ಅರಸೀಕೆರೆ: ‘ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹಿಂದುಳಿದ ವರ್ಗ ಹಾಗೂ ಬಡ ಜನರನ್ನು ಮೇಲೆತ್ತಲು ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಮೂಲಕ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ’ ಎಂದು ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ವೆಂಕಟೇಶ್ವರ ಕಲಾ ಭವನದಲ್ಲಿ ಶನಿವಾರ ನಡೆದ ಡಿ.ದೇವರಾಜ ಅರಸು 110ನೇ ಜನ್ಮ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಅರಸು ಅವರು ತೆಗೆದುಕೊಂಡ ನಿರ್ಧಾರಗಳಿಂದ ಇಂದಿಗೂ ರಾಜ್ಯದ ಹಿಂದುಳಿದ ಹಾಗೂ ಬಡ ಲಕ್ಷಾಂತರ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರೈತರಿಗೂ ಹಕ್ಕು ಪತ್ರ ವಿತರಣೆ, ಜೀತಪದ್ಧತಿ ನಿರ್ಮೂಲನೆ, ಬ್ಯಾಂಕ್‌ಗಳ ರಾಷ್ಟ್ರೀಕರಣ ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಸರ್ವರಿಗೂ ಸಮಪಾಲು ಒದಗಿಸಿಕೊಟ್ಟ ಧೀಮಂತ ನಾಯಕ’ ಎಂದು ಹೇಳಿದರು.
‘ವಿದ್ಯಾಭ್ಯಾಸದಲ್ಲಿ ಇಂಗ್ಲಿಷ್‌ಗೆ ಆದ್ಯತೆ ನೀಡುವುದು ಉದ್ಯೋಗಕ್ಕೆ ಸಹಕಾರಿ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆಯುವುದಕ್ಕೆ ಸದನದಲ್ಲಿ ಸರ್ಕಾರದ ಗಮನ ಸೆಳೆದು ಅರಸೀಕೆರೆ ತಾಲ್ಲೂಕಿಗೆ 5 ಕೆಪಿಎಸ್ ಶಾಲೆಗಳನ್ನು ತೆರೆಯಲು ಅನುಮೋದನೆ ದೊರೆತಿದೆ. ಕ್ಷೇತ್ರಕ್ಕೆ 2 ವಸತಿ ಶಾಲೆಗಳ ಅವಶ್ಯಕತೆ ಇದೆ. ಶಿಕ್ಷಣದಲ್ಲಿ ಅಭಿವೃದ್ದಿ ಸಾಧಿಸುವುದು ನನ್ನ ಮೊದಲ ಆದ್ಯತೆಯಾಗಿದೆ’ ಎಂದು ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 2ನೇ ದೇವರಾಜ ಅರಸು ಎಂದರೆ ತಪ್ಪಾಗಲಾರದು. ಹಿಂದುಳಿದ ವರ್ಗದವರಿಗೆ ಗಂಗಾ ಕಲ್ಯಾಣ ಯೋಜನೆ, ವಿವಿಧ ನಿಗಮಗಳ ಸ್ಥಾಪನೆ, ಬ್ಯಾಂಕ್‌ಗಳಿಂದ ಸಾಲ ವಿತರಣೆ, ಅನ್ನ ಭಾಗ್ಯ , ಕ್ಷೀರ ಭಾಗ್ಯ, ಮಧ್ಯಮ ವರ್ಗದವರ ಜೀವನೋಪಾಯಕ್ಕೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮಹಾನಾಯಕರಾಗಿದ್ದಾರೆ’ ಎಂದು ಹೇಳಿದರು.
ತಹಶೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ದೊರೆಯುವ ಸವಲತ್ತುಗಳನ್ನು ಬಳಸಿಕೊಂಡು ವಿದ್ಯಾಬ್ಯಾಸದಲ್ಲಿ ತೊಡಗಬೇಕು. ರಾಜ್ಯದಲ್ಲಿ ಹಿಂದುಳಿದ ಹಾಗೂ ಬಡವರ ಏಳಿಗೆಗೆ ಅರಸು ಅವರ ಕೊಡುಗೆ ಅಪಾರವಾಗಿದೆ’ ಎಂದು ಹೇಳಿದರು.
ವಸತಿ ಶಾಲೆಗಳ ಎಸ್ಎಸ್ಎಲ್‌ಸಿ ಹಾಗೂ ಪಿಯು ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ತಾಲ್ಲೂಕು ಹಿಂದುಳಿದ ಇಲಾಖೆ ಕಲ್ಯಾಣಾಧಿಕಾರಿ ಯಶೋಧಾ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಜಯಣ್ಣ, ಬಿಸಿಯೂಟ ನಿರ್ದೇಶಕ ಯೋಗೀಶ್, ವಸತಿ ನಿಲಯಗಳ ಮೇಲ್ವಿಚಾರಕ ಸೋಮಶೇಖರ್, ವಸತಿ ನಿಲಯಗಳ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
Highlights - ಕ್ಷೇತ್ರಕ್ಕೆ 2 ವಸತಿ ಶಾಲೆಗಳ ಅಗತ್ಯ: ಶಿವಲಿಂಗೇಗೌಡ ‘ಶಿಕ್ಷಣದಲ್ಲಿ ಅಭಿವೃದ್ದಿ ಸಾಧಿಸುವುದೇ ಗುರಿ’ ಸಿದ್ದರಾಮಯ್ಯ 2ನೇ ದೇವರಾಜ ಅರಸು: ಶ್ಲಾಘನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.