ADVERTISEMENT

15 ಹಳ್ಳಿಗಳಲ್ಲಿ ₹4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ: ಶಾಸಕ ರೇವಣ್ಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 2:13 IST
Last Updated 20 ಜುಲೈ 2025, 2:13 IST
ಚನ್ನರಾಯಪಟ್ಟಣ ತಾಲ್ಲೂಕು ಶ್ರೀನಿವಾಸಪುರದಲ್ಲಿ ₹7 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರು ಘಟಕವನ್ನು ಶಾಸಕ ಎಚ್.ಡಿ. ರೇವಣ್ಣ ಶನಿವಾರ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್ ರೇವಣ್ಣ ಇದ್ದಾರೆ 
ಚನ್ನರಾಯಪಟ್ಟಣ ತಾಲ್ಲೂಕು ಶ್ರೀನಿವಾಸಪುರದಲ್ಲಿ ₹7 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರು ಘಟಕವನ್ನು ಶಾಸಕ ಎಚ್.ಡಿ. ರೇವಣ್ಣ ಶನಿವಾರ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್ ರೇವಣ್ಣ ಇದ್ದಾರೆ    

ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ಎ. ಕಾಳೇನಹಳ್ಳಿ, ಆಲ್ಫೋನ್ಸ್‌ ನಗರ, ಕುಂಭೇನಹಳ್ಳಿ, ಅಗ್ರಹಾರ, ಅಗ್ರಹಾರ ಚೋಳೇನಹಳ್ಳಿ, ಕೆ.ಸಿಂಗೇನಹಳ್ಳಿ, ನಂಬಿಹಳ್ಳಿ, ಗೆಜ್ಜಗಾರನಹಳ್ಳಿ, ಬರಗೂರು ಸೇರಿ 15 ಹಳ್ಳಿಗಳಲ್ಲಿ ಅಂದಾಜು 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.

ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್‍ ರೇವಣ್ಣ ಅವರ ಕ್ಷೇತ್ರಾಭಿವೃದ್ಧಿ ಅನುದಾನ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನದ ಸಹಯೋಗದಲ್ಲಿ ಶನಿವಾರ ₹7 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಹಳ್ಳಿಗಳಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣ ಸೇರಿ ಅಭಿವೃದ್ಧಿ ಕೈಗೊಳ್ಳಲಾಗುವುದು. ದಂಡಿಗನಹಳ್ಳಿ ಹೋಬಳಿಯ ಎಲ್ಲ 85 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಅದೇ ರೀತಿ ಕಾಚೇನಹಳ್ಳಿ, ಆಲಗೊಂಡನಹಳ್ಳಿ ಏತನೀರಾವರಿ ಯೋಜನೆಯ ಅನುಷ್ಠಾನದಿಂದ ಕೆರೆ, ಕಟ್ಟೆಗಳಿಗೆ ನಿರು ತುಂಬಿಸಲಾಗಿದೆ. ಇದರಿಂದ ಅಂತರ್ಜಲ ಹೆಚ್ಚಾಗಿದೆ ಎಂದರು.

ADVERTISEMENT

ಶ್ರೀನಿವಾಸಪುರದಲ್ಲಿ ಸಕ್ಕರೆ ಕಾರ್ಖಾನೆ ಇರುವುದರಿಂದ ಈ ಭಾಗದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಿದೆ. ಪ್ರಸಕ್ತ ಹಂಗಾಮಿನನಲ್ಲಿ ಕಬ್ಬು ಅರೆಯಲಾಗುತ್ತಿದೆ. ಎಚ್.ಡಿ. ದೇವೇಗೌಡ ಅವರಿಗೆ ದಂಡಿಗನಹಳ್ಳಿ ಹೋಬಳಿ ರಾಜಕೀಯವಾಗಿ ಶಕ್ತಿ ತುಂಬಿದೆ. ಆ ಭಾಗದ ಜನರ ಋಣ ತೀರಿಸಲಾಗಿದೆ. ಬಡವರಿಗೆ ಅನುಕೂಲವಾಗವ ಕೆಲಸ ಮಾಡಲಾಗುವುದು. ಸದ್ಯದಲ್ಲಿ ದಂಡಿಗನಹಳ್ಳಿ ಹೋಬಳಿಯಲ್ಲಿ ಸಭೆ ನಡೆಸಿ ಜನರ ಕುಂದುಕೊರತೆ ಆಲಿಸಿ, ಪರಿಹರಿಸಲಾಗುವುದು. ಅಂದಾಜು ₹1,200 ಕೋಟಿ ವೆಚ್ಚದಲ್ಲಿ ಚನ್ನರಾಯಪಟ್ಟಣ- ಹೊಳೆನರಸೀಪುರ- ಅರಕಲಗೂರು- ಮಡಿಕೇರಿಯಿಂದ ಮಾಕುಟ್ಟದವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದರು.

ಅಭಿವೃದ್ಧಿಯತ್ತ ಗಮನ ಹರಿಸದೇ ಸಾಧನ ಸಮಾವೇಶ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ಅವರು ಟೀಕಿಸಿದರು.

ಡಾ. ಸೂರಜ್ ರೇವಣ್ಣ ಸೇರಿ ಹಲವು ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.