ADVERTISEMENT

ಹಾಸನ| ರೈತರನ್ನು ಅನಗತ್ಯ ಅಲೆದಾಡಿಸಬೇಡಿ: ನವೀನ್‌ರಾಜ್ ಸಿಂಗ್

ಭತ್ತ, ರಾಗಿ ಖರೀದಿ ಪ್ರಕ್ರಿಯೆ ಸರಳಗೊಳಿಸಿ: ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 6:38 IST
Last Updated 23 ಫೆಬ್ರುವರಿ 2023, 6:38 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಮಾತನಾಡಿದರು
ಹಾಸನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಮಾತನಾಡಿದರು   

ಹಾಸನ: ಜಿಲ್ಲೆಯಲ್ಲಿ ಬೆಂಬಲ ಬೆಲೆಯೊಂದಿಗೆ ರಾಗಿ, ಭತ್ತ ಖರೀದಿಗೆ ಯಾವುದೇ ತೊಂದರೆ ಆಗದಂತೆ ಪ್ರಕ್ರಿಯೆ ಸರಳೀಕರಣ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಬಲ ಬೆಲೆಯೊಂದಿಗೆ ಆಹಾರ ಧ್ಯಾನ್ಯ ಖರೀದಿ ಪ್ರಕ್ರಿಯಲ್ಲಿ ಲೋಪವಾಗದಂತೆ ಕೃಷಿ ಮತ್ತು ಆಹಾರ ಇಲಾಖೆ, ಮಾರ್ಕೆಟಿಂಗ್ ಫೆಡರೇಷನ್‌ ಅಧಿಕಾರಿಗಳು ನೋಡಿಕೊಳ್ಳಬೇಕು, ನೋಂದಾಯಿತ ರೈತರನ್ನು ಅನಗತ್ಯವಾಗಿ ಅಲೆಸದೇ, ವಿಳಂಬ ಆಗದಂತೆ ಖರೀದಿ ಮಾಡಬೇಕು ಎಂದು ಹೇಳಿದರು.

ADVERTISEMENT

ಆಹಾರ ಇಲಾಖೆ ಉಪ ನಿರ್ದೇಶಕ ಸಂಜಯ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 80 ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದು, ಖರೀದಿ ಪ್ರಕ್ರಿಯ ಪ್ರಗತಿಯಲ್ಲಿದೆ ಎಂದರು.

ಮಳೆಹಾನಿ ಕಾಮಗಾರಿಗಳ ಅನುಷ್ಠಾನ ಚುರುಕುಗೊಳಿಸಬೇಕು. ರಸ್ತೆ, ಕೆರೆಗಳ ದುರಸ್ತಿ, ಶಾಲೆ ಅಂಗನವಾಡಿ ಕಟ್ಟಡಗಳ ದುರಸ್ತಿ ಕಾರ್ಯ ಆದಷ್ಟು ಬೇಗ ಮಾಡಬೇಕು. ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಮುಂದಿನ ವರ್ಷ ಯಾವುದೇ ಕೆರೆಗಳು ಹಾನಿಗೀಡಾಗದಂತೆ ನಿಗಾ ವಹಿಸಬೇಕು ಎಂದು ನವೀನ್‌ರಾಜ್ ಸಿಂಗ್ ನಿರ್ದೇಶನ ನೀಡಿದರು.

ಉಳಿತಾಯ ಖಾತೆಗಳಿಗೆ ಆಧಾರ್ ಜೋಡಣೆಯ ಪ್ರಾಮುಖ್ಯತೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಎಲ್ಲ ರೀತಿಯ ಪರಿಹಾರ ನೇರವಾಗಿ ವರ್ಗಾವಣೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಯಾವುದೇ ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿಲ್ಲ ಎಂದು ವೈದ್ಯಕೀಯ ಅಧಿಕ್ಷಕ ಡಾ.ಕೃಷ್ಣಮೂರ್ತಿ ಹಾಗೂ ಜಿಲ್ಲಾ ಶಸ್ತ್ರಚಿಕತ್ಸಕ ಡಾ. ಸತೀಶ್ ಹೇಳಿದರು.

ಸದ್ಯಕ್ಕೆ ಕೋವಿಡ್‍ಗೆ ಮೀಸರಿಸಿರುವ ವಾರ್ಡ್‍ಗಳ 210 ಹಾಸಿಗೆಗಳ ಕೊಠಡಿಗೆ ವಿಸ್ತರಿಸಿ, ಅಗತ್ಯ ಬಳಕೆಗೆ ತಕ್ಷಣ 100 ಹಾಸಿಗೆಗಳಿಗೆ ವಿಸ್ತರಿಸಲು ಸಾಧ್ಯವಾಗುವಂತೆ ಯೋಜನೆ ರೂಪಿಸಬೇಕು. ಸದ್ಯಕ್ಕೆ ಲಭ್ಯವಿರುವ ಹಾಸಿಗೆಳನ್ನು ಇತರ ರೋಗಿಗಳ ಸೇವೆಗೆ ಬಳಸಬೇಕು ಎಂದರು.

ಜಿಲ್ಲೆಯಲ್ಲಿ ಹೆರಿಗೆ ವೇಳೆ ಉಂಟಾಗುವ ತಾಯಿ ಹಾಗೂ ಶಿಶು ಮರಣಗಳ ಬಗ್ಗೆ ನಿರಂತರ ನಿಗಾ ವಹಿಸಿ, ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಶ್ರಮಿಸಬೇಕು ಎಂದು ಹೇಳಿದರು.

ವಿಧಾನ ಸಭಾ ಚುನಾವಣಾ ಪ್ರಕ್ರಿಯೆಗೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಿ. ಯಾವುದೇ ಲೋಪಗಳು ಆಗದಂತೆ ಎಲ್ಲವನ್ನು ನಿಭಾಯಿಸಬೇಕು. ಮತಯಂತ್ರಗಳು, ವಿವಿ ಪ್ಯಾಟ್‌ಗಳ ಪರಿಶೀಲಿಸಿ, ಪೂರ್ಣಗೊಳಿಸಬೇಕು. ಸಿಬ್ಬಂದಿ ನಿಯೋಜನೆ, ತರಬೇತಿಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರ್ಣಿಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ಉಪ ವಿಭಾಗಾಧಿಕಾರಿಗಳಾದ ಅನಮೋಲ್ ಜೈನ್, ಕೃಪಾಲಿನಿ ಹಾಗೂ ಜಿಲ್ಲಾ ಮಟ್ಟದ ಅದಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.