ADVERTISEMENT

ರಸ್ತೆ, ಕಿರು ಸೇತುವೆ ನಿರ್ಮಾಣಕ್ಕೆ ಆಗ್ರಹ

ಹರಿಯುವ ಹಳ್ಳಕ್ಕೆ ಕಾಲು ಸಂಕ: ಸಮಸ್ಯೆಯ ಸುಳಿಯಲ್ಲಿ ಸಕಲೇಶಪುರ ತಾಲ್ಲೂಕಿನ ಚೀರಿ ಗ್ರಾಮಸ್ಥರು

ಜಾನೆಕೆರೆ ಆರ್‌.ಪರಮೇಶ್‌
Published 28 ನವೆಂಬರ್ 2020, 6:16 IST
Last Updated 28 ನವೆಂಬರ್ 2020, 6:16 IST
ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚೀರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ಕಚ್ಚಾ ರಸ್ತೆ (ಎಡ ಚಿತ್ರ). ಚೀರಿ ಗ್ರಾಮಸ್ಥರು ಕಾಲು ಸಂಕದ ಮೇಲೆ ಸಾಗುತ್ತಿರುವುದು
ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚೀರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ಕಚ್ಚಾ ರಸ್ತೆ (ಎಡ ಚಿತ್ರ). ಚೀರಿ ಗ್ರಾಮಸ್ಥರು ಕಾಲು ಸಂಕದ ಮೇಲೆ ಸಾಗುತ್ತಿರುವುದು   

ಸಕಲೇಶಪುರ: ಸುರಿಯುವ ಮಳೆ, ಹರಿಯುವ ಹಳ್ಳದ ನಡುವೆ ಕಾಲು ಸಂಕದ ಮೇಲೆ ಜೀವ ಕೈಯಲ್ಲಿ ಹಿಡಿದುಕೊಂಡು ಹೆಜ್ಜೆ ಹಾಕುವ ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ.

ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀರಿ ಗ್ರಾಮದ ಶತಮಾನಗಳ ಸಮಸ್ಯೆಯಿದು. ಗ್ರಾಮದಲ್ಲಿ ಸುಮಾರು 20 ಮನೆಗಳಿವೆ. ಭತ್ತ, ಕಾಫಿ, ಅಡಿಕೆ, ಏಲಕ್ಕಿ, ತರಕಾರಿ ಬೆಳೆದುಕೊಂಡು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಗ್ರಾಮಸ್ಥರೇ ನಿರ್ಮಿಸಿಕೊಂಡಿರುವ ಮಣ್ಣಿನ ರಸ್ತೆಯೊಂದೇ ಗ್ರಾಮಕ್ಕಿರುವ ದಾರಿ. ಅದೂ ವರ್ಷದ ಏಳು ತಿಂಗಳು ಮಳೆ, ಹಳ್ಳ ಹರಿಯುವುದರಿಂದ ಬಂದ್‌ ಆಗುತ್ತದೆ. ಹೀಗಾಗಿ ಗ್ರಾಮಸ್ಥರು ಪರ ಊರಿಗೆ ಹೋಗಿ ಬರಲು ಭಾರಿ ಸಮಸ್ಯೆಯಾಗಿದೆ.

ಮೂರು ದಶಕಗಳಿಂದಲೂ ರಸ್ತೆ ಹಾಗೂ ಕಿರು ಸೇತುವೆ ಬೇಡಿಕೆಯನ್ನು ಈಡೇರಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶದಿಂದ ಹೇಳುತ್ತಾರೆ.

ADVERTISEMENT

ಗ್ರಾಮದ ಮಧ್ಯದಲ್ಲಿ ಚೀರಿ ಹಳ್ಳ ಹರಿಯುವುದರಿಂದ ಚೀರಿ ಗ್ರಾಮ ಇಬ್ಬಾಗ ಆಗಿದೆ. ಒಂದು ಬದಿಯಲ್ಲಿ 12 ಮನೆಗಳು, ಮತ್ತೊಂದೆಡೆ 8 ಮನೆಗಳು ಇವೆ. ಹಳ್ಳದ ಎಡಭಾಗದ ಮನೆಯವರು ತೊರಗಳ್ಳಿ ಹಳ್ಳ ದಾಟಿ ಚಿನ್ನಹಳ್ಳಿ ಗ್ರಾಮಕ್ಕೆ ಬರಬೇಕು. ಹಳ್ಳದಲ್ಲಿ ನೀರು ಕಡಿಮೆ ಇದ್ದಾಗ ಪಿಕ್‌ಅಪ್‌ (ಜೀಪು) ವಾಹನಗಳು ಗ್ರಾಮಕ್ಕೆ ಬರುತ್ತವೆ. ಮಳೆಗಾಲದಲ್ಲಿ ಹಳ್ಳ ಮೈದುಂಬಿ ಹರಿಯುವುದರಿಂದ ವಾಹನಗಳು ಹೋಗುವುದಕ್ಕೆ ಸಾಧ್ಯವಿಲ್ಲ. ಹಳ್ಳದಾಟಿ ಈಚೆ ಬರದಿದ್ದರೆ ಬದುಕೇ ಇಲ್ಲ. ಹೀಗಾಗಿ ಬಹಳ ಹಿಂದಿನಿಂದಲೂ ನಾವು ಮರದ ದಿಮ್ಮಿ ಹಾಗೂ ಸಿಮೆಂಟ್‌ ಕಂಬದ ಕಾಲುಸಂಕ ನಿರ್ಮಾಣ ಮಾಡಿಕೊಳ್ಳುತ್ತೇವೆ. ಮಳೆಗಾಲದಲ್ಲಿ ಭಾರಿ ಗಾಳಿ ಹಾಗೂ ಮಳೆಯಲ್ಲಿ ಮಕ್ಕಳು, ವೃದ್ಧರು ಈ ಸಂಕ ದಾಟಿ ಬರುವುದು ಒಂದು ದೊಡ್ಡ ಸಾಹಸ ಎಂದು ಗ್ರಾಮದ ಯದುಕುಮಾರ್ ಅಳಲು ತೋಡಿಕೊಂಡರು.

‘ಚಿನ್ನಹಳ್ಳಿ ಗ್ರಾಮದಲ್ಲಿ ಇರುವ ನ್ಯಾಯಬೆಲೆ ಅಂಗಡಿಗೆ ಮೂರು ಕಿ.ಮೀ ನಡೆದು ಹೋಗಬೇಕು. ಊರಿನಲ್ಲಿ ಅಂಗಡಿ, ಶಾಲೆ, ಆಸ್ಪತ್ರೆ ಯಾವುದೇ ಸೌಲಭ್ಯ ಇಲ್ಲದ್ದರಿಂದ ಕಾಯಿಲೆಯಿಂದ ನರಳುತ್ತಿರುವವರನ್ನು ಹೊತ್ತುಕೊಂಡೇ ಹೋಗಬೇಕು. ಮನೆಗೆ ಯಾವುದೇ ಪದಾರ್ಥವನ್ನಾದರೂ ತಲೆ ಮೇಲೆ ಹೊತ್ತು ತರಬೇಕು. ಒಂದು ಕಿ.ಮೀ. ರಸ್ತೆ ಹಾಗೂ ತೊರಗಳ್ಳಿ ಹಳ್ಳಕ್ಕೆ ಕಿರು ಸೇತುವೆಯಾದರೆ ಸಮಸ್ಯೆ ಬಗೆಹರಿಯುತ್ತದೆ’ ಎನ್ನುತ್ತಾರೆ
ಗ್ರಾಮಸ್ಥರು.

‘ಹಳ್ಳದ ಬಲಭಾಗದ ಮನೆಯವರು ನಡನಹಳ್ಳಿ ಮಾರ್ಗವಾಗಿ ಬರಬೇ ಕಾಗಿದ್ದು, ಗ್ರಾಮದಿಂದ ನಡನಹಳ್ಳಿ ಸಿಮೆಂಟ್‌ ರಸ್ತೆವರೆಗೆ ಸುಮಾರು ಎರಡು ಕಿ.ಮೀ. ರಸ್ತೆ ನಿರ್ಮಾಣ ಆಗಬೇಕಿದೆ’ ಎಂದು ಗ್ರಾಮದ ರಘು ಹೇಳುತ್ತಾರೆ.

‘ಬಯಲುಸೀಮೆ ಜನರ ಬಾಯಾರಿಕೆ ತಣಿಸುವ ಎತ್ತಿನಹೊಳೆ ಯೋಜನೆಗೆ ಚೀರಿ ಹೊಳೆ ನೀರನ್ನೂ ಹರಿಸಲಾಗುತ್ತದೆ. ನಮ್ಮ ಗ್ರಾಮದಲ್ಲಿಯೇ ಯೋಜನೆ ನಡೆಯುತ್ತಿರುವುದರಿಂದ ಯೋಜನೆ ಅನುದಾನದಲ್ಲಿ ರಸ್ತೆ, ಕಿರು ಸೇತುವೆ ನಿರ್ಮಾಣ ಮಾಡಿಸಿಕೊಡಿ ಎಂದು ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.