ADVERTISEMENT

ಮಗಳು ನಾಪತ್ತೆ: ತಾಯಿ ಕಣ್ಣೀರು

ಡಿ.ಸಿ ಕಚೇರಿ ಎದುರು ವಿಷದ ಬಾಟಲಿ ಹಿಡಿದು ಏಕಾಂಗಿ ಧರಣಿ

​ಪ್ರಜಾವಾಣಿ ವಾರ್ತೆ
Published 7 ಮೇ 2022, 14:49 IST
Last Updated 7 ಮೇ 2022, 14:49 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪುಷ್ಪಾ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಸಮಾಧಾನ ಮಾಡಿದರು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪುಷ್ಪಾ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಸಮಾಧಾನ ಮಾಡಿದರು   

ಹಾಸನ: ಒಂದೂವರೆ ತಿಂಗಳಿಂದ ಕಾಣೆಯಾಗಿರುವ ಮಗಳಿಗಾಗಿ ಹೆತ್ತಮ್ಮ ಕಂಡ ಕಂಡವರ ಎದುರು ಕಣ್ಣೀರಿಡುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಕೈಯಲ್ಲಿ ವಿಷದ ಬಾಟಲಿ ಹಿಡಿದು ಏಕಾಂಗಿ ಧರಣಿ ನಡೆಸಿದ ಚನ್ನರಾಯಪಟ್ಟಣದ ಪುಷ್ಪಾ, ‘ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ನನ್ನ ಮಗಳನ್ನು ಕಗ್ಗಲಿ ಕಾವಲು ಗ್ರಾಮದ ಪವನ್ ಶೆಟ್ಟಿ ಇತರರು ಪ್ರೀತಿ ಕಾರಣಕ್ಕೆ ಪುಸಲಾಯಿಸಿ ಅಪಹರಿಸಿದ್ದಾರೆ’ ಎಂದು ಕಣ್ಣೀರಿಟ್ಟರು.

‘ಮಗಳು ಮನೆಯಿಂದ ಹೋಗಿ ಒಂದೂವರೆ ತಿಂಗಳು ಕಳೆದಿದ್ದರೂ, ಎಲ್ಲಿದ್ದಾಳೆ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಪೊಲೀಸರಿಗೆ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಕಣ್ಣೀರಿಡುತ್ತಲೇ ಆರೋಪಿಸಿದರು.

ADVERTISEMENT

‘ಮಗಳನ್ನು ಕೂಡಲೇ ಹುಡುಕಿ ಕೊಡಿ. ಇಲ್ಲವಾದರೆ ವಿಷ ಕುಡಿದು ಸಾಯುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಗಮನಿಸಿದ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಮಹಿಳೆಯ ಮನವೊಲಿಸಿ, ವಿಷದ ಬಾಟಲಿ ಕಿತ್ತುಕೊಂಡು ಸಮಾಧಾನಪಡಿಸಿದರು. ‘ಮಗಳನ್ನು ಪತ್ತೆ ಹಚ್ಚುವಂತೆ ಸಂಬಂಧ ಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ಅಭಯ ನೀಡಿದರು. ಇಷ್ಟಕ್ಕೂ ಸಮಾಧಾನವಾಗದ ಮಹಿಳೆ, ಶಾಸಕರ ಕಾಲಿಗೆ ಬಿದ್ದು, ‘ಎಲ್ಲೇ ಇದ್ದರೂ ವಾಪಸ್ ಕರೆಸಿಕೊಡಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.