ADVERTISEMENT

ಸಕಲೇಶಪುರ| ‘ರೈತರ ಮಕ್ಕಳಿಗೆ ಶಿಕ್ಷಣ ಬುನಾದಿ’: ಶಾಸಕ ಸಿಮೆಂಟ್ ಮಂಜು

​ಪ್ರಜಾವಾಣಿ ವಾರ್ತೆ
Published 20 ಮೇ 2025, 14:21 IST
Last Updated 20 ಮೇ 2025, 14:21 IST
ಸಕಲೇಶಪುರ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಸೋಮವಾರ ಗುದ್ದಲಿ ಪೂಜೆ ಮಾಡಿ ಮಾತನಾಡಿದರು
ಸಕಲೇಶಪುರ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಸೋಮವಾರ ಗುದ್ದಲಿ ಪೂಜೆ ಮಾಡಿ ಮಾತನಾಡಿದರು   

ಸಕಲೇಶಪುರ: ‘ವಸತಿ ಶಾಲೆಗಳು ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳ ಆಶಾಕಿರಣ ಮತ್ತು ಅವರ ಬದುಕಿಗೆ ಶಿಕ್ಷಣ ಭದ್ರ ಬುನಾದಿ’ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲ್ಲೂಕಿನ ಹಾನುಬಾಳು ಹೋಬಳಿ ಮಾವಿಹಳ್ಳಿ ಗ್ರಾಮದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದರು.

‘₹23 ಕೋಟಿ ವೆಚ್ಚದಲ್ಲಿ ವಸತಿ ಗೃಹ, ಅಡುಗೆ ಮನೆ, ಬೋಧಕ ಹಾಗೂ ಬೋಧಕೇತರ ಶಿಕ್ಷಕರ ವಸತಿ ಗೃಹ, ಕಂಪ್ಯೂಟರ್ ಕೊಠಡಿ, ಬೃಹತ್ ಸಭಾಂಗಣ, ಸೇರಿದಂತೆ ವಿಶಾಲ ಶಾಲಾ ಸಮುಚ್ಛಯ ನಿರ್ಮಾಣವಾಗಲಿವೆ.
ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ, ಕುಟುಂಬದ ಹಾಗೂ ಸಮಾಜದ ಸಾಮಾಜಿಕ ಸಬಲತೆ ಸಾಧ್ಯ. ದೇಶದ ಪ್ರಗತಿಗೂ ಸಹಕಾರಿ. ಹಿಂದಿನ ಶೈಕ್ಷಣಿಕ ಪದ್ಧತಿಗೂ, ಇಂದಿನ ಶಿಕ್ಷಣ ನೀತಿಗೂ ಬಹಳ ವ್ಯತ್ಯಾಸಗಳಿವೆ’ ಎಂದರು.

ADVERTISEMENT

‘ರಾಷ್ಟ್ರವ್ಯಾಪಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆ ರೂಪಿಸಿದ್ದಾರೆ. ಸರ್ವರಿಗೂ ಶಿಕ್ಷಣ ದೊರಕುವಂತೆ ಕಾರ್ಯಯೋಜನೆ ಜಾರಿಗೆ ತಂದಿವೆ’ ಎಂದರು.

‘ವಸತಿ ಶಾಲೆಗೆ ಅಗತ್ಯ ಸೌಲಭ್ಯ ದಕ್ಕುವಂತಾಗಬೇಕು. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಬೇಕು ಎನ್ನುವ ವಸತಿ ಶಾಲೆಗಳ ಸದುದ್ದೇಶ ಸಾಕಾರಗೊಳಿಸಲು ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳ್ಳಬೇಕು’ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಕ್ಯಾಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಚಿನ್, ವಸತಿ ಶಾಲೆಗಳ ಕೇಂದ್ರ ಕಚೇರಿ ಎಇಇ ನಟರಾಜ್, ಗ್ರಾಮ ಪಂಚಾಯಿತಿ ಪಿಡಿಒ ರಘು, ಗ್ರಾಪಂ ಉಪಾಧ್ಯಕ್ಷೆ ಪೂರ್ಣಿಮಾ ದಾರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಉಮಾ, ಗೀತಾ, ಬಾಸ್ಕರ್, ಜಿಲ್ಲಾ ಬಿಜೆಪಿ ಮುಖಂಡ ರಾಜ್‌‌‌ಕುಮಾರ್, ಆಶೀರ್ವಾದ್, ಅಗ್ನಿ ಸೋಮಶೇಖರ್, ಗುತ್ತಿಗೆದಾರ ಕೃಷ್ಣಮೂರ್ತಿ, ನಿವೃತ್ತ ತಹಸೀಲ್ದಾರ್ ಅಣ್ಣೆಗೌಡ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಪರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.