ಸಾವು (ಪ್ರಾತಿನಿಧಿಕ ಚಿತ್ರ)
ಹಾಸನ: ತಾಲ್ಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಶನಿವಾರ ವಿದ್ಯುತ್ ಸ್ಪರ್ಶಿಸಿ ಸೆಸ್ಕ್ ಲೈನ್‌ಮೆನ್ ವರುಣ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರೈಲ್ವೆ ನಿಲ್ದಾಣದ ಬಳಿ ವಿದ್ಯುತ್ ಕಂಬವನ್ನೇರಿ ದುರಸ್ತಿ ಮಾಡುತ್ತಿರುವಾಗ ವರುಣ್ ದೇಹದ ಎಡಭಾಗಕ್ಕೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಈ ಅವಘಡ ಸಂಭವಿಸಿದೆ. ದೇಹದ ಎಡಭಾಗ ಸುಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವರುಣ್ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಕೂಡಲೇ ಮೃತದೇಹವನ್ನು ಹಾಸನದ ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು. ಶವಾಗಾರದ ಮುಂದೆ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಗಾಳಿಯಲ್ಲಿ ಗುಂಡು: 8 ಮಂದಿ ವಶಕ್ಕೆ
ಹಾಸನ: ತಾಲ್ಲೂಕಿನ ಕಟ್ಟಾಯ ಬಳಿ ಕ್ಷುಲ್ಲಕ ಕಾರಣಕ್ಕೆ ಯುವಕರ ಎರಡು ಗುಂಪಿನ ನಡುವೆ ಹೊಡೆದಾಟ ನಡೆದಿದ್ದು, ಶುಕ್ರವಾರ ರಾತ್ರಿ ಯುವಕನೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಪ್ರಕರಣ ಸಂಬಂಧ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳದ ಕೊಟ್ಟಿಯೂರು ದೇವಾಲಯದಿಂದ ದಾವಣಗೆರೆಗೆ ತೆರಳುತ್ತಿದ್ದ ಗಣೇಶ್, ನಿಂಗರಾಜು, ಸಂಜಯ್, ಗಿರೀಶ್, ಕಿರಣ್ ಹಾಗೂ ಕೊಡಗಿಗೆ ತೆರಳುತ್ತಿದ್ದ ಬೋಪಣ್ಣ, ಚೇತನ, ಯೋಗೇಶ್ ಎಂಬುವವರ ಮಧ್ಯೆ ತಾಲ್ಲೂಕಿನ ಬ್ಯಾಡರಹಳ್ಳಿ ಟೋಲ್ ಬಳಿ ಕಾರು ಮುಂದೆ ತೆಗೆಯುವ ವಿಚಾರಕ್ಕೆ ಜಗಳ ಶುರುವಾಗಿದೆ.
ಜಗಳ ವಿಕೋಪಕ್ಕೆ ತಿರುಗಿ ಬಡಿದಾಡಿಕೊಂಡಿದ್ದಾರೆ. ಬಳಿಕ ಕಟ್ಟಾಯ ಬಳಿ ಕಾರುಗಳನ್ನು ನಿಲ್ಲಿಸಿ ಮತ್ತೆ ಹೊಡೆದಾಡಿದ್ದಾರೆ. ಈ ವೇಳೆ ಯೋಗೇಶ್ ಎಂಬಾತ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ವಿಷಯ ತಿಳಿದ ಗೊರೂರು ಠಾಣೆ ಪೊಲೀಸರು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ಕಡೆಯವರು ದೂರು ನೀಡಿದ್ದು, ಪ್ರಕರಣ ಸಂಬಂಧ ಎಂಟು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹೆದ್ದಾರಿ ಪಕ್ಕ ಶವ ಪತ್ತೆ: ಕೊಲೆ ಶಂಕೆ
ಹಾಸನ: ತಾಲ್ಲೂಕಿನ ಹೂವಿನಹಳ್ಳಿ ಬಳಿ ಹಾಸನ–ಬೇಲೂರು ರಸ್ತೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದ ಮಧು (36) ಕೊಲೆಯಾಗಿದ್ದಾನೆ. ಮಧು ಪತ್ನಿ ಜೊತೆ ಗೆಳೆತನ ಹೊಂದಿದ್ದ ಮೋಹನ್ ಎಂಬಾತ ಕೊಲೆ ಮಾಡಿದ್ದು, ಶವವನ್ನು ಇಲ್ಲಿಗೆ ತಂದು ಎಸೆದಿದ್ದಾನೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಕೂಲಿ ಕೆಲಸ ಮಾಡಿ ಮನೆಗೆ ಹೊರಟಿದ್ದ ಮಧುಗೆ ಕಂಠಪೂರ್ತಿ ಕುಡಿಸಿ, ಆಟೊವೊಂದರಲ್ಲಿ ಕರೆದೊಯ್ದು ಕೊಲೆ ಮಾಡಲಾಗಿದ್ದು, ಹೆದ್ದಾರಿ ಪಕ್ಕ ಶವ ಎಸೆಯಲಾಗಿದೆ. ಬೆಳಿಗ್ಗೆ ರಸ್ತೆ ಬದಿ ಶವ ನೋಡಿದ ಸ್ಥಳೀಯರು, ಅಪಘಾತ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತದೇಹ ಪರಿಶೀಲನೆ ನಡೆಸಿದಾಗ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುವ ಆತಂಕದಲ್ಲಿ ಈತನನ್ನು ಕೊಲೆ ಮಾಡಿ, ಅಪಘಾತವೆಂದು ಬಿಂಬಿಸಲು ಹೆದ್ದಾರಿ ಪಕ್ಕದಲ್ಲಿ ಮೃತದೇಹ ಎಸೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮೋಹನ್ ಮೇಲೆ ಅನುಮಾನ ವ್ಯಕ್ತಪಡಿಸಿ ಮಧು ತಾಯಿ ರುಕ್ಮಿಣಿ, ಹಾಸನ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ
ಹಾಸನ: ಕಾನೂನುಬಾಹಿರವಾಗಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ವಾಹನದಲ್ಲಿ ತುಂಬಿಕೊಂಡು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಸಕಲೇಶಪುರ ಪೊಲೀಸರು ಬಂಧಿಸಿದ್ದಾರೆ.
ಹಾಸನ ತಾಲ್ಲೂಕಿನ ಕಂದಲಿ ಗ್ರಾಮದ ಮಹೇಶ, ಆಲೂರು ತಾಲ್ಲೂಕು ಕಣತ್ತೂರು ಗ್ರಾಮದ ವೆಂಕಟೇಶ ಬಂಧಿತ ಆರೋಪಿಗಳು. ವಾಹನ ವಶಪಡಿಸಿಕೊಂಡಿದ್ದು, ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.
ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಸಕಲೇಶಪುರ ನಗರ ಠಾಣೆ ಇನ್‌ಸ್ಪೆಕ್ಟರ್ ಜಗದೀಶ್, ಸಕಲೇಶಪುರದ ಬಿ.ಎಂ.ರಸ್ತೆಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಟೋಲ್ ಗೇಟ್ ಕಡೆಯಿಂದ ಅನುಮಾನಾಸ್ಪದವಾಗಿ ಬಂದ ಗೂಡ್ಸ್ ವಾಹನ ತಡೆದು ಪರಿಶೀಲಿಸಿದಾಗ, ಅದರೊಳಗೆ 3 ಹಸು ಹಾಗೂ 1 ಕರು ಪತ್ತೆಯಾಗಿವೆ.
ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಕಾನೂನುಬಾಹಿರವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದರು. ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.