
ಹಾಸನ: ಕರ್ನಾಟಕದ ಪಶ್ಚಿಮಘಟ್ಟದ ಅಂಚಿನಲ್ಲಿರುವ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಶ್ರೀಲಂಕಾ ಮಾದರಿಯ ಆನೆಧಾಮ ಸ್ಥಾಪನೆಯೇ ಸೂಕ್ತ ಪರಿಹಾರ ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾನವ ಮತ್ತು ಆನೆ ಸಹಜವಾಗಿ ಸಹಬಾಳ್ವೆ ನಡೆಸುವ ಪರಿಸ್ಥಿತಿ ನಿರ್ಮಿಸುವ ಹೊಣೆಗಾರಿಕೆ ಸರ್ಕಾರದ್ದಾಗಿದೆ. ಪ್ರತಿ ವರ್ಷ ರೈತರು, ಕಾರ್ಮಿಕರು ಆನೆ ಹಾವಳಿಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗೆ ರಾಜಕೀಯ ಬಣ್ಣ ನೀಡದೇ, ತಂತ್ರಜ್ಞಾನ ಆಧಾರಿತ ಮತ್ತು ಮಾನವೀಯ ದೃಷ್ಟಿಕೋನದ ಪರಿಹಾರ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
‘ಶ್ರೀಲಂಕಾದಲ್ಲಿ ಸ್ಥಾಪಿಸಲಾದ ಪಿನ್ನಾವಲಾ ಎಲಿಫೆಂಟ್ ಅರ್ಫಾನೇಜ್ ಮತ್ತು ಉಡವಳವೆ ಆನೆ ಟ್ರಾನ್ಸಿಟ್ ಹೋಂ ಮಾದರಿಯು, ಮಾನವ-ಆನೆ ಸಂಘರ್ಷ ನಿವಾರಣೆಗೆ ಪರಿಣಾಮಕಾರಿ ಕ್ರಮವಾಗಿದೆ. ಅಲ್ಲಿ ಪುಂಡಾನೆ, ಗಾಯಗೊಂಡ ಅಥವಾ ಜನವಸತಿ ಪ್ರದೇಶಗಳಲ್ಲಿ ಹಾನಿ ಮಾಡುವ ಆನೆಗಳನ್ನು ಹಿಡಿದು ವಿಶೇಷ ಶಿಬಿರಗಳಲ್ಲಿ ಬಿಡಲಾಗುತ್ತದೆ’ ಎಂದರು.
‘ಈ ಶಿಬಿರಗಳು ಕೇವಲ ಅರಣ್ಯ ಸಂರಕ್ಷಣೆಗಾಗಿ ಮಾತ್ರವಲ್ಲ, ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯೂ ಆಗಿವೆ. ದಿನವೂ ನೂರಾರು ಪ್ರವಾಸಿಗರು ಭೇಟಿ ನೀಡುವುದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಿದೆ. ಸರ್ಕಾರಕ್ಕೂ ಆದಾಯ ಬಂದಿದೆ ಎಂದ ಅವರು, ಕರ್ನಾಟಕದಲ್ಲೂ ಇದೇ ಮಾದರಿ ಅಳವಡಿಸಿಕೊಂಡರೆ ರೈತರ ಕಷ್ಟಕ್ಕೆ ಶಾಶ್ವತ ಪರಿಹಾರ ದೊರಕುತ್ತದೆ’ ಎಂದರು.
‘ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ರೀತಿಯ ಅನೆಧಾಮಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಒಂದು ಕಡೆಯಿಂದ ರೈತರ ಜೀವ ಮತ್ತು ಬೆಳೆ ಉಳಿಸಬಹುದು. ಮತ್ತೊಂದೆಡೆ ಪ್ರವಾಸೋದ್ಯಮದ ಮೂಲಕ ಆದಾಯವನ್ನೂ ಹೆಚ್ಚಿಸಬಹುದು’ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರು, ತಕ್ಷಣವೇ ಅಧಿಕಾರಿಗಳು ಹಾಗೂ ರೈತರ ಪ್ರತಿನಿಧಿಗಳ ನಿಯೋಗವನ್ನು ಶ್ರೀಲಂಕಾಕ್ಕೆ ಕಳುಹಿಸಿ, ಅಲ್ಲಿನ ಅನೆಧಾಮಗಳ ನಿರ್ವಹಣಾ ವಿಧಾನ ಮತ್ತು ಕಾನೂನುಗಳ ಕುರಿತು ಸಮಗ್ರ ಅಧ್ಯಯನ ನಡೆಸಬೇಕು. ಅದರ ಆಧಾರದಲ್ಲಿ ಕರ್ನಾಟಕದ ಆನೆ ಹಾವಳಿ ಪ್ರದೇಶಗಳಲ್ಲಿ ಅನೆಧಾಮಗಳ ಸ್ಥಾಪನೆ ಮಾಡಬೇಕು. ಪದೇ ಪದೇ ಜನವಸತಿ ಪ್ರದೇಶಗಳಿಗೆ ನುಗ್ಗುವ ಆನೆಗಳನ್ನು ಹಿಡಿಸಿ, ಇಂತಹ ಶಿಬಿರಗಳಿಗೆ ಸ್ಥಳಾಂತರಿಸಬೇಕು ಎಂದು ಸಲಹೆ ನೀಡಿದರು.
ಮೋಹನ್ ಕುಮಾರ್, ಕೃಷ್ಣಪ್ಪ ಇತರರು ಇದ್ದರು.
ಆನೆಗಳು ತಪ್ಪು ಮಾಡುತ್ತಿಲ್ಲ. ನಾವು ಅವುಗಳ ವಾಸಸ್ಥಳ ಕಿತ್ತುಕೊಂಡಿದ್ದೇವೆ. ಪರಿಹಾರವೂ ಮಾನವೀಯ ದೃಷ್ಟಿಯಿಂದ ಇರಬೇಕು. ಈ ಸಮಸ್ಯೆಯನ್ನು ಜೀವನದ ಹಕ್ಕಿನ ದೃಷ್ಟಿಯಿಂದ ನೋಡಬೇಕುಎಚ್.ಎಂ. ವಿಶ್ವನಾಥ್ ಮಾಜಿ ಶಾಸಕ
ಪಶ್ಚಿಮ ಘಟ್ಟದಲ್ಲಿ 6 ಸಾವಿರ ಆನೆಗಳು
ರಾಜ್ಯದ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ 6ಸಾವಿರಕ್ಕೂ ಹೆಚ್ಚು ಆನೆಗಳಿವೆ. ಎರಡು ದಶಕಗಳಲ್ಲಿ ಅರಣ್ಯದಂಚಿನಿಂದ ಮಲೆನಾಡಿನ ಜನವಸತಿ ಪ್ರದೇಶಗಳವರೆಗೆ ಆನೆ–ಮಾನವ ಸಂಘರ್ಷ ವ್ಯಾಪಿಸಿದೆ ಎಂದು ಎಚ್.ಎಂ. ವಿಶ್ವನಾಥ್ ಹೇಳಿದರು. ವಾಸ್ತವದಲ್ಲಿ ಈ ಸಮಸ್ಯೆಗೆ ಕಾರಣವಾಗಿರುವುದು ರಾಜ್ಯದ ಎಲ್ಲ ಆನೆಗಳೂ ಅಲ್ಲ. ಕೇವಲ 200 ರಿಂದ 250 ಆನೆಗಳಷ್ಟೇ ಮಾನವ ವಸತಿ ಪ್ರದೇಶಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇಂತಹ ಪುಂಡಾನೆಗಳನ್ನು ಗುರುತಿಸಿ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದರೆ ಸಮಸ್ಯೆ ತಕ್ಕಮಟ್ಟಿಗೆ ಕಡಿಮೆಯಾಗುತ್ತದೆ ಎಂದರು. ಕೊಡಗು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿಯೇ ಅತಿ ಹೆಚ್ಚು ಜೀವಹಾನಿ ಸಂಭವಿಸಿದೆ. ಕೇವಲ ಹಾಸನ ಜಿಲ್ಲೆಯಲ್ಲಿ 20 ವರ್ಷಗಳಲ್ಲಿ 80 ಕ್ಕೂ ಹೆಚ್ಚು ಜನರು ಆನೆ ಹಾವಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕಾಡಿನ ಬಿದಿರು ಹಣ್ಣುಗಳನ್ನು ತಿನ್ನುತ್ತಿದ್ದ ಆನೆಗಳು ಈಗ ನಾಡಿನ ಕಬ್ಬು ತೆಂಗು ಬಾಳೆ ಮತ್ತು ಹಲಸಿನಂತಹ ಪೌಷ್ಟಿಕ ಬೆಳೆಗಳಿಗೆ ಒಗ್ಗಿ ಹೋಗಿವೆ. ಈ ಪ್ರದೇಶಗಳ ಸುಮಾರು 300 ಹಳ್ಳಿಗಳ ರೈತರು ಹಾನಿಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.