ಹಾಸನ: ಸಾಹಿತ್ಯಕ್ಕೆ ಪ್ರಜ್ಞೆ ಎಂಬುದಿದ್ದು, ಆ ಪ್ರಜ್ಞೆಯ ಚೌಕಟ್ಟನ್ನು ಮೀರುವುದು ಅಥವಾ ಪ್ರಜ್ಞೆಯನ್ನು ಧಿಕ್ಕರಿಸಿ ಬರೆಯುವುದೇ ಸ್ವಾತಂತ್ರ್ಯ ಎಂದು ನನಗೆ ಅನಿಸುವುದಿಲ್ಲ ಎಂದು ನಟ, ನಿರ್ದೇಶಕ, ಬರಹಗಾರ ಎಸ್.ಎನ್. ಸೇತುರಾಮ್ ಅಭಿಪ್ರಾಯಪಟ್ಟರು.
ನಗರದ ಎಂ.ಜಿ. ರಸ್ತೆಯ ಗಾಂಧಿ ಭವನದಲ್ಲಿ ಅಕ್ಷರ ಬುಕ್ ಹೌಸ್, ಅಕ್ಷರ ಅಕಾಡೆಮಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 9ನೇ ಸಂಚಿಕೆಯ ಬುಕ್ ಮಾತು ಕಾರ್ಯಕ್ರಮದಲ್ಲಿ ಅವರು ಬರೆದಿರುವ ‘ತಳಿ ಹಾಗೂ ಅತೀತ’ ನಾಟಕಗಳ ಸಂಕಲನದ ಸಂವಾದದಲ್ಲಿ ಅವರು ಮಾತನಾಡಿದರು.
ಸಾಹಿತ್ಯ ಇನ್ನೂ ಬೌದ್ಧಿಕ ಸ್ವಾತಂತ್ರ್ಯವನ್ನು ಮೀರಿಲ್ಲವೇಕೆ ಎಂಬ ಓದುಗರ ಪ್ರಶ್ನೆಗೆ ಉತ್ತರಿಸಿದ ಸೇತುರಾಮ್, ಪ್ರತಿಯೊಂದು ವಿಚಾರದಲ್ಲಿಯೂ ನಮಗೆ ಪ್ರಜ್ಞೆ ಎಂಬುದಿದೆ. 92 ವಯಸ್ಸಿನ ರೋಗಪೀಡಿತ ವೃದ್ಧರೊಬ್ಬರು ಜೀವನದಿಂದ ಮುಕ್ತಿಗಾಗಿ ಹಂಬಲಿಸಿ, ಕೊನೆಗೆ ಮರಣ ಹೊಂದಿದ ಸಂದರ್ಭದಲ್ಲಿ ಆ ಸಾವಿನ ಮನೆಗೆ ಹೋದಾಗ ನಾವು ಸಂತೋಷವನ್ನು ವ್ಯಕ್ತಪಡಿಸಿ ಮಾತನಾಡುವುದಿಲ್ಲ. ಅವರ ಸಾವನ್ನು ಸಂಭ್ರಮಿಸುವುದಿಲ್ಲ, ಅಭಿನಂದನೆಗಳನ್ನು ಸಲ್ಲಿಸುವುದಿಲ್ಲ, ಅದೇ ಪ್ರಜ್ಞೆ ಎಂದು ತಿಳಿಸಿದರು.
ನಾವು ತಲತಲಾಂತರಗಳಿಂದ ಒಂದು ವರ್ತನೆಯನ್ನು ನೋಡುತ್ತ ಪ್ರಜ್ಞೆ ಬೆಳೆಸಿಕೊಂಡಿರುತ್ತೇವೆ. ಅಲ್ಲಿನ ಸಂದರ್ಭಕ್ಕೆ ನಾವು ಹೇಗೆ ವರ್ತಿಸಬೇಕು ಹಾಗೆಯೇ ವರ್ತಿಸುತ್ತೇವೆ, ಅದು ಪ್ರಜ್ಞೆ. ಸಾಹಿತ್ಯಕ್ಕೂ ಹೀಗೆ ಪ್ರಜ್ಞೆ ಇದೆ ಎಂದರು.
ಸಾಂಗ್ ಆಫ್ ದಿ ಸೆಲ್ ಪುಸ್ತಕವನ್ನು ಪ್ರಸ್ತಾಪಿಸಿದ ಅವರು, ದೇಹದೊಳಗಿನ ಪ್ರತಿ ಕೋಶಕ್ಕೂ ತನ್ನದೇ ಆದ ಗುರುತಿದೆ. ತನ್ನದೇ ಆದ ಕೆಲಸ ನಿರ್ವಹಿಸುತ್ತದೆ. ಅದೇ ಕೋಶ ಇನ್ನಿತರ ಕೋಶಗಳೊಟ್ಟಿಗೆ ಸೇರಿ ಮಾಡಬೇಕಾದ ಕೆಲಸ ಹಾಗೂ ಜವಾಬ್ದಾರಿ ಬೇರೆಯದ್ದೇ ಆಗಿರುತ್ತದೆ. ಹೀಗೆಯೇ ಪ್ರತಿಯೊಂದು ಕುಟುಂಬದಲ್ಲೂ ಗಂಡ, ಹೆಂಡತಿಯಾಗಲಿ ಅಥವಾ ತಂದೆ, ತಾಯಿಯಾಗಲಿ ಅವರದ್ದೇ ಜವಾಬ್ದಾರಿ ಹೊಂದಿರುತ್ತಾರೆ ಎಂದರು.
ನಿಮ್ಮ ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ ಬಳಸುವ ಸಂಭಾಷಣೆ ಬಹಳ ವಿಶಿಷ್ಟ. ಆ ನೇರ ಸಂಭಾಷಣೆಗಳಿಂದಲೇ ನಿಮ್ಮ ಧಾರಾವಾಹಿಯ ನಾಟಕಗಳು ವಿಶೇಷ ಸ್ಥಾನದಲ್ಲಿ ನಿಂತಿದೆ. ಆ ಶೈಲಿ ಹೇಗೆ? ಮತ್ತು ಯಾಕೆ? ಎಂದು ಓದುಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೇತುರಾಮ್, ಕುಟುಂಬದಲ್ಲಿ ಗಂಡ– ಹೆಂಡತಿ, ಅತ್ತೆ– ಸೊಸೆ, ತಂದೆ– ತಾಯಿ ಹಾಗೂ ಮಕ್ಕಳ ನಡುವೆ ನಡೆಯುವ ಸಂಭಾಷಣೆ ಬೇರೆ. ವ್ಯಕ್ತವಾಗದೇ ಉಳಿಯುವ ಮನಸ್ಸಿನ ಮಾತುಗಳು ಬೇರೆ. ಮನೆಯಲ್ಲಿ ಅಭಿವ್ಯಕ್ತಿಗೊಳ್ಳದೇ ಉಳಿದ ಮನಸ್ಸಿನ ಮಾತುಗಳನ್ನು, ನೋವುಗಳನ್ನು ತೆರೆಯ ಮೇಲೆ ತೋರಿಸುತ್ತೇನೆ. ಇದರಿಂದ ಕೆಲವು ಮಕ್ಕಳಿಗೆ, ಅತ್ತೆ–ಮಾವಂದಿರಿಗೆ, ಸೊಸೆಯಂದಿರಿಗೆ, ತಂದೆ ತಾಯಂದಿರಿಗೆ ಅವರವರ ಜವಾಬ್ದಾರಿ ಏನು, ಹೇಗೆ ನಡೆಸಿಕೊಳ್ಳಬೇಕು ಹಾಗೂ ನಡೆದುಕೊಳ್ಳಬೇಕು ಎಂಬ ಪಾಠ ದೊರೆತಿದೆ. ಕುಟುಂಬದ ಸದಸ್ಯರ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಕ್ಷರ ಬುಕ್ ಹೌಸ್ ಸಂಸ್ಥಾಪಕ ಬಿ.ಕೆ. ಗಂಗಾಧರ್ ಮಾತನಾಡಿ, ಹಾಸನದಲ್ಲಿ ಹೃದಯಾಘಾತಗಳ ಸಂಖ್ಯೆ ಹೆಚ್ಚಾದ ಮೇಲೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆಯೇ ಹೊರತು ಜೀವನಕ್ರಮ ಬದಲಾವಣೆ ಮಾಡಿಕೊಂಡವರ ಸಂಖ್ಯೆಯಲ್ಲಿ ಏನೂ ಬದಲಾವಣೆ ಆಗಿಲ್ಲ ಎಂದರು.
ಶೇಖರ್ ನಿಲುವಾಗಿಲು, ವಾಣಿ ನಾಗೇಂದ್ರ, ಸುನಂದ ಕೃಷ್ಣ ಹಾಗೂ ಐಶ್ವರ್ಯ ತಮ್ಮ ಭಾವಗೀತೆಗಳನ್ನು ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಬಿ.ಆರ್. ಬೊಮ್ಮೇಗೌಡ, ಜಾವಗಲ್ ಪ್ರಸನ್ನ ಹಾಗೂ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.