ADVERTISEMENT

ದೇವೇಗೌಡರ ಸ್ಪರ್ಧೆ: ಎರಡು ದಿನದಲ್ಲಿ ನಿರ್ಧಾರ

ಸ್ವಕ್ಷೇತ್ರಕ್ಕೆ ಮರಳುವ ಸಾಧ್ಯತೆ ಇಲ್ಲ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 12:42 IST
Last Updated 19 ಮಾರ್ಚ್ 2019, 12:42 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಇನ್ನೇರಡು ದಿನದಲ್ಲಿ ನಿರ್ಧಾರವಾಗಲಿದೆ’ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

‘ಕೊನೆ ಚುನಾವಣೆಯಾದ್ದರಿಂದ ಹಾಸನದಿಂದಲೇ ಸ್ಪರ್ಧಿಸಲಿ ಎಂಬುದು ನಮ್ಮ ಬಯಕೆಯಾಗಿತ್ತು. ಆದರೆ, ಅವರು ಮೊಮ್ಮಗನಿಗೆ ಕ್ಷೇತ್ರ ಧಾರೆ ಎರೆದುಕೊಟ್ಟಿರುವುದರಿಂದ ಸ್ವಕ್ಷೇತ್ರಕ್ಕೆ ಮರಳುವ ಸಾಧ್ಯತೆ ಇಲ್ಲ. ಬೆಂಗಳೂರು ಅಥವಾ ತುಮಕೂರು ಎಂಬುದು ಇನ್ನೂ ತೀರ್ಮಾನವಾಗಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಷ್ ಅವರಿಗೆ ಚಿತ್ರರಂಗ ಬೆಂಬಲ ನೀಡುತ್ತಿರುವುದರಿಂದ ಯಾವುದೇ ಭಯ ಇಲ್ಲ. ಕುಮಾರಸ್ವಾಮಿ ಅವರ ಮಗನೂ ಚಿತ್ರರಂಗದಲ್ಲೇ ಇದ್ದಾರೆ. ನಿಖಿಲ್‌ ನನ್ನು ನಿಲ್ಲಿಸುವ ಆಲೋಚನೆ ಇರಲಿಲ್ಲ. ಹಾಗೆ ಮಾಡುವುದಾಗಿದ್ದರೆ ಕಳೆದ ಬಾರಿ ಶಿವರಾಮೇಗೌಡರನ್ನು ನಿಲ್ಲಿಸುತ್ತಿರಲಿಲ್ಲ ಎಂದು ತಿಳಿಸಿದರು.

ADVERTISEMENT

‘ಸುಮಲತಾ ಅವರೂ ಚುನಾವಣೆಗೆ ನಿಲ್ಲುತ್ತೇನೆ ಎಂದು ಕುಮಾರಸ್ವಾಮಿ ಅವರನ್ನು ಕೇಳಿಲ್ಲ. ಅವರೇ, ‘ನಾನು ಸ್ಪರ್ಧೆ ಮಾಡಿಯೇ ತೀರುತ್ತೇನೆ’ ಎಂದ ಮೇಲೆ ಆ ಸವಾಲನ್ನು ಸಿ.ಎಂ ಆಗಿ ಸ್ವೀಕರಿಸಬೇಕಲ್ಲವೇ’ ಎನ್ನುವ ಮೂಲಕ ನಿಖಿಲ್ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.

ಜನರ ಒತ್ತಾಸೆಯಂತೆ ನಿಖಿಲ್ ಸ್ಪರ್ಧೆ ಮಾಡಿದ್ದಾರೆ. ಜನರು ಅವಕಾಶ ನೀಡಿದರೆ ಒಳ್ಳೆ ಕೆಲಸ ಮಾಡುತ್ತಾರೆ ಎಂದ ರೇವಣ್ಣ, ಮಂಡ್ಯ, ಮೈಸೂರಿನಲ್ಲೂ ಸಮ್ಮಿಶ್ರ ಅಭ್ಯರ್ಥಿಗಳ ಪರ ಪ್ರಚಾರ ಮಾಡುವೆ ಎಂದು ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.