
ಚನ್ನರಾಯಪಟ್ಟಣ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್ ಹೇಳಿದರು.
ಲಯನ್ಸ್ ಕ್ಲಬ್, ತಾಲ್ಲೂಕು ಆಟೊ ಚಾಲಕರ ಸಂಘ, ಕರ್ನಾಟಕ ವೀರಸಮರಸೇನೆ, ಪುಣ್ಯ ಆಸ್ಪತ್ರೆಯ ಸಹಯೋಗದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಟೊ ಚಾಲಕರಿಗೆ ಸೋಮವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ವಾಹನಗಳು ಚಾಲಕನ ನಿಯಂತ್ರಣಕ್ಕೆ ಸಿಗುವುದಿಲ್ಲ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು. ಚಾಲಕರು ಸೀಟ್ ಬೆಲ್ಟ್‌ಗಳನ್ನು ಧರಿಸಬೇಕು. ಸೀಟ್ ಬೆಲ್ಟ್‌ಗಳನ್ನು ಧರಿಸದಿದ್ದರೆ ಏರ್ ಬ್ಯಾಗ್ ತೆರೆದುಕೊಳ್ಳುವುದಿಲ್ಲ ಎಂದರು.
‘ಅಪಘಾತ ಸಂಭವಿಸಿದಾಗ ಬಹುತೇಕ ಪ್ರಕರಣದಲ್ಲಿ ತಲೆಗೆ ಪೆಟ್ಟು ಬೀಳುವುದರಿಂದ ಮೋಟರ್ ಬೈಕ್‍ಗಳ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸುರಕ್ಷತಾ ಚಾಲನೆಗೆ ಆದ್ಯತೆ ನೀಡಬೇಕು. ಚಾಲನಾ ಪರವಾನಗಿ ಸೇರಿ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಎಲೆಕ್ಟ್ರಿಕಲ್ ಆಟೊಗಳಿಗೂ ಪರ್ಮಿಟ್ ಪಡೆಯುವುದು ಕಡ್ಡಾಯ’ ಎಂದು ಹೇಳಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ‘ಇತ್ತೀಚೆಗೆ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ವಾಹನಗಳು ಸುಸ್ಥಿತಿಯಲ್ಲಿಲ್ಲದಿದ್ದರೆ ಅಪಘಾತ ಸಂಭವಿಸುತ್ತದೆ. ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಹೋಬಳಿ ಮಟ್ಟದಲ್ಲಿಯೂ ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ಡಾ.ಸುರೇಶ್ ಮಾತನಾಡಿ, ‘ಮದ್ಯಪಾನ, ಧೂಮಪಾನ ಮಾಡುವುದನ್ನು ಚಾಲಕರು ನಿಲ್ಲಿಸಿದಾಗ ಆರೋಗ್ಯ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು, ಹೃದಯಘಾತ ಸಂಭವಿಸುತ್ತದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಪಘಾತದಲ್ಲಿ ಗಾಯಗೊಂಡವರಿಗೆ ನೀರು ಕುಡಿಸಬಾರದು. ನೀರು ಕುಡಿಸುವುದರಿಂದ ಶ್ವಾಸ ಕೋಶಕ್ಕೆ ತೊಂದರೆಯಾಗಿ ಪ್ರಾಣಕ್ಕೆ ಹಾನಿಯಾಗುವ ಸಾದ್ಯತೆ ಇರುತ್ತದೆ’ ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಆರ್. ಆಶಾ, ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್, ಪುನ್ಯ ಆಸ್ಪತ್ರೆಯ ಮುಖ್ಯಸ್ಥ ಡಾ.ವಿ. ಮಹೇಶ್ ಮಾತನಾಡಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಡಿ.ಕೆ. ಮಂಜುನಾಥ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಬಾಲು, ಕರ್ನಾಟಕ ವೀರ ಸಮರಸೇನೆಯ ತಾಲ್ಲೂಕು ಘಟಕದ ಅದ್ಯಕ್ಷ ಭರತ್‍ಗೌಡ, ಡಾ.ನಂದನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.