ಹಾಸನ: ‘ನಗರಸಭೆ ಇದೀಗ ಮಹಾನಗರ ಪಾಲಿಕೆಯಾಗಿ ಉನ್ನತೀಕರಣಗೊಂಡಿದ್ದು, ಹೆಚ್ಚಿನ ಅನುದಾನ ತರುವ ಮೂಲಕ ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ’ ಶಾಸಕ ಸ್ವರೂಪ್ ಪ್ರಕಾಶ್ ಭರವಸೆ ನೀಡಿದರು.
ನಗರದ 80 ಅಡಿ ರಸ್ತೆಯ ವಿಶ್ವನಾಥ ನಗರದಲ್ಲಿ ₹ 50 ಲಕ್ಷ ವೆಚ್ಚದ ಕಾಂಕ್ರೀಟ್ ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ನಗರದ ಅಭಿವೃದ್ಧಿಗೆ ಎಚ್.ಡಿ. ರೇವಣ್ಣ ಅವರು ಸಚಿವರಾಗಿದ್ದಾಗ ಸಾಕಷ್ಟು ಅನುದಾನ ನೀಡಿ ಸಹಕಾರ ನೀಡಿದ್ದಾರೆ. ಇದೀಗ ಮಹಾನಗರ ಪಾಲಿಕೆ ಆಗಿರುವುದರಿಂದ ರಾಜ್ಯ ಸರ್ಕಾರದಿಂದ ₹ 3 ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಎಚ್.ಡಿ. ದೇವೇಗೌಡರ ಸಹಕಾರದಲ್ಲಿ ಕೇಂದ್ರದಿಂದಲೂ ಸುಮಾರು ₹ 30 ಕೋಟಿ ಅನುದಾನ ದೊರೆಯುವ ಭರವಸೆ ಇದೆ’ ಎಂದರು.
‘ಮಹಾನಗರ ಪಾಲಿಕೆಗೆ ಸೇರಿರುವ ಹೆಚ್ಚುವರಿ 35 ಹಳ್ಳಿಗಳಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ, ಸುಮಾರು ₹100 ಕೋಟಿಯಿಂದ ₹ 150 ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆಗೆ ಒಳಗೊಂಡ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದೆ’ ಎಂದು ಹೇಳಿದರು.
ಮೇಯರ್ ಎಂ.ಚಂದ್ರೇಗೌಡ ಮಾತನಾಡಿ, ‘ಶಾಸಕರ ಸಹಕಾರದಿಂದ ಹಾಸನಕ್ಕೆ ಹೆಚ್ಚಿನ ಅನುದಾನ ತಂದು, ಅಭಿವೃದ್ದಿ ಕೆಲಸ ಮಾಡಲಾಗುವುದು’ ಎಂದರು.
ವಾರ್ಡ್ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮಾತನಾಡಿ, ‘30ನೇ ವಾರ್ಡ್‌ಗೆ ₹ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಎಚ್.ಡಿ. ರೇವಣ್ಣ ಉಸ್ತುವಾರಿ ಸಚಿವರಾಗಿದ್ದಾಗ 80 ಅಡಿ ರಸ್ತೆ ನಿರ್ಮಿಸಿ, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸ್ವರೂಪ್ ಪ್ರಕಾಶ್ ಶಾಸಕರಾದ ಬಳಿಕ ಬಡಾವಣೆಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿ ಪಡಿಸುವ ಕೆಲಸ ಮಾಡಿದ್ದಾರೆ’ ಎಂದರು.
ಉಪ ಮೇಯರ್ ಹೇಮಲತಾ, ಎಇಇ ಚೆನ್ನೇಗೌಡ, ಎಇ ಆನಂದ್, ನಗರಸಭೆ ಸದಸ್ಯರು ಹಾಗೂ ಬಡಾವಣೆ ನಿವಾಸಿಗಳು ಹಾಜರಿದ್ದರು.
ನಗರ ನಿವಾಸಿಗಳ ಕುಡಿಯುವ ನೀರು ರಸ್ತೆ ಚರಂಡಿ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳನ್ನೂ ಬಗೆಹರಿಸಲು ಬದ್ಧರಾಗಿದ್ದೇವೆಎಂ.ಚಂದ್ರೇಗೌಡ ಮೇಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.