ಅರಸೀಕೆರೆ:‘ಟೀಕೆಗಳು ಸಾಯುತ್ತವೆ, ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ. ನಾಲಿಗೆ ಅವರವರ ಇತಿಹಾಸ, ಬುದ್ಧಿಯನ್ನು ಜನರಿಗೆ ತೋರಿಸುತ್ತದೆ. ಆದ್ದರಿಂದ ಪ್ರತಿಯಾಗಿ ಅರಸೀಕೆರೆ ಕ್ಷೇತ್ರ ಪ್ರಗತಿ ಪಥದತ್ತ ಕೊಂಡೊಯ್ಯೂವುದೇ ನನ್ನ ಧ್ಯೇಯ’ ಎಂದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಹಾಸನ ಮುಖ್ಯ ರಸ್ತೆ ಸಮೀಪ ಯಾದವ ಸಮಾಜದ ₹3 ಕೋಟಿ ವೆಚ್ಚದ ನೂತನ ಸಮುದಾಯ ಭವನಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ರಾಜ್ಯದ ಮೂಲೆ ಮೂಲೆಗೆ ಈ ಶಿವಲಿಂಗೇಗೌಡ ಏನು ಅಂತ ಗೊತ್ತಿದೆ. ಅರಸೀಕೆರೆ ಕ್ಷೇತ್ರಕ್ಕೆ ಕಳಂಕಿತ ಹೆಸರು ಯಾವತ್ತೂ ಕೊಟ್ಟಿಲ್ಲ, ಕೊಡುವುದಿಲ್ಲ. ಅಧಿಕಾರದಲ್ಲಿರುವವರೆಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ. ಜನಾಭಿಪ್ರಾಯವೇ ನನಗೆ ಮುಖ್ಯ. ಟೀಕೆ ಟಿಪ್ಪಣಿಗಳಿಗೆ ಸಮಯ ಕೊಡದೇ ಶಾಸಕಗಿರಿ ಕೊಟ್ಟ ಕ್ಷೇತ್ರದ ಜನರ ಕಾಯಕವೇ ನನ್ನ ಗುರಿಯಾಗಿದೆ’ ಎಂದರು.
‘ಧರ್ಮ ಅಧರ್ಮದ ಯುದ್ಧದಲ್ಲಿ ಧರ್ಮ ಹಾಗೂ ಸತ್ಯಕ್ಕೆ ಜಯವಾಗಿದೆ. ಜಯ ತಂದುಕೊಟ್ಟ ಶ್ರೀಕೃಷ್ಣ ಪರಮಾತ್ಮನ ಕುಲದಲ್ಲಿ ಹುಟ್ಟಿರುವ ನೀವು ಕೆಲ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಾಮರಸ್ಯ ಸಂಘಟನೆ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು. ಕ್ಷೇತ್ರದ ಎಲ್ಲಾ ಸಮಾಜದ ಸಮುದಾಯ ಭವನ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ದಿಯೇ ನನ್ನ ಇಚ್ಚಾಶಕ್ತಿ’ ಎಂದರು.
‘ಸರ್ಕಾರದ ಸವಲತ್ತು ಹಾಗೂ ವೈಯಕ್ತಿಕ ಅನುದಾನ ನೀಡುವುದರ ಮೂಲಕ ಎಲ್ಲಾ ಜಾತಿಗಳ ಅಭ್ಯುದಯಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ದೇವಾಲಯಗಳ ಅಭಿವೃದ್ಧಿಗೆ ಅನುದಾನ ಬಂದಿದ್ದು, ದೊರೆತಿರುವ ಅನುದಾನವನ್ನೇ ಬಳಸಿಕೊಂಡು ಆದಷ್ಟು ಬೇಗ ಲೋಕಾರ್ಪಣೆಗೊಳಿಸೋಣ. ಬಸವಾದಿ ಶರಣರು ಹಾಗೂ ಕೃಷ್ಣನ ಮಾರ್ಗದಲ್ಲಿ ಎಲ್ಲರೂ ಒಗಟ್ಟಾಗಿ ಹೋಗೋಣ’ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ,‘ಶಿವಲಿಂಗೇಗೌಡರು ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಕ್ಷರಶ: ರಕ್ತಕ್ರಾಂತಿಯಾಗಿದೆ. ಕೆಲವರು ಬೇರೆ ತಾಲ್ಲೂಕಿನಿಂದ ಬಂದವರು ಶಾಸಕರು ಹಾಗೂ ಕ್ಷೇತ್ರದ ಅಭಿವೃದ್ಧಿ ಸಹಿಸದೇ ಸತ್ಯಕ್ಕೆ ದೂರವಾದ ಹಾಗೂ ಆಧಾರರಹಿತ ಆರೋಪಗಳು ಟೀಕೆಸುತ್ತಿದ್ದಾರೆ’ಎಂದರು.
ಯಾದವ ಸಮಾಜದ ಅಧ್ಯಕ್ಷ ಬೆಂಡೇಕೆರೆ ಅಜ್ಜಪ್ಪ ಮಾತನಾಡಿ,‘ವೈಯಕ್ತಿಕವಾಗಿ ಶಾಸಕರು ₹1 ಕೋಟಿ ವೆಚ್ಚದ ನಿವೇಶನ ಕೊಡಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೂ ಪ್ರಾಥಮಿಕ ಹಂತದಲ್ಲಿ ₹1 ಕೋಟಿ ಅನುದಾನ ನೀಡುತ್ತಿದ್ದಾರೆ’ ಎಂದರು.
ಅಗ್ಗುಂದ ಗ್ರಾಮಪಂಚಾಯಿತಿ ಸದಸ್ಯ ಗೀರಿಶ್, ಕೆಡಿಪಿ ಸದಸ್ಯ ಬಿ.ಎಸ್.ರಂಗಪ್ಪ, ಬೋವಿ ಸಮಾಜದ ಮುಖಂಡ ನಾಗರಾಜು, ರಾಂಪುರ ಸುರೇಶ್, ಯಾದವ ಸಮಾಜ ಕಾರ್ಯದರ್ಶಿ ಮಲ್ಲಯ್ಯ, ಯಳವಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ವಸಂತಕುಮಾರ್, ಎಂಜಿನಿಯರ್ ದೀಕ್ಷಿತ್, ಗುತ್ತಿಗೆದಾರ ತಿಮ್ಮಪ್ಪ, ಸಮಾಜದ ಮುಖಂಡರು, ಪೂಜಾರು, ಗುಡಿಗೌಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.