ADVERTISEMENT

ಹಾಸನ | ಪ್ರತಿಷ್ಠಾಪನೆಗೆ ಸಿದ್ಧವಾದ ಮಣ್ಣಿನ ಮೂರ್ತಿಗಳು

ಪರಿಸರ ಸ್ನೇಹಿ ಗಣೇಶ ವಿಗ್ರಹಗಳಿಗೆ ಹೆಚ್ಚಿದ ಬೇಡಿಕೆ: ಜನರಿಂದ ಮುಂಗಡ ಕಾದಿರಿಸುವಿಕೆ

ಎಂ.ಪಿ.ಹರೀಶ್
Published 25 ಆಗಸ್ಟ್ 2025, 5:14 IST
Last Updated 25 ಆಗಸ್ಟ್ 2025, 5:14 IST
ಆಲೂರು ತಾಲ್ಲೂಕಿನ ಬೈರಾಪುರ ಗ್ರಾಮದ ಕೋಮಲೇಶ್ ಅವರ ಪುತ್ರ ಲತೇಶ್ ತಯಾರಿಸಿರುವ ಮಣ್ಣಿನ ಗಣೇಶ ಮೂರ್ತಿ.
ಆಲೂರು ತಾಲ್ಲೂಕಿನ ಬೈರಾಪುರ ಗ್ರಾಮದ ಕೋಮಲೇಶ್ ಅವರ ಪುತ್ರ ಲತೇಶ್ ತಯಾರಿಸಿರುವ ಮಣ್ಣಿನ ಗಣೇಶ ಮೂರ್ತಿ.   

ಆಲೂರು: ಇದೀಗ ಎಲ್ಲೆಡೆ ಗೌರಿ–ಗಣೇಶ ಹಬ್ಬದ ಸಂಭ್ರಮದ ಶುರುವಾಗಿದೆ. ಮೂರ್ತಿಗಳು ಎಲ್ಲೆಡೆಯೂ ರಾರಾಜಿಸುತ್ತಿವೆ. ಆದರೆ, ಇದೀಗ ಜನರಲ್ಲಿಯೂ ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ಬಗ್ಗೆ ಆಸಕ್ತಿ ಹೆಚ್ಚಾಗಿದ್ದು, ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ಪಟ್ಟಣದಲ್ಲಿ ಗೌರ–ಗಣೇಶ ವಿಗ್ರಹಗಳ ಮಾರಾಟಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಅಲ್ಲಲ್ಲಿ ಮೂರ್ತಿಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ. ಆದರೆ, ತಾಲ್ಲೂಕಿನ ಕಸಬಾ ಬೈರಾಪುರದಲ್ಲಿ ನೆಲೆಸಿರುವ ಲತೇಶ್‌ ಕುಟುಂಬದವರು ತಯಾರಿಸುವ ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.

ಮೂರು ತಲೆಮಾರಿನಿಂದ ಮಣ್ಣಿನಲ್ಲಿ ಗಣೇಶ ಮತ್ತು ಗೌರಮ್ಮ ಮೂರ್ತಿಯನ್ನು ತಯಾರಿ ಮಾಡುವ ಕಲೆಗಾರರ ದೊಡ್ಡಮಲ್ಲಪ್ಪರವರ ಕುಟುಂಬ, ಕಸಬಾ ಬೈರಾಪುರ ಗ್ರಾಮದಲ್ಲಿ ನೆಲೆಸಿದೆ. ಕುಂಬಾರ ಸಮುದಾಯದ ಈ ಕುಟುಂಬ ನೂರಾರು ವರ್ಷಗಳಿಂದ ಬೈರಾಪುರ ಗ್ರಾಮದಲ್ಲಿ ನೆಲೆಸಿದ್ದು, ವೃತ್ತಿಯಲ್ಲಿ ಮಡಿಕೆ ತಯಾರು ಮಾಡುವ ಕಾಯಕ ಮಾಡುತ್ತಿದ್ದರು. ಪ್ರವೃತ್ತಿಯಾಗಿ ವರ್ಷಕ್ಕೊಮ್ಮೆ ಬರುವ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿ ಮಾಡಲು ಪ್ರಾರಂಭ ಮಾಡಿದರು.

ADVERTISEMENT

ಗಣೇಶ ಮೂರ್ತಿ ಮಾಡಲು ಜೇಡಿ ಮಣ್ಣು, ಮೈದಾಹಿಟ್ಟಿಗಿಂತ ಮೃದುವಾಗಿರಬೇಕು. ಈ ಮಣ್ಣು ಈವರೆಗೆ ಬ್ಯಾಬ ಗ್ರಾಮದಲ್ಲಿರುವ ದೊಡ್ಡ ಕೆರೆಯಂಗಳದಲ್ಲಿ ಮಾತ್ರ ದೊರಕುತ್ತಿತ್ತು. ಸದ್ಯ ಮಾವನೂರು ದೊಡ್ಡಕೆರೆಯಂಗಳದಲ್ಲಿ ದೊರಕುತ್ತಿದೆ.

ಕೆರೆಯಿಂದ ತಂದ ಮಣ್ಣಿಗೆ ಭಕ್ತಿಯಿಂದ ಪ್ರಥಮ ಪೂಜೆ ಸಲ್ಲಿಸಿ, ಹದ ಮಾಡಿಕೊಂಡು ಕಾಯಕ ಮಾಡಲು ಪ್ರಾರಂಭ ಮಾಡುತ್ತಾರೆ. ವರ್ಷದಲ್ಲಿ ನಾಲ್ಕು ತಿಂಗಳು ಕಾಲ ಮಾತ್ರ ಗಣೇಶ ಮೂರ್ತಿ ತಯಾರಿಕೆಗೆ ಮೀಸಲಿಡುತ್ತಾರೆ. ಸದ್ಯ 4 ಅಡಿ ಎತ್ತರದ 15 ಮೂರ್ತಿಗಳು, 3 ಅಡಿ ಎತ್ತರದ 25, 2 ಅಡಿ ಎತ್ತರದ 10 ಮತ್ತು ಒಂದು ಅಡಿ ಎತ್ತರದ 25 ಗಣಪತಿ ಮತ್ತು ಗೌರಮ್ಮ ಮೂರ್ತಿಗಳನ್ನು ತಯಾರಿಸಲಾಗುತ್ತದೆ.

ಗಣೇಶ ವಿಗ್ರಹಗಳ ಜೊತೆಗೆ ಮಾರುಕಟ್ಟೆಯಲ್ಲಿ ತರಹೇವಾರಿ ಅಲಂಕಾರಿಕ ಸಾಮಗ್ರಿಗಳ ವ್ಯಾಪಾರವೂ ಜೋರಾಗಿದೆ. ವಿವಿಧ ಬಗೆ ವಿದ್ಯುತ್‌ ದೀಪಗಳು, ಅಲಂಕಾರಿಕ ಹಾರಗಳು, ಮತ್ತಿತರ ವಸ್ತುಗಳ ಖರೀದಿ ಈಗಿನಿಂದಲೇ ಆರಂಭವಾಗಿದೆ.

ಇನ್ನು ಪಟ್ಟಣದಲ್ಲಿ ಸಾರ್ವಜನಿಕ ಗೌರಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಸಮಿತಿಗಳು ಈಗಿನಿಂದಲೇ ಪೆಂಡಾಲ್‌ ತಯಾರಿ, ಅಲಂಕಾರಕ್ಕೆ ಸಿದ್ಧತೆ ಆರಂಭಿಸಿವೆ.

ಗಣೇಶ ಮೂರ್ತಿ ತಯಾರಿಕೆ ಮಾಡುವುದು ಕಲೆ. ಹಬ್ಬದೊಂದಿಗೆ ಕಲೆಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಪರಿಸರ ಉಳಿಸುವುದು ಎಲ್ಲರ ಜವಾಬ್ದಾರಿ. ಆದಷ್ಟು ಪರಿಸರಸ್ನೇಹಿ ಗಣಪತಿ ಪೂಜೆ ಮಾಡೋಣ.
ಕೆ. ಜಿ. ನಾಗರಾಜು ವಕೀಲ

ನಾಲ್ಕು ತಿಂಗಳಿಂದ ತಯಾರಿ ಗಣೇಶ ಹಬ್ಬಕ್ಕೆ ನಾಲ್ಕು ತಿಂಗಳ ಮೊದಲು ಕಾಯಕ ಪ್ರಾರಂಭವಾಗುತ್ತದೆ. ಒಂದು ಸಾಮಾನ್ಯ ಗಣಪತಿ ತಯಾರು ಮಾಡಲು ಹತ್ತು ದಿನಗಳು ಬೇಕು. ಎಲ್ಲ ಸೇರಿ ₹ 50 ಸಾವಿರ ವೆಚ್ಚವಾಗುತ್ತದೆ ಎನ್ನುತ್ತಾರೆ ಮೂರ್ತಿ ತಯಾರಕ ಲತೇಶ್‌. ಎಲ್ಲ ಮೂರ್ತಿಗಳು ವ್ಯಾಪಾರವಾದರೆ ಶೇ 100 ರಷ್ಟು ಲಾಭ ಸಿಗುತ್ತದೆ. ಪರಿಸರ ಸ್ನೇಹಿ ಮೂರ್ತಿಗಳನ್ನು ಹೆಚ್ಚು ತಯಾರು ಮಾಡುತ್ತೇವೆ. ಬಯಸಿದವರಿಗೆ ಮಾತ್ರ ಅಗತ್ಯವಾದ ಸಾಮಾನ್ಯ ಬಣ್ಣ ಬಳಿದು ಕೊಡುತ್ತೇವೆ. ಆಯಿಲ್ ಬಣ್ಣ ಬಳಸದೇ ಸಾಮಾನ್ಯ ಬಣ್ಣ ಬಳಸುವುದರಿಂದ ವಿಷಕಾರಿಯಾಗುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.