ADVERTISEMENT

ರೋಗ ನಿರೋಧಕ ಮಾತ್ರೆಗೆ ಬೇಡಿಕೆ

ಜಿಲ್ಲೆಯಲ್ಲಿ 32 ಸಾವಿರ ಜನರಿಗೆ ಔಷಧ ವಿತರಣೆ‌

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 14:53 IST
Last Updated 23 ಜುಲೈ 2020, 14:53 IST

ಹಾಸನ: ಕೊರೊನಾ ಸೋಂಕಿನ ಭೀತಿಯಿಂದ ಆಯುಷ್ ಇಲಾಖೆ ನೀಡುತ್ತಿರುವ ರೋಗ ನಿರೋಧಕ ಮಾತ್ರೆಗಳಿಗೆ ಬೇಡಿಕೆ ಹೆಚ್ಚಿದೆ.

ಕೋವಿಡ್‌ಗೆ ಇನ್ನೂ ಔಷಧ ದೊರೆಯದ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಕಡೆ ಜನರು ಗಮನ ಹರಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 32 ಸಾವಿರ ಜನರಿಗೆ ಮಾತ್ರೆ, ಔಷಧ ವಿತರಿಸಿದ್ದು, ಶೇಕಡಾ 85 ರಷ್ಟು ಖರ್ಚಾಗಿದೆ. ಉಚಿತವಾಗಿ ಔಷಧ ವಿತರಿಸುತ್ತಿರುವ ಕಾರಣ ಬೇಡಿಕೆ ಹೆಚ್ಚಿದ್ದು, ಮತ್ತಷ್ಟು ಔಷಧಗಳ ಪೂರೈಕೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆರ್ಸೆನಿಕ್ ಆಲ್ಬಂ 30 (ಹೋಮಿಯೋಪತಿ), ಸಂಶಮನವಟಿ (ಆಯುರ್ವೇದ) ಹಾಗೂ ಆರ್ಕೆ ಅಝೀಬ್ (ಯುನಾನಿ) ಮಾತ್ರೆಗಳನ್ನು ಜೂನ್‌ 10 ರಿಂದ ವಿತರಿಸಲಾಗುತ್ತಿದೆ. ಆಯುಷ್ ಇಲಾಖೆ ವ್ಯಾಪ್ತಿಯ 58 ಚಿಕಿತ್ಸಾಲಯಗಳ ಮೂಲಕ ಸಿಬ್ಬಂದಿ ಅವಶ್ಯಕತೆ ಇರುವವರಿಗೆ ವಿತರಿಸುತ್ತಿದ್ದಾರೆ. ಕ್ವಾರಂಟೈನ್‌ನಲ್ಲಿದ್ದವರಿಗೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಕಷಾಯ ಚೂರ್ಣವನ್ನು ನೀಡಲಾಗುತ್ತಿದೆ.

ADVERTISEMENT

ಆಯುಷ್ ಇಲಾಖೆ ಜಿಲ್ಲೆಗೆ 25 ಸಾವಿರ ಆರ್ಸೆನಿಕ್ ಆಲ್ಬಂ ಮಾತ್ರೆ, 55 ಸಾವಿರ ಆರ್ಕೆ ಅಝೀಬ್ ಬಾಟಲಿ ಹಾಗೂ 50 ಸಾವಿರ ಸಂಶಮನವಟಿ ಬಾಟಲಿ ಪೂರೈಸಿತ್ತು. ಆರ್ಸೆನಿಕ್ ಆಲ್ಬಂ ಮಾತ್ರೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿರಂತರವಾಗಿ ಮೂರು ದಿನ ತೆಗೆದುಕೊಳ್ಳಬೇಕು. ಮತ್ತೆ ಅದನ್ನು ಒಂದು ತಿಂಗಳ ನಂತರ ಪಡೆಯಬೇಕು. ಮಾತ್ರೆ ನುಂಗಿದ ಬಳಿಕ ಅರ್ಧ ಗಂಟೆ ಏನನ್ನೂ ಸೇವಿಸಬಾರದು. ಆರ್ಕೆ ಅಝೀಬ್ ಅನ್ನು ಒಂದು ಹನಿ ಬಿಸಿ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳಬೇಕು. ಸಂಶಮನವಟಿಯನ್ನು ಬಿಸಿ ನೀರಿನೊಂದಿಗೆ 15 ದಿನಗಳವರೆಗೆ ದಿನಕ್ಕೆ ಎರಡು ಬಾರಿಯಂತೆ ತೆಗೆದುಕೊಳ್ಳಬೇಕು ಎಂದು ಡಾ.ಲಕ್ಷ್ಮೀಶ್‌ ಸಲಹೆ ನೀಡಿದರು.

‘ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಆಯುಷ್ ಇಲಾಖೆಯಿಂದ ಮಾತ್ರೆ ವಿತರಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಶಾಸಕರು ಔಷಧ ಹಾಗೂ ಮಾತ್ರೆ ನೀಡುವಂತೆ ಕೇಳಿದ್ದಾರೆ. ಔಷಧಗಳಿಗೆ ಬೇಡಿಕೆ ಹೆಚ್ಚಿದ್ದು ಮತ್ತಷ್ಟು ನೀಡುವಂತೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ದಾಸ್ತಾನಿದ್ದ ಎಲ್ಲ ಮಾತ್ರೆಗಳು ಖಾಲಿಯಾಗಿವೆ. ಈಗ ತಯಾರಿಸುವ ಕಾರ್ಯ ನಡೆಯುತ್ತಿದ್ದು ಹಂತ, ಹಂತವಾಗಿ ಪೂರೈಕೆ ಆಗಲಿದೆ’ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ವೀಣಾಲತಾ ಹೇಳಿದರು.

‘ಒಬ್ಬರಿಗೆ ಒಂದು ಬಾರಿ ಮಾತ್ರ ನೀಡಲಾಗುತ್ತಿದ್ದು. ಕೊರೊನಾ ಸೇನಾನಿಗಳಾದ ಆಶಾ ಹಾಗೂ ಅಂಗನವಾಡಿ
ಕಾರ್ಯಕರ್ತೆಯರು, ಪೊಲೀಸರು, ಆಸ್ಪತ್ರೆ ಸಿಬ್ಬಂದಿಗೆ ಆರಂಭದಲ್ಲಿ ವಿತರಿಸಲಾಗಿದೆ. ಔಷಧ ಬೇಕಿದ್ದವರೂ ಕಡ್ಡಾಯವಾಗಿ ಆಧಾರ್ ಕಾರ್ಡ್ ಜೆರಾಕ್ಸ್‌ ಪ್ರತಿ ಸಲ್ಲಿಸಬೇಕು. ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.