ADVERTISEMENT

ರಸ್ತೆಗಿಳಿದು ಅಂಗಡಿ ಬಾಗಿಲು ಮುಚ್ಚಿಸಿದ ಡಿ.ಸಿ

ಭಾಗಶಃ ಲಾಕ್‌ಡೌನ್‌ಗೆ ವರ್ತಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 14:05 IST
Last Updated 22 ಏಪ್ರಿಲ್ 2021, 14:05 IST
ಹಾಸನದ ಹೊಸ ಲೈನ್‌ ರಸ್ತೆಯಲ್ಲಿ ಅಂಗಡಿ ಬಾಗಿಲು ಮುಚ್ಚಿಸಿದ ಜಿಲ್ಲಾಧಿಕಾರಿ ಆರ್‌.ಗಿರೀಶ್‌
ಹಾಸನದ ಹೊಸ ಲೈನ್‌ ರಸ್ತೆಯಲ್ಲಿ ಅಂಗಡಿ ಬಾಗಿಲು ಮುಚ್ಚಿಸಿದ ಜಿಲ್ಲಾಧಿಕಾರಿ ಆರ್‌.ಗಿರೀಶ್‌   

ಹಾಸನ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಮೇ 4 ರ ವರೆಗೆ ಭಾಗಶಃ ಲಾಕ್‌ ಡೌನ್‌ ಜಾರಿಮಾಡಲಾಗಿದೆ.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಬೆಳಿಗ್ಗೆಯಿಂದಲೇ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಮಾರುಕಟ್ಟೆ ಪ್ರದೇಶ ಹಾಗೂ ಬಡಾವಣೆಗಳಲ್ಲಿಅಂಗಡಿಗಳನ್ನು ದಿಢೀರ್‌ ಬಂದ್‌ ಮಾಡಿಸಿದ್ದರಿಂದ ವ್ಯಾಪಾರಿಗಳು,
ಸಾರ್ವಜನಿಕರು ಆತಂಕಗೊಂಡರು. ಸ್ವತಃ ಜಿಲ್ಲಾಧಿಕಾರಿ ಆರ್.ಗಿರೀಶ್‌ ರಸ್ತೆಗಿಳಿದು ಅಂಗಡಿಗಳ ಬಾಗಿಲು ಮುಚ್ಚಿಸಿದರು.

ಸರ್ಕಾರದ ಆದೇಶದ ಅನ್ವಯ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ,ಶನಿವಾರ ಮತ್ತು ಭಾನುವಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿತ್ತು.ಆದರೆ ಏಕಾಏಕಿ ಕಾರ್ಯಾಚರಣೆ ನಡೆಸಿದ್ದು ವ್ಯಾಪಾರಿಗಳ ಆಕ್ರೋಶಕ್ಕೆ
ಕಾರಣವಾಯಿತು. ವರ್ತಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಅವರಿಗೆ ಪೊಲೀಸರು ಮನವರಿಕೆ ಮಾಡಿದರು.

ADVERTISEMENT

ಪೊಲೀಸ್‌ ಸಿಬ್ಬಂದಿಯೊಂದಿಗೆ ರಸ್ತೆಗೆ ಇಳಿದ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ನಗರ ಬಸ್‌ ನಿಲ್ದಾಣ ರಸ್ತೆ, ಎ.ವಿ.ಕೆ. ಕಾಲೇಜು ರಸ್ತೆ, ಆರ್‌.ಸಿ. ರಸ್ತೆ, ಎಂ.ಜಿ. ರಸ್ತೆ, ದೊಡ್ಡಿ ರಸ್ತೆ, ಕಸ್ತೂರ ಬಾ ರಸ್ತೆ, ಬಿ.ಎಂ. ರಸ್ತೆ ಸೇರಿದಂತೆ ವಿವಿಧೆಡೆ
ಸಂಚರಿಸಿ, ಬಾಗಿಲು ಮುಚ್ಚುವಂತೆ ಅಂಗಡಿಗಳ ಮಾಲೀಕರಿಗೆ ಸೂಚಿಸಿದರು.

ನಗರಾದಾದ್ಯಂತ ಬಹುತೇಕ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಲಾಯಿತು.ವಿವಿಧಡೆಯಿಂದ ಸಾಮಗ್ರಿ ಖರೀದಿಗೆ ಬಂದಿದ್ದವರು ಬರಿಗೈಲಿ ಹಿಂತಿರುಗಿದರು.ಧ್ವನಿವರ್ಧಕ ಮೂಲಕ ಪೊಲೀಸರು, ನಗರಸಭೆ ಸಿಬ್ಬಂದಿ ಅಂಗಡಿ ಮುಚ್ಚುವಂತೆಸೂಚನೆ ನೀಡಿದರು.

ಬಟ್ಟೆ, ಜೆರಾಕ್ಸ್‌ ಅಂಗಡಿ, ಪಿಠೋಪಕರಣ ಮಳಿಗೆ, ಚಿನ್ನಬೆಳ್ಳಿ ಆಭರಣಗಳ ಅಂಗಡಿ,ಪಾತ್ರೆ ಅಂಗಡಿ, ಮೊಬೈಲ್‌ ಶಾಪ್‌, ಶಾಪಿಂಗ್ ಮಾಲ್‌ ಸೇರಿದಂತೆ ಅನೇಕಅಂಗಡಿಗಳ ಬಾಗಿಲು ಮುಚ್ಚಿಸಲಾಯಿತು.

ದಿನಸಿ, ಹಾಲು, ತರಕರಿ, ಮಾಂಸ, ಮೀನು ಮಾರಾಟ, ಮದ್ಯದಂಗಡಿ ಹಾಗೂ ಕೃಷಿ ಮತ್ತು ಕಟ್ಟಡ ನಿರ್ಮಾಣ ಸಂಬಂಧದ ಅಗತ್ಯ ವಸ್ತುಗಳ ಮಾರಾಟಕ್ಕೆಮಾತ್ರವೇ ಅವಕಾಶ ನೀಡಲಾಗಿತ್ತು.

ನಗರದ ಎಸ್‌ಆರ್‌ಎಸ್‌ ಆಭರಣ ಅಂಗಡಿಯಲ್ಲಿ ಖರೀದಿಸಲು ಬಂದಿದ್ದ ಗ್ರಾಹಕರು ಮಾಸ್ಕ್‌ ಧರಿಸಿರಲಿಲ್ಲ. ಹೆಚ್ಚು ಜನರು ಸೇರಿದ್ದರು. ಅಂಗಡಿ ಮಾಲೀಕರು ನಗರಸಭೆ ಸಿಬ್ಬಂದಿ ₹50 ಸಾವಿರ ದಂಡ ವಿಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.