ADVERTISEMENT

ಶಾಲೆ ತೆರೆಯುವ ವಿಚಾರ: ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ

ಶಾಲಾ, ಕಾಲೇಜು ತೆರೆಯಲು ಅಭಿಪ್ರಾಯ ಸಂಗ್ರಹ; ಕೆ.ಗೋಪಾಲಯ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 14:52 IST
Last Updated 8 ಅಕ್ಟೋಬರ್ 2020, 14:52 IST
ಕೆ.ಗೋಪಾಲಯ್ಯ
ಕೆ.ಗೋಪಾಲಯ್ಯ   

ಹಾಸನ: ರಾಜ್ಯದಲ್ಲಿ ಶಾಲಾ, ಕಾಲೇಜುಗಳನ್ನು ತೆರೆಯುವ ಕುರಿತು ಮುಂದಿನ ಗುರುವಾರ ಕ್ಯಾಬಿನೆಟ್‌ ನಲ್ಲಿ ಚರ್ಚಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಶಾಲಾ, ಕಾಲೇಜು ತೆರೆಯುಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಡ ಹೇರಿಲ್ಲ ಅಥವಾ ಲಾಬಿ ನಡೆಸಿಲ್ಲ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ತಜ್ಞರು, ಪೋಷಕರು, ಸಾರ್ವಜನಿಕರು, ಆರೋಗ್ಯ ಇಲಾಖೆ ಅಧಿಕಾರಿಗಳು, ರಾಜಕೀಯ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಾಗುವುದು. ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದು,
ಕ್ಯಾಬಿನೆಟ್‌ ಸಭೆಯ ನಂತರವೇ ಸ್ಪಷ್ಟ ತೀರ್ಮಾನ ಹೊರಬರಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ
ತಿಳಿಸಿದರು.

ರಾಜ್ಯ ಸರ್ಕಾರ ಕೋವಿಡ್‌ ತಡೆಗಟ್ಟಲು ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಇದರಲ್ಲಿ ಸಾರ್ವಜನಿಕರ ಸಹಕಾರವೂ
ಅಗತ್ಯ. ಹೊಟ್ಟೆ ಪಾಡಿಗಾಗಿ ವೃತ್ತಿ ಮಾಡಲು ಹೊರಗೆ ಹೋಗಬೇಕಾಗಿದೆ. ಪ್ರತಿಯೊಬ್ಬರು ಅಂತರ ಪಾಲನೆ,
ಮಾಸ್ಕ್‌ ಧರಿಸುವುದು ಕಡ್ಡಾಯ. ಆದ್ದರಿಂದಲೇ ಮಾಸ್ಕ್‌ ಧರಿಸದೇ ಇರುವವರಿಗೆ ದಂಡ ವಿಧಿಸಲಾಗುತ್ತಿದೆ.
ದಂಡ ಕಟ್ಟಲು ಅನುವು ಮಾಡಿಕೊಡದಂತೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಸಲಹೆ
ನೀಡಿದರು.

ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಹೆಚ್ಚಿನ ಹಣ ಪಡೆಯುತ್ತಿದ್ದರೆ ಜಿಲ್ಲಾಧಿಕಾರಿ ಅಥವಾ ನನ್ನ ಗಮನಕ್ಕೆ
ತಂದರೆ ಅಂತಹ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಐದಾರು ಪ್ರಕರಣಗಳಲ್ಲಿ ವೈಯಕ್ತಿಕವಾಗಿ ಕರೆ
ಮಾಡಿದವರಿಗೆ ಚಿಕಿತ್ಸಾ ವೆಚ್ಚದ ಶುಲ್ಕ ಕಡಿಮೆ ಮಾಡಿಸಿದ್ದೇನೆ. ಅಲ್ಲದೇ ನಿಗದಿಗಿಂತ ಹೆಚ್ಚಿನ ಶುಲ್ಕ ವಸೂಲು
ಮಾಡಿದ ಬೆಂಗಳೂರಿನ ಕೆಲವು ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ ಎಂದರು.

ಶಿರಾ ಮತ್ತು ಆರ್‌ಆರ್‌ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಎರಡು ದಿನದಲ್ಲಿ
ಹೈಕಮಾಂಡ್‌ ಪ್ರಕಟಿಸಲಿದೆ. ಚುನಾವಣೆ ಸಂದರ್ಭದಲ್ಲಿ ಆರೋಪ, ಪ್ರತ್ಯಾರೋಪಗಳು ಇರುವುದು ಸಹಜ.
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರ ಜತೆ ಚರ್ಚಿಸಲಾಗುವುದು. ಹಲವು
ವರ್ಷಗಳ ಬಳಿಕ ಭರ್ತಿಯಾಗಿರುವ ಹಳೇಬೀಡು ದ್ವಾರಸಮುದ್ರ ಕೆರೆಗೆ ಶನಿವಾರ ಬಾಗಿನ ಅರ್ಪಿಸಲಾಗುವುದು. ಹಾಗೆಯೇ ಕೆರೆ ಕಟ್ಟೆಯ ದುರಸ್ತಿಗೂ ಕ್ರಮ ವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಪ್ರೀತಂ ಜೆ.ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.