಂಬುವರು ಈ ಬಾರಿ ಕೆಲಸದಲ್ಲಿ ಮುಂದುವರೆಯಲು ನವೀಕರಣ ಹಣ ಎಂದು ತಲಾ ₹ 6,700 ಕೇಳುತ್ತಿದ್ದಾರೆ. ಹೀಗೆ ಹಣ ಕೇಳುವುದು ಕಾನೂನು ಬಾಹಿರ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

‘ವಾಸ್ತವದಲ್ಲಿ ಪ್ರತಿ ನೌಕರನಿಗೆ ತಿಂಗಳಿಗೆ ₹ 9216 ಸಂಬಳ ಇದ್ದರೂ ಕೇವಲ ₹ 8,600 ನೀಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತರಲಾಗಿದೆ. ಈಗ ನವೀಕರಣ ಹಣ ನೀಡದಿದ್ದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಸುತ್ತಿದ್ದಾರೆ. ಅಭದ್ರತೆ ಉಂಟಾಗಿದೆ. ಗಮನಹರಿಸಿ ಕ್ರಮ ಕೈಗೊಳ್ಳಬೇಕು’ ಎಂದರು.

ಇತರೆ ಜಿಲ್ಲೆಗಳಲ್ಲಿ ನವೀಕರಣ ಹಣ ಕೇವಲ ₹ 200 ಇದೆ. ಆದರೆ ಹಾಸನದಲ್ಲಿ ಹೆಚ್ಚು ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ಇಲಾಖೆಯಿಂದ ಆದೇಶ ಇಲ್ಲ. ಅಧಿಕಾರಿಗಳು ಸ್ಪಷ್ಟ ಕಾರ್ಯಸೂಚಿ ಮಾಡಿ ನೌಕರರ ಹಿತ ಕಾಯಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯ 275 ಡಿ ಗ್ರೂಪ್ ನೌಕರರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಡಿ ಗ್ರೂಪ್‌ ನೌಕರರಾದ ಮಂಜುನಾಥ್, ದೇವರಾಜ್, ದರ್ಶನ್, ಲೋಕೇಶ್, ಶಂಭು, ಚಂದ್ರು, ರುದ್ರೇಶ್, ಚೇತನ್ ಬೆಳಗೋಡು ಬಸವರಾಜ್ ಸತೀಶ್, ಶೋಭಾ, ಆಶಾ, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ನಾಗರಾಜ್ ಹೆತ್ತೂರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.