ADVERTISEMENT

ಸಕಲೇಶಪುರ ತಾಲ್ಲೂಕಿನ ಕೌಡಳ್ಳಿಯಲ್ಲಿ ಕಾಡಾನೆ ದಾಳಿ; ಮನೆ, ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 4:13 IST
Last Updated 24 ಸೆಪ್ಟೆಂಬರ್ 2020, 4:13 IST
ಸಕಲೇಶಪುರ ತಾಲ್ಲೂಕಿನ ಕೌಡಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಬಾಳೆ ಬೆಳೆಯನ್ನು ಹಾಳು ಮಾಡಿರುವುದು
ಸಕಲೇಶಪುರ ತಾಲ್ಲೂಕಿನ ಕೌಡಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಬಾಳೆ ಬೆಳೆಯನ್ನು ಹಾಳು ಮಾಡಿರುವುದು   

ಸಕಲೇಶಪುರ: ಕಾಡಾನೆಗಳು ದಾಳಿ ಮಾಡಿ ಮನೆಯೊಂದರ ಕಿಟಕಿ ಗಾಜು ಒಡೆದು ಬೆಳೆ ಹಾನಿ ಮಾಡಿರುವ ಘಟನೆ ತಾಲ್ಲೂಕಿನ ಕೌಡಹಳ್ಳಿ ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಸುಮಾರು 20ಕ್ಕೂ ಹೆಚ್ಚು ಆನೆಗಳು ಗ್ರಾಮದ ಇಲ್ಯಾಸ್‌ ಎಂಬುವವರ ಮನೆಯ ಸುತ್ತಲೂ ದಾಳಿ ಮಾಡಿ, ಬಾಳೆ, ತೆಂಗು, ಕಾಫಿ ಗಿಡಗಳನ್ನು ತಿಂದು ತುಳಿದು ಹಾಕಿವೆ. ಅಲ್ಲದೆ ಕಿಟಕಿಯ ಗಾಜಿಗೆ ಸೊಂಡಿಲಿಂದ ಹೊಡೆದು ಗಾಜು ಪುಡಿಯಾಗಿದ್ದು, ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಎರಡು ವಾರಗಳಿಂದ ಕೌಡಹಳ್ಳಿ, ಸತ್ತಿಗಾಲ, ಸುಳ್ಳಕ್ಕಿ, ಜಾನೇಕೆರೆ, ಆರೆಕೆರೆ ಭಾಗದಲ್ಲೇ ಆನೆಗಳು ಅಡ್ಡಾಡುತ್ತಿವೆ. ನಾಟಿ ಮಾಡಿರುವ ಹಲವು ರೈತರ ಭತ್ತದ ಬೆಳೆಯನ್ನು ಹಾನಿ ಮಾಡಿವೆ. ತೋಟಗಳಲ್ಲಿ ಮಾತ್ರವಲ್ಲದೆ ಮನೆ ಅಂಗಳ, ಹಿತ್ತಲಲ್ಲಿರುವ ಬಾಳೆ, ತೆಂಗಿನ ಗಿಡಗಳನ್ನೂ ಹಾಳು ಮಾಡಿವೆ.

ADVERTISEMENT

‘ಎಲ್ಲ ಕಾಡಾನೆಗಳನ್ನು ಸ್ಥಳಾಂತರ ಮಾಡದಿದ್ದರೆ, ತಿನ್ನುವ ಅನ್ನ ಮಾತ್ರವಲ್ಲ ಜೀವವನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಟಿಎಪಿಸಿಎಂಎಸ್‌ ಅಧ್ಯಕ್ಷ ಕೌಡಹಳ್ಳಿ ಲೋಹಿತ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಅಗಸೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ಹಾನಿ ಹಾಗೂ ಜೀವ ಭಯ ಕುರಿತು ಗ್ರಾಮಸ್ಥರು ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.