ADVERTISEMENT

ಹಾಸನ ಜಿಲ್ಲೆಯಲ್ಲಿ ಒಂದೇ ದಿನ 23 ಕೋವಿಡ್-19 ಪ್ರಕರಣ

122ಕ್ಕೇರಿದ ಸೋಂಕು

​ಪ್ರಜಾವಾಣಿ ವಾರ್ತೆ
Published 26 ಮೇ 2020, 17:13 IST
Last Updated 26 ಮೇ 2020, 17:13 IST
ಆರ್‌.ಗಿರೀಶ್‌
ಆರ್‌.ಗಿರೀಶ್‌   

ಹಾಸನ: ಹೊಳೆನರಸೀಪುರದ ಪಿಎಸ್‌ಐ ಹಾಗೂ ಮೂವರು ಕಾನ್‌ಸ್ಟೆಬಲ್‌, ಹಾಸನದ ಮೂವರು ಕೆಎಸ್‌ಆರ್‌ಪಿ ಪೊಲೀಸರು ಸೇರಿದಂತೆ ಜಿಲ್ಲೆಯ 23 ಜನರಿಗೆ ಕೊರೊನಾ ವೈರಸ್‌ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 122 ಕ್ಕೆ ಏರಿಕೆಯಾಗಿದೆ.

ಮೇ 20ರಂದು ಮುಂಬೈನಿಂದ ಮಿನಿ ಬಸ್‍ನಲ್ಲಿ ಬಂದಿದ್ದ 27 ಜನರಲ್ಲಿ 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಎಲ್ಲರೂ ಚನ್ನರಾಯಪಟ್ಟಣ ತಾಲ್ಲೂಕಿನ ಬೇರೆ ಬೇರೆ ಕುಟುಂಬದವರಾಗಿದ್ದಾರೆ. 12 ವರ್ಷದ (ಪಿ 2220) ಬಾಲಕ, 20 ವರ್ಷದ (ಪಿ 2221) ಯುವತಿ, 52 (ಪಿ 2222) ವರ್ಷದ ಮಹಿಳೆ, 14 ವರ್ಷದ (ಪಿ 2223) ಬಾಲಕ, 35 ವರ್ಷದ (ಪಿ 2224) ಮಹಿಳೆ, 40 ವರ್ಷದ (ಪಿ 2225) ಮಹಿಳೆ, 10 ವರ್ಷದ (ಪಿ 2226) ಮಗು, 52 ವರ್ಷದ (ಪಿ 2227) ವ್ಯಕ್ತಿ, 17 ವರ್ಷದ (ಪಿ 2228) ಬಾಲಕಿ, 45 ವರ್ಷದ (ಪಿ 2229) ಪುರುಷ, 35 ವರ್ಷದ (ಪಿ 2230) ಮಹಿಳೆ ಹಾಗೂ 54 ವರ್ಷದ (ಪಿ 2273) ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಅಲ್ಲದೇ ಸೋಂಕಿತ ಪೊಲೀಸ್‌ ಕಾನ್‌ಸ್ಟೆಬಲ್ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 21 ಪೊಲೀಸರ ಗಂಟಲು ದ್ರವ ಪರೀಕ್ಷೆ ನಡೆದಿದ್ದು, 18 ಜನರ ವರದಿ ನೆಗೆಟಿವ್ ಬಂದಿದ್ದು, 3 ಜನರಿಗೆ ಪಾಸಿಟಿವ್ ಬಂದಿದೆ.

ಮುಂಬೈನ ಅಂಧೇರಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಚನ್ನರಾಯಪಟ್ಟಣದ 53 ವರ್ಷದ (ಪಿ 2219) ವ್ಯಕ್ತಿ ಮೇ 20 ರಂದು ಇನ್ನೊವಾ ಕಾರಿನಲ್ಲಿ ಬಂದಿದ್ದರು. ಎರಡು ಬ್ಯಾಚ್‍ನಲ್ಲಿ 13 ಜನರು ಬಂದಿದ್ದು ಕಾರು ಚಾಲಕ ಮುಂಬೈಗೆ ವಾಪಸ್ಸಾಗಿದ್ದಾರೆ. ಉಳಿದ 12 ಜನ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಹಿಮ್ಸ್ ಲ್ಯಾಬ್‍ನಲ್ಲಿ ಕೋವಿಡ್-19 ಟೆಸ್ಟ್ ವರದಿ ಕೈ ಸೇರುವುದು ನಿಧಾನವಾಗುತ್ತಿದ್ದು ಸೋಮವಾರ ಬೆಂಗಳೂರಿಗೆ 480 ಸ್ಯಾಂಪಲ್ ಕಳುಹಿಸಲಾಗಿದೆ. ನಮ್ಮಲ್ಲಿ ನಿತ್ಯ 250 ಟೆಸ್ಟ್ ಮಾತ್ರ ನಡೆಯುತ್ತಿದೆ. 14 ದಿನ ಕ್ವಾರಂಟೈನ್ ಮುಗಿಸಿದರೂ ಕೆಲವರ ವರದಿ ಕೈ ಸೇರಿಲ್ಲ. ಹೀಗಾಗಿ ಸ್ವಲ್ಪ ಸಮಸ್ಯೆಯಾಗಿದೆ. ಒಂದೆರಡು ದಿನದಲ್ಲಿ ಎಲ್ಲರ ವರದಿ ಲಭ್ಯವಾಗುತ್ತದೆ ಎಂದರು.

ಮೇ 12ರಂದು ದಾಖಲಾದ 5 ಜನ ಸೋಂಕಿತರ ಬಿಡುಗಡೆಯನ್ನು ಹಂತ ಹಂತವಾಗಿ ಮಾಡಲಾಗುವುದು. ಮರು ಪರೀಕ್ಷೆಯಲ್ಲಿ ಒಬ್ಬರ ಮೊದಲ ವರದಿ ನೆಗೆಟಿವ್ ಬಂದಿದ್ದು ಮತ್ತೊಂದು ಪರೀಕ್ಷೆ ವರದಿ ಬರಬೇಕಿದೆ. ಒಟ್ಟು ಸಕ್ರಿಯ ಪ್ರಕರಣಗಳು 122 ಎಂದು ಪರಿಗಣಿಸಲಾಗಿದೆ.

ಉತ್ತರ ಬಡಾವಣೆ ಕೊರೊನಾ ಸೋಂಕಿತ ಮಹಿಳೆ ಜತೆಗೆ ಐದು ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದು, ಅವರ ವರದಿ ನೆಗೆಟಿವ್ ಆಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮನೆ ಸುತ್ತಲಿನ 100 ಮೀಟರ್‌ ಪ್ರದೇಶವನ್ನು ಕಂಟೈನ್‌ಮೆಂಟ್ ಪ್ರದೇಶವನ್ನಾಗಿ 200 ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಆಗಿ ಘೋಷಿಸಲಾಗಿದೆ. ನಗರಸಭೆ ಆಯುಕ್ತರನ್ನು ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದು ಸಂಸ್ಕೃತ ಭವನದಲ್ಲಿ ಕೊಠಡಿ ತೆರೆಯಲಾಗಿದೆ. 28 ದಿನ ಆ ಪ್ರದೇಶವನ್ನು ನಿರ್ಬಂಧಿತ ಪ್ರದೇಶವಾಗಲಿದೆ ಎಂದು ತಿಳಿಸಿದರು.

ಹೊರ ರಾಜ್ಯದಿಂದ ಬರುತ್ತಿರುವವರ ಮೇಲೆ ಎಷ್ಟೇ ನಿಗಾ ಇರಿಸಿದರೂ ಕ್ವಾರಂಟೈನ್‍ಗೆ ಹೆದರಿ ಕಣ್ತಪ್ಪಿಸಿ ಮನೆ ಸೇರಿರುವವರ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಜಿಲ್ಲಾಡಳಿತ (08172-261111) ಸಹಾಯವಾಣಿ ತೆರೆದಿದ್ದು, ಸಾರ್ವಜನಿಕರು ಇಲ್ಲಿಗೆ ಕರೆ ಮಾಡಿ ಹೊರಗಿನಿಂದ ಬಂದವರ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಕೋರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‍ಕುಮಾರ್ ಇದ್ದರು.

ದೂರು ದಾಖಲು: ಎಸ್ಪಿ ಎಚ್ಚರಿಕೆ
ಕೊರೊನಾ ಸೋಂಕಿತರ ಫೋಟೊ ಹಾಗೂ ಗುರುತನ್ನು ಸಾಮಾಜಿಕ ಜಾಲತಾಣ ಫೆಸ್‌ ಬುಕ್‌ ವಾಟ್ಸ್‌ ಆಪ್ ಮೂಲಕ ಹರಿಬಿಟ್ಟಿದ್ದ ಇಬ್ಬ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಕೊರೊನಾಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹರಿಬಿಡುವ ಮತ್ತು ಸೋಂಕಿತರ ಊರು ವಿಳಾಸ ಬಹಿರಂಗ ಪಡಿಸುವ ವೀಡಿಯೋ ಮಾಡುವವರ ಮೇಲೆ ಪೊಲೀಸ್‌ ಇಲಾಖೆ ಕಣ್ಣಿಟ್ಟಿದೆ. ಏನೇ ಮಾಹಿತಿ ಇದ್ದರೂ ಮೊದಲು ನಮಗೆ ತಿಳಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ ಗೌಡ ಎಚ್ಚರಿಕೆ ನೀಡಿದರು.

ನಾಳೆ ಶ್ರಮಿಕ್ ರೈಲು
ಹೊರ ರಾಜ್ಯದ ಕಾರ್ಮಿಕರನ್ನು ಕಳುಹಿಸಿಕೊಡಲು ವಿಶೇಷ ಶ್ರಮಿಕ್ ರೈಲು ಮೇ 28 ರಂದು ಹಾಸನದಿಂದ ಹೊರಡಲಿದೆ. ಹಾಸನದ 940, ಮಡಿಕೆರಿಯ 450 ವಲಸೆ ಕಾರ್ಮಿಕರು ಬಿಹಾರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗಡಿ ಚೆಕ್‌ಪೋಸ್ಟ್‌ ಕಾರ್ಯದಿಂದ ಕೋವಿಡ್
ಹೊಳೆನರಸೀಪುರ:
ಇಲ್ಲಿಯ ಪಿಎಸ್ಐ ಹಾಗೂ 3 ಜನ ಕಾನ್‌ಸ್ಟೆಬಲ್ ಸೇರಿದಂತೆ 4 ಜನರಿಗೆ ಕೋವಿಡ್‌ -19 ದೃಢಪಟ್ಟಿದೆ.

ಬೆಳಗಾವಿಯ ನಿಪ್ಪಾಣಿ ಗಡಿಯ ಚೆಕ್‌ ಪೋಸ್ಟ್‌ನಲ್ಲಿ 15 ದಿನ ಕರ್ತವ್ಯ ನಿರ್ವಹಿಸಿ ಭಾನುವಾರ ಹೊಳೆನರಸೀಪುರಕ್ಕೆ ಮರಳಿದ್ದರು. ಈ ನಾಲ್ಕು ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಸೋಮವಾರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳಿಸಿದ್ದು, ಮಂಗಳವಾರ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇವರನ್ನು ಹಾಸನ ಕೋವಿಡ್‌ ಆಸ್ಪತ್ರೆಯ ಐಸೋಲೇಷನ್ ಸೆಂಟರ್‌ನಲ್ಲಿ ಇರಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ತಕ್ಷಣ ಪಟ್ಟಣದ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸಿದರು.

ಪೊಲೀಸರು ವಾಸ ಇದ್ದ ಸ್ಥಳವನ್ನು ಕಂಟೈನ್‌ಮೆಂಟ್ ಪ್ರದೇಶವೆಂದು ಘೋಷಿಸಲಾಯಿತು. ಪಟ್ಟಣಕ್ಕೆ ಬಂದ ಉಪವಿಭಾಗಾಧಿಕಾರಿ ನವೀನ್ ಭಟ್ ಈ ಜಾಗಗಳಲ್ಲಿ ಯಾರನ್ನೂ ಓಡಾಡಲು ಬಿಡಬೇಡಿ ಎಂದು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಔಷಧಿ ಸಿಂಪಡಿಸಲು ಸೂಚಿಸಿ, ಔಷಧಿ ಸಿಂಪಡಿಸುವುದನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.