ADVERTISEMENT

ಹಾಸನ | ಧರ್ಮಸ್ಥಳ ಚಲೋ ಯಾತ್ರೆ: ಜಿಲ್ಲೆಯಿಂದ 10 ಸಾವಿರ ಜನ ಭಾಗಿ

ಸೆ.1 ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ ಯಾತ್ರೆ: ಪ್ರೀತಂ ಗೌಡ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:09 IST
Last Updated 30 ಆಗಸ್ಟ್ 2025, 5:09 IST

ಹಾಸನ: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಮತ್ತು ಷಡ್ಯಂತ್ರವನ್ನು ಖಂಡಿಸಿ ಸೆಪ್ಟೆಂಬರ್ 1 ರಂದು ಧರ್ಮಸ್ಥಳದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯಿಂದಲೂ 10 ಸಾವಿರಕ್ಕೂ ಹೆಚ್ಚು ಮಂದಿ ಹಿಂದೂ ಭಕ್ತರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ನಿರ್ದೇಶನದಂತೆ ಧರ್ಮಸ್ಥಳ ಚಲೋ ಕಾರ್ಯಕ್ರಮ ಆಯೋಜಿಸಿದ್ದು, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಇದು ಧರ್ಮದ ಉಳಿವಿಗಾಗಿ ಹೋರಾಟ. ಇಡೀ ಹಿಂದೂ ಸಮಾಜ ಪಕ್ಷಾತೀತ, ಜಾತ್ಯತೀತವಾಗಿ ಯಾತ್ರೆಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಧರ್ಮಸ್ಥಳ ಮತ್ತು ಮಂಜುನಾಥ ಸ್ವಾಮಿ ಮೇಲಿನ ಭಕ್ತಿ ಕುಂದಿಸಲು ಸಂಘಟಿತವಾಗಿ ಪಿತೂರಿ ನಡೆದಿದೆ. ಇದರಲ್ಲಿ ಯೂಟ್ಯೂಬರ್‌ಗಳು ಹಾಗೂ ಅನಾಮಿಕ ವ್ಯಕ್ತಿಯ ಮೂಲಕ ಹಿಂದೂ ಧರ್ಮದ ನಿಂದನೆ ಮಾಡಲಾಗಿದೆ. ಈ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದ್ದು, ಇದರ ವಿರುದ್ಧ ನಮ್ಮ ಹೋರಾಟ ಎಂದರು.

ADVERTISEMENT

ಈ ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸಿರುವುದನ್ನು ಸ್ವಾಗತಿಸುತ್ತೇವೆ. ತನಿಖೆ ನಂತರ ಸತ್ಯ ಹೊರಬರಲಿದೆ. ಕಾಣದ ಕೈಗಳು ನಡೆಸಿರುವ ಪಿತೂರಿ ಹಾಗೂ ಸತ್ಯ ಹೊರಬರಲು ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಆಗ್ರಹಿಸುವುದಾಗಿ ಹೇಳಿದರು.

ಕಾಣದ ಕೈಗಳಿಂದ ನಡೆದಿರುವ ಷಡ್ಯಂತ್ರಕ್ಕೆ ಭಕ್ತ ಸಮೂಹವೇ ಉತ್ತರ ನೀಡಲಿದೆ. ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ನಾವು ಸಹಿಸುವುದಿಲ್ಲ. ಬಿಜೆಪಿ ಇದರ ವಿರುದ್ಧ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು.

ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕು. ಪ್ರಕರಣ ನಡೆದು 13 ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ. ಈಗಾಗಲೇ ಹಲವು ತನಿಖೆಗಳು ನಡೆದಿದ್ದು, ಸದ್ಯ ಎಸ್ಐಟಿ ತನಿಖೆ ಆಗಲಿ. ಆದರೆ ಈ ನಡುವೆ ಹಿಂದೂಗಳಿಗೆ ಹಾಗೂ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಗಿರೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.