ಹಾಸನ: ತಾಲ್ಲೂಕಿನ ಧೂಮಗೆರೆ ಗ್ರಾಮದ ಬಳಿ ಇರುವ ಗ್ರಾನೈಟ್ ಕಲ್ಲು ಕ್ವಾರಿಯಲ್ಲಿ ನಡೆದ ಘಟನೆಗಳಿಂದ ಹಲವು ಅನುಮಾನಗಳು ಸಾರ್ವಜನಿಕರನ್ನು ಕಾಡುತ್ತಿವೆ.
ಗ್ರಾಮದ ನವ್ಯಶ್ರೀ ಮಿನರಲ್ಸ್‌ಗೆ ಸೇರಿದ ಗ್ರೀನ್ ಗ್ರಾನೈಟ್ ಕ್ವಾರಿಯಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಅವಘಡ ಸಂಭವಿಸಿದೆ. ಗಾಯಗೊಂಡಿರುವ ಕಾರ್ಮಿಕರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕನನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಮಧ್ಯಾಹ್ನವೇ ಇಷ್ಟೆಲ್ಲ ನಡೆದಿದ್ದರೂ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಘಟನೆ ಮಾಹಿತಿ ಸಿಕ್ಕಿದ್ದು ರಾತ್ರಿ 10.30 ರ ನಂತರ. ಇದು ಹಲವು ಅನುಮಾನಗಳಿಗೆ ಕಾರಣವಾಗಿವೆ.
ಮಾಹಿತಿ ಮುಚ್ಚಿಟ್ಟ ಮಾಲೀಕ: ಕಲ್ಲು ಕ್ವಾರಿಯಲ್ಲಿ ದುರಂತ ನಡೆದಿದ್ದರೂ, ಸ್ಥಳೀಯ ಪೊಲೀಸರು, ಆಸ್ಪತ್ರೆ ವೈದ್ಯರು ಸೇರಿದಂತೆ ಯಾರಿಗೂ ಘಟನೆಯ ಕುರಿತು ಮಾಲೀಕರು ಮಾಹಿತಿ ನೀಡಿಲ್ಲ. ಗಾಯಗೊಂಡಿರುವ ನಾಲ್ವರು ಕಾರ್ಮಿಕರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯೂ ‘ಕಲ್ಲಿನ ಮೇಲೆ ಬಿದ್ದು ಗಾಯಗೊಂಡಿದ್ದಾರೆ’ ಎಂದಷ್ಟೇ ಹೇಳಿದ್ದಾರೆ.
‘ಇದರ ಜೊತೆಗೆ ತೀವ್ರ ಗಾಯಗೊಂಡಿದ್ದ ಕಾರ್ಮಿಕ ಮಣಿ (40) ಅನ್ನು ಬೆಂಗಳೂರಿಗೆ ರವಾನಿಸಿದ್ದು, ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆಗಲಾದರೂ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಅದನ್ನು ಬಿಟ್ಟು, ಯಾರಿಗೂ ತಿಳಿಸದೇ ಮೃತದೇಹವನ್ನು ನೇರವಾಗಿ ತಮಿಳುನಾಡಿಗೆ ರವಾನಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ಇನ್ನೊಂದೆಡೆ ಗಾಯಾಳುಗಳು ದಾಖಲಾಗಿರುವ ಕುರಿತು ಆಸ್ಪತ್ರೆಯಿಂದಲೂ ಎಂಎಲ್‌ಸಿ ಮಾಡಿಲ್ಲ. ಅಲ್ಲದೇ ಈ ರೀತಿಯ ವ್ಯಕ್ತಿಗಳು ಗಾಯಗೊಂಡು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನೂ ಪೊಲೀಸರಿಗೆ ನೀಡಿಲ್ಲ. ಮೇಲ್ನೋಟಕ್ಕೆ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಹೇಳಿಕೆಗಳಲ್ಲಿ ವೈರುಧ್ಯ: ಘಟನೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಶ್ರೀನಿವಾಸ ಹಾಗೂ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಅವರ ಹೇಳಿಕೆಗಳೂ ವೈರುಧ್ಯದಿಂದ ಕೂಡಿವೆ.
‘ಇದು ಗ್ರಾನೈಟ್ ಗಣಿಗಾರಿಕೆ ಕ್ವಾರಿ. ಇಲ್ಲಿ ಸ್ಫೋಟ ಮಾಡಿದರೆ, ಗ್ರಾನೈಟ್ ಸಿಗುವುದಿಲ್ಲ. ಹಾಗಾಗಿ ಕಲ್ಲನ್ನು ಕತ್ತರಿಸುತ್ತಿದ್ದರು. ಆಗ ಘಟನೆ ನಡೆದಿದೆ’ ಎಂದು ಶ್ರೀನಿವಾಸ್ ಹೇಳಿದರೆ, ‘ಮೇಲ್ನೋಟಕ್ಕೆ ಸ್ಫೋಟದಿಂದಲೇ ಈ ಘಟನೆ ನಡೆದಿರುವುದು ತಿಳಿದು ಬಂದಿದೆ. ಎಫ್‌ಎಸ್‌ಎಲ್ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ’ ಎಂದು ಐಜಿಪಿ ಬೋರಲಿಂಗಯ್ಯ ಹೇಳಿಕೆ ನೀಡಿದ್ದಾರೆ.
ಕ್ವಾರಿ ಮಾಲೀಕನಿಗೆ ಜಿಲ್ಲಾಧಿಕಾರಿ ತರಾಟೆ
ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಎಸ್ಪಿ ಮೊಹಮ್ಮದ್ ಸುಜೀತಾ ಉಪವಿಭಾಗಾಧಿಕಾರಿ ಮಾರುತಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಶ್ರೀನಿವಾಸ ಅವರೊಂದಿಗೆ ರಾತ್ರಿಯೇ ಕಲ್ಲು ಕ್ವಾರಿಗೆ ಭೇಟಿ ನೀಡಿದರು. ಸ್ಥಳೀಯ ಕಾರ್ಮಿಕರು ಪೊಲೀಸರಿಂದ ಮಾಹಿತಿ ಪಡೆದರು. ಕಲ್ಲು ಕ್ವಾರಿ ಮಾಲೀಕ ದೇವರಾಜ್ ಅವರನ್ನು ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸಿದರು. ಘಟನೆಯ ಬಗ್ಗೆ ಮಾಹಿತಿ ನೀಡಿದ ದೇವರಾಜ್ ‘ಕಲ್ಲನ್ನು ಬಿಚ್ಚುವಾಗ ಮೇಲಿನಿಂದ ಬಿದ್ದು ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ’ ಎಂದರು. ‘ಇನ್ನೊಬ್ಬರನ್ನು ಬೆಂಗಳೂರಿಗೆ ಕಳುಹಿಸಿದ್ದು ಅವರ ಸ್ಥಿತಿ ಹೇಗೆ’ ಎಂದು ಸತ್ಯಭಾಮಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ದೇವರಾಜ್ ‘ವೈದ್ಯರು 24 ಗಂಟೆ ನಿರೀಕ್ಷಣೆಯಲ್ಲಿ ಇಡುವುದಾಗಿ ಹೇಳಿದ್ದಾರೆ’ ಎಂದರು. ‘ಘಟನೆಯ ಬಗ್ಗೆ ಯಾರಿಗೂ ಏಕೆ ಮಾಹಿತಿ ನೀಡಿಲ್ಲ’ ಎಂದು ದೇವರಾಜ್ ಅವರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ‘ನೀವು ಉದ್ಯಮಿಗಳಲ್ಲವೇ? ಲಾಭವನ್ನಷ್ಟೇ ನೋಡುವವರು. ಜನರ ಜೀವಕ್ಕೆ ಬೆಲೆ ಎಲ್ಲಿ ಕೊಡುತ್ತೀರಿ’ ಎಂದು ಕಿಡಿ ಕಾರಿದರು. ಮಾಹಿತಿ ಮುಚ್ಚಿಟ್ಟಿರುವ ಕುರಿತು ಇವರ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.