ADVERTISEMENT

ಗುರು, ಗುರುತ್ವದ ಶಕ್ತಿ ನಿರ್ಲಕ್ಷಿಸಬೇಡಿ

ಹುಣ್ಣಿಮೆ ಕಾರ್ಯಕ್ರಮದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 6:05 IST
Last Updated 14 ಜುಲೈ 2023, 6:05 IST
ಹಾಸನದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗೆ ಗುರುವಂದನೆ ನೆರವೇರಿಸಲಾಯಿತು
ಹಾಸನದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗೆ ಗುರುವಂದನೆ ನೆರವೇರಿಸಲಾಯಿತು   

ಹಾಸನ: ಪ್ರತಿಯೊಬ್ಬರೂ ತಮ್ಮೊಳಗಿರುವ ಜ್ಞಾನವನ್ನು ಎಚ್ಚರಗೊಳಿಸಿದಾಗ, ಸಂಕಷ್ಟಗಳು ತಾನೇ ಸರಿದು ಹೋಗುತ್ತವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಎಂ.ಜಿ. ರಸ್ತೆಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ರಾತ್ರಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 105 ನೇ ಹುಣ್ಣಿಮೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗುರುವಿಗೆ, ಗುರುತ್ವಕ್ಕೆ ಇರುವ ಶಕ್ತಿಯನ್ನು ಯಾರು ಅಲಕ್ಷ್ಯ ಮಾಡಬಾರದು. ಮನಸ್ಸಿನಲ್ಲಿ ಗುರುವಿನ ಬಗ್ಗೆ ಪೂಜ್ಯ ಭಾವನೆ ಮೂಡಿಸಿಕೊಂಡು, ಗುರು ತೋರುವ ಸನ್ಮಾರ್ಗದಲ್ಲಿ ನಡೆದು, ನಮ್ಮಲ್ಲಿ ಮೂಡುವ ಜ್ಞಾನವನ್ನು ಪಸರಿಸುವ ಕೆಲಸ ಮಾಡಿಕೊಂಡು ಹೋದಾಗ ಮಾತ್ರ ಈ ಬದುಕಿಗೆ ಅರ್ಥ ಸಿಗಲಿದೆ ಎಂದರು.

ADVERTISEMENT

ಜ್ಞಾನ ಯಾರ ಸ್ವತ್ತೂ ಅಲ್ಲ. ಪ್ರತಿಯೊಬ್ಬರೂ ಜ್ಞಾನದಿಂದ ಯಶಸ್ಸನ್ನು ಸಾಧಿಸಬಹುದು. ಇದಕ್ಕೆ ಹಲವು ಮಹನೀಯರ ನಿದರ್ಶನಗಳು ನಮ್ಮ ಮುಂದಿವೆ. ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ, ಸಿದ್ಧಾರ್ಥ ತನ್ನ ಬಾಲ್ಯದಲ್ಲಿ ಎಲ್ಲವನ್ನೂ ತ್ಯಜಿಸಿ ಪರಿಶ್ರಮದಿಂದ ಬುದ್ಧನಾದ. ಅಂತಹ ಮಹಾನ್ ವ್ಯಕ್ತಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಯಿತು. ಅಂತೆಯೇ ನಮ್ಮಲ್ಲೂ ಒಳಿತುಗಳು ಬೆಳೆದಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಗುರು ಮತ್ತು ಶಿಷ್ಯ ಅಖಂಡದಲ್ಲಿ ಎರಡು ಮುಖಗಳಿದ್ದಂತೆ. ಯಾವ ವಿದ್ಯಾರ್ಥಿಯೂ ಗುರುವಿಲ್ಲದೇ ಗುರಿ ಮುಟ್ಟಲು ಸಾಧ್ಯವಿಲ್ಲ. ಅಂತಹ ಗುರುವನ್ನು ನೆನೆಯುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದರು.

ಶಾಸಕ ಸಿ.ಎನ್ ಬಾಲಕೃಷ್ಣ ಮಾತನಾಡಿ, ಆದಿಚುಂಚನಗಿರಿ ಮಠವನ್ನು ಚಿನ್ನದಗಿರಿ ಮಠವನ್ನಾಗಿ ಮಾಡಿದ ಕೀರ್ತಿ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಅದನ್ನು ವಜ್ರದ ಗಿರಿಯನ್ನಾಗಿಸಿದ ಕೀರ್ತಿ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಗುರು ತೋರಿದ ದಾರಿ ತಿಂಗಳ ಮಾಮನ ತೇರು ಕಾರ್ಯಕ್ರಮ ನಡೆದು ಬಂದ ಹಾದಿಯನ್ನು ಪರಿಚಯಿಸಿ, ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನದ ಕಬ್ಬಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ, ಕನಕ ಪೀಠದ ಶಿವಾನಂದಪುರಿ ಸ್ವಾಮೀಜಿ, ಬಸವಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು, ಮುನೇಹಳ್ಳಿ ಕ್ಷೇತ್ರ ತಪೋವನದ ಮಹಾಂತ ಶಿವಲಿಂಗ ಸ್ವಾಮೀಜಿ, ಚಿಲುಮೆಮಠದ ಜಯದೇವ ಸ್ವಾಮೀಜಿ, ತೊರೇನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ, ಶಾಸಕರಾದ ಪೊನ್ನಣ್ಣ, ಸ್ವರೂಪ್, ಹುಲ್ಲೇನಹಳ್ಳಿ ಸುರೇಶ್, ಸಿಮೆಂಟ್ ಮಂಜು, ಮಂಥರ್‌ಗೌಡ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘುಗೌಡ, ಮಠದ ವ್ಯವಸ್ಥಾಪಕ ಎಚ್.ಕೆ ಚಂದ್ರಶೇಖರ್ ಹಾಜರಿದ್ದರು. ಸಂಸ್ಕೃತ ಉಪನ್ಯಾಸಕ ಲಕ್ಷ್ಮೀನಾರಾಯಣ ನಿರೂಪಿಸಿದರು. ಗಾಯಕ ರೋಹನ್ ಅಯ್ಯರ್ ಗಾನಸುಧೆ ಹರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.