ADVERTISEMENT

ಹಾಸನ | ಈದ್‌ ಮಿಲಾದ್‌: ಅದ್ಧೂರಿ ಮೆರವಣಿಗೆ

ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್‌: ಸಾವಿರಾರು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:01 IST
Last Updated 6 ಸೆಪ್ಟೆಂಬರ್ 2025, 2:01 IST
ಹೊಳೆನರಸೀಪುರದ ಮುಸ್ಲಿಮರು ಶುಕ್ರವಾರ ಈದ್‌ ಮಿಲಾದ್ ಮೆರವಣಿಗೆ ನಡೆಸಿದರು.
ಹೊಳೆನರಸೀಪುರದ ಮುಸ್ಲಿಮರು ಶುಕ್ರವಾರ ಈದ್‌ ಮಿಲಾದ್ ಮೆರವಣಿಗೆ ನಡೆಸಿದರು.   

ಹಾಸನ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದಲ್ಲಿ ಈದ್ ಮಿಲಾದ್‌ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ನಗರದ ಹೊಸಲೈನ್ ರಸ್ತೆ ಮೂಲಕ ಬೃಹತ್ ಮೆರವಣಿಗೆಯಲ್ಲಿ ಸಾಗಿದ ಸಾವಿರಾರು ಮಂದಿ ಮುಸ್ಲಿಮರು, ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರೇ, ಕೆಲವೆಡೆ ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರು. ಮೆಕ್ಕಾ ಮದಿನಾದ ಪ್ರತಿಕೃತಿಯನ್ನು ಹೊತ್ತ ಮೆರವಣಿಗೆಯಲ್ಲಿ ಇಸ್ಲಾಂ ಧರ್ಮದ ಬಾವುಟಗಳನ್ನು ಯುವಕರು ಪ್ರದರ್ಶಿಸಿದರು.

ನಗರದ ಹಳೆ ಮಟನ್ ಮಾರ್ಕೆಟ್, ಅಮೀರ್‌ ಮೊಹಲ್ಲಾದ ಬಳಿ ಸೇರಿದ ಮೆರವಣಿಗೆ, ಡಬಲ್ ಟ್ಯಾಂಕ್ ವೃತ್ತದಿಂದ ಹೊರಟು ಹೊಸಲೈನ್, ವಲ್ಲಭಭಾಯಿ ರಸ್ತೆ, ಸಂತೆಪೇಟೆ, ಬಿ.ಎಂ. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

ADVERTISEMENT

ಶಾಸಕ ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಹಲವು ಮುಖಂಡರು ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾವಗಹಿಸಿ, ಕೆಲಕಾಲ ಮೆರವಣಿಗೆಯಲ್ಲಿ ಸಾಗಿದರು.

ಮೆರವಣಿಗೆ ಹಿನ್ನೆಲೆ ಪ್ರಮುಖ ವೃತ್ತ ಹಾಗೂ ರಸ್ತೆಯಲ್ಲಿ ಹಸಿರು ಬಾವುಟ ಹಾಗೂ ಬಂಟಿಂಗ್ಸ್ ರಾರಾಜಿಸುತ್ತಿದ್ದವು. ಹಲವು ಕಡೆ ಶುಭಾಶಯ ಕೋರುವ ಫ್ಲೆಕ್ಸ್, ಬ್ಯಾನರ್‌ ಮತ್ತು ಪ್ರಮುಖ ವೃತ್ತಗಳಲ್ಲಿ ಬಂಟಿಂಗ್ಸ್ ಕಟ್ಟಲಾಗಿತ್ತು. ಸಿಂಗರಿಸಿದ ಹತ್ತಾರು ವಾಹನಗಳು ಮರೆವಣಿಗೆಯಲ್ಲಿ ಸಾಗಿದವು.

ಮೆರವಣಿಗೆಯಲ್ಲಿ ಸಾಗುವ ದಾರಿಯಲ್ಲಿ ಅಲ್ಲಲ್ಲಿ ತಂಪು ಪಾನಿಯ, ನೀರು, ಐಸ್ ಕ್ರೀಂ ಸೇರಿದಂತೆ ಇತರೆ ಆಹಾರ ಪದಾರ್ಥ ವಿತರಿಸಲಾಗುತ್ತಿತ್ತು. ಮುನ್ನೆಚ್ಚರಿಕ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಎಲ್ಲ ಮಸೀದಿಗಳ ಪ್ರಮುಖ ಧರ್ಮಗುರುಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಹಾಸನದಲ್ಲಿ ಶುಕ್ರವಾರ ಈದ್‌ ಮಿಲಾದ್ ಅಂಗವಾಗಿ ಬೃಹತ್‌ ಮೆರವಣಿಗೆ ನಡೆಯಿತು.
ಹಾಸನದಲ್ಲಿ ನಡೆದ ಮೆರವಣಿಗೆಯಲ್ಲಿ ಪ್ರಮುಖ ಮಸೀದಿಗಳ ಧರ್ಮಗುರುಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.