ADVERTISEMENT

ಧರ್ಮಸ್ಥಳ ಕ್ಷೇತ್ರದ ತೇಜೋವಧೆ ಸಲ್ಲದು: ಎಂ.ಎ. ಗೋಪಾಲಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 7:19 IST
Last Updated 14 ಆಗಸ್ಟ್ 2025, 7:19 IST
ಎಂ.ಎ. ಗೋಪಾಲಸ್ವಾಮಿ
ಎಂ.ಎ. ಗೋಪಾಲಸ್ವಾಮಿ   

ಚನ್ನರಾಯಪಟ್ಟಣ: ‘ಧರ್ಮಸ್ಥಳದ ಮಂಜುನಾಥಸ್ವಾಮಿ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಮೇಲೆ ಭಕ್ತರಿಗೆ ನಂಬಿಕೆ ಮತ್ತು ಗೌರವ ಇದೆ. ಇದಕ್ಕೆ ಚ್ಯುತಿ ತರುವ ಕೆಲಸ ಆಗಬಾರದು’ ಎಂದು ಕಾಂಗ್ರೆಸ್ ಮುಖಂಡ ಹಾಗು ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿಯಲ್ಲಿ ಮಾತನಾಡಿದ ಅವರು, ‘ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಸರ್ಕಾರ ಎಸ್‍ಐಟಿ ತನಿಖೆಗೆ ಆದೇಶಸಿದೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಆದರೆ ಕೆಲವರು ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ’ ಎಂದರು.

‘ಈಗಾಗಲೇ ಅನಾಮಿಕ ಸೂಚಿಸಿದ ಎಲ್ಲ ಜಾಗಗಳನ್ನು ಅಗೆಯಲಾಗಿದೆ. ಬಹುತೇಕ ಜಾಗದಲ್ಲಿ ಅಸ್ಥಿಪಂಜರ ಗೋಚರವಿಲ್ಲ. ಇದರಿಂದ ಜನಸಾಮಾನ್ಯರಿಗೆ ಅನಾಮಿಕ ವ್ಯಕ್ತಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂಬ ಭಾವನೆ ಬರುತ್ತಿದೆ. ಕ್ಷೇತ್ರದ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಕೆಡಿಸುವ ಕೆಲಸ ಆಗಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದರು.

ADVERTISEMENT

‘ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕಾರ್ಯಗಳನ್ನು ಬೆಂಬಲಿಸಿ ಪಟ್ಟಣದಿಂದ ಆಗಸ್ಟ್ 23ರಂದು ಭಕ್ತರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಧರ್ಮಸ್ಥಳಕ್ಕೆ ವಾಹನದಲ್ಲಿ ತೆರಳಿ ಮಂಜುನಾಥಸ್ವಾಮಿಯ ದರ್ಶನ ಪಡೆದು ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಾಗುವುದು. ಅದೇ ರೀತಿ ಆಗಸ್ಟ್ 16ರಂದು ಚನ್ನರಾಯಪಟ್ಟಣದಲ್ಲಿ ಭಕ್ತರು ಧರ್ಮಸ್ಥಳ ಕ್ಷೇತ್ರದ ಪರವಾಗಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಇದೆ’ ಎಂದರು.

‘ಧರ್ಮಸ್ಥಳ ಕ್ಷೇತ್ರದಿಂದ ತಾಲ್ಲೂಕಿನಲ್ಲಿ 3,500ಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳು ಆರ್ಥಿಕ ಭದ್ರತೆ ಹೊಂದುತ್ತಿವೆ. ಜತೆಗೆ ತಾಲ್ಲೂಕಿನ ಹಲವೆಡೆ ಶುದ್ಧ ಕುಡಿಯುವ ನೀರು ಘಟಕ ಆರಂಭಿಸಿದೆ. ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸಿದೆ. ಅನೇಕ ಕೆರೆಗಳನ್ನು ಹೂಳು ಎತ್ತುವ ಕೆಲಸ ಆಗುತ್ತಿದೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಿದೆ’ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಮುಖಂಡರಾದ ಎ.ಸಿ.ಆನಂದ್‍ಕುಮಾರ್, ಸಿ.ಎಸ್. ಪ್ರಕಾಶ್, ಪ್ರೇಮ್‍ಕುಮಾರ್, ಉಮಾಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.