ADVERTISEMENT

ಹಾಸನ: ಪ. ಜಾತಿ ಮಹಿಳೆ ಜತೆ ಅಸಭ್ಯ ವರ್ತನೆ; ಪೊಲೀಸ್‌ ಅಧಿಕಾರಿ ವಜಾಕ್ಕೆ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಎದುರು ಸಾಣೇನಹಳ್ಳಿ ನಿವಾಸಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 15:53 IST
Last Updated 6 ಜನವರಿ 2022, 15:53 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿಯ ಸಾಣೇನಹಳ್ಳಿ ಗ್ರಾಮದ ನಾಗರತ್ನ ಹಾಗೂ ಕುಟುಂಬ ಸದಸ್ಯರು ಧರಣಿ ನಡೆಸಿದರು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿಯ ಸಾಣೇನಹಳ್ಳಿ ಗ್ರಾಮದ ನಾಗರತ್ನ ಹಾಗೂ ಕುಟುಂಬ ಸದಸ್ಯರು ಧರಣಿ ನಡೆಸಿದರು   

ಹಾಸನ: ‘ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆ ಜತೆಗೆ ಅಸಭ್ಯವಾಗಿ ನಡೆದುಕೊಂಡ ಬೇಲೂರು ಠಾಣೆ ಸಿಪಿಐ ಯೋಗೇಶ್‌ ಹಾಗೂ ಎಸ್‌ಐ ಪಾಟೀಲ್ ಅವರನ್ನುಸೇವೆಯಿಂದ ಕೂಡಲೇ ವಜಾ ಮಾಡಬೇಕು’ ಎಂದು ಆಗ್ರಹಿಸಿ ಬೇಲೂರು ತಾಲ್ಲೂಕುಅರೇಹಳ್ಳಿ ಹೋಬಳಿಯ ಸಾಣೇನಹಳ್ಳಿ ಗ್ರಾಮದ ನಾಗರತ್ನ ಹಾಗೂ ಕುಟುಂಬ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಗ್ರಾಮದ ಸರ್ವೆ ನಂ. 22ರಲ್ಲಿರುವ 1 ಎಕರೆ 29 ಗುಂಟೆ ಸರ್ಕಾರಿ ಜಮೀನಿನಲ್ಲಿ ಮೂರು ದಶಕಗಳಿಂದ ಕೃಷಿ ಮಾಡುತ್ತಿದ್ದೇವೆ. ಫಾರಂ ನಂ. 53ರ ಅಡಿ ಅರ್ಜಿ ಸಲ್ಲಿಸಲಾಗಿದೆ. ಈಗ ಬೇರೆ ಊರಿನಿಂದ ಬಂದು ಸಾಣೇನಹಳ್ಳಿಯಲ್ಲಿ ನೆಲೆಸಿರುವ ಕುಮಾರೇಗೌಡ ಎಂಬುವರು ನಕಲಿ ದಾಖಲೆ ಸೃಷ್ಟಿಸಿ, ಬೆದರಿಸಿ ಜಮೀನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ’ ಎಂದು ಕುಟುಂಬ ಸದಸ್ಯರು ಆರೋಪಿಸಿದರು.

‘ಈ ಪ್ರಕರಣ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿದೆ. ಆದರೂ ಕುಮಾರೇಗೌಡ ನಮ್ಮಜಮೀನಿಗೆ ಬೇಲಿ ಹಾಕಿದ್ದಾರೆ. ಜಮೀನು ಬಳಿ ತೆರಳಿದರೆ ಹಲ್ಲೆ ನಡೆಸಲು ಯತ್ನಿಸುತ್ತಾರೆ. ಬಂದೂಕು ಹಿಡಿದುಕೊಂಡು ಓಡಾಡುವ ಈ ವ್ಯಕ್ತಿಯಿಂದ ಜೀವ ಬೆದರಿಕೆ ಇದೆ’ ಎಂದು ಆರೋಪಿಸಿದರು.

ADVERTISEMENT

‘ಹಲ್ಲೆಗೆ ಒಳಗಾದ ಸಂದರ್ಭದಲ್ಲಿ ಬೇಲೂರು ಪೊಲೀಸ್‌ ಠಾಣೆಗೆ ದೂರು ನೀಡಲು ತೆರಳಿದರೆ ಸಿಪಿಐ ಯೋಗೇಶ್‌ ಅಸಭ್ಯವಾಗಿ ವರ್ತಿಸಿದ್ದಾರೆ. ಪತಿ ಮಂಜುನಾಥ ಅವರಿಗೆ ಬೈದು, ದೂರು ಸ್ವೀಕರಿಸುವುದಿಲ್ಲ ಎಂದು ಪದೇ ಪದೇ ಹೇಳಿದ್ದಾರೆ’ ಎಂದು ನಾಗರತ್ನ ದೂರಿದರು.

‘ಕುಮಾರೇಗೌಡ ವಿರುದ್ಧ 307, 354 ಜಾತಿ ನಿಂದನೆ ಕಾಯ್ದೆ ಅಡಿ ಕೇಸುದಾಖಲಾಗಿದ್ದರೂ ಆರೋಪಿಯನ್ನು ಬಂಧಿಸಿಲ್ಲ. ಎಸ್‌.ಐ ಪಾಟೀಲ್‌ ಅವರುಆರೋಪಿಯನ್ನು ಠಾಣೆಗೆ ಕರೆಸಿ, ಅವರ ಎದುರೇ ನಮಗೆ ಬೈದು ಕಳಿಸಿದ್ದಾರೆ. ಜಮೀನು ಪ್ರಕರಣ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಇರುವುದರಿಂದ ತೀರ್ಪು ಬರುವವರೆಗೂ ಅಲ್ಲಿ ಯಾವುದೇ ಕೆಲಸ ಮಾಡದಂತೆ ತಡೆ ನೀಡಬೇಕು. ಪೊಲೀಸರಿಂದಲೂ ನ್ಯಾಯ, ರಕ್ಷಣೆ ಸಿಗದ ಕಾರಣ ಇಡೀ ಕುಟುಂಬಕ್ಕೆ ದಯಾ ಮರಣಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಧರಣಿಯಲ್ಲಿ ಸಾಣೇನಹಳ್ಳಿ ಗ್ರಾಮದ ಮಂಜುನಾಥ್‌, ಸುಶೀಲಾ, ಶಾಂತಮ್ಮ, ಈರಯ್ಯ,ಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.