ADVERTISEMENT

ಮಲೆನಾಡಿನಲ್ಲಿ ಪುಂಡಾನೆ ಆಪರೇಷನ್‌

ಮತ್ತಿಗೋಡು ಆನೆ ಶಿಬಿರದಿಂದ ಬಂದ ಪಳಗಿದ ಆನೆಗಳು, ವಡೂರಿನಲ್ಲಿ ಶಿಬಿರ ಗುರುತು

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 12:55 IST
Last Updated 9 ಜೂನ್ 2021, 12:55 IST
ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಆನೆಗಳು. ಸಂಗ್ರಹ ಚಿತ್ರ
ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಆನೆಗಳು. ಸಂಗ್ರಹ ಚಿತ್ರ   

ಹಾಸನ: ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರುವ ಎರಡು ಪುಂಡಾನೆಗಳಾದ ‘ಗುಂಡ’, ‘ಮೌಂಟೇನ್‌’ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿದ್ಧತೆಮಾಡಿಕೊಂಡಿದೆ.

ಕಾಡಾನೆಗಳ ಹಾವಳಿಯಿಂದ ಸುಮಾರು ಎರಡು ದಶಕಗಳಿಂದ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿಲ್ಲ. ಆನೆಗಳ ಹಾವಳಿಗೆ ಆಲೂರು, ಬೇಲೂರು, ಸಕಲೇಶಪುರ ತಾಲ್ಲೂಕುಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಜನಜೀವನವೇ ತತ್ತರಗೊಂಡಿದೆ.

ಐದು ಆನೆಗಳ ಸೆರೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಎರಡಕ್ಕೆ ಅನುಮತಿದೊರೆತಿದ್ದು, ಜೂನ್‌ 10 ರಿಂದ ಎರಡು ಪುಂಡಾನೆ ಸೆರೆಗೆ ಸಕಲೇಶಪುರ ತಾಲ್ಲೂಕಿನ ವಡೂರಿನಲ್ಲಿ ಒಂದು ತಾತ್ಕಾಲಿಕ ಶಿಬಿರ ಗುರುತು ಮಾಡಲಾಗಿದೆ. ಈಗಾಗಲೇ ಮತ್ತಿಗೋಡು ಆನೆ ಶಿಬಿರದಿಂದ ಕೃಷ್ಣ, ಅಭಿಮನ್ಯು, ಅರ್ಜುನ ಸೇರಿ ಐದು ಪಳಗಿದ
ಆನೆಗಳು ಬಂದಿವೆ.

ADVERTISEMENT

ಮಲೈಮಹದೇಶ್ವರ ವನ್ಯಜೀವಿಧಾಮಕ್ಕೆ ಗುಂಡ ಹಾಗೂ ಕಾವೇರಿ ವನ್ಯಜೀವಿಧಾಮಕ್ಕೆಮೌಂಟೇನ್‌ ಆನೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಅದಕ್ಕೂ ಮುನ್ನ ಎರಡುಆನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಲಾಗುತ್ತದೆ.

ಹತ್ತು ವರ್ಷಗಳ ಅವಧಿಯಲ್ಲಿ ಕಾಡಾನೆ ದಾಳಿಯಿಂದ ಒಟ್ಟು 65 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಐದು ತಿಂಗಳ ಅವಧಿಯಲ್ಲಿ ಐದು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಗುಂಡೇಟು,ಕಾದಾಟ, ಅನಾರೋಗ್ಯ, ಅಪಘಾತ ಹಾಗೂ ಇತ್ಯಾದಿ ಕಾರಣಗಳಿಂದ 28 ಕಾಡಾನೆಗಳುಸಾವನ್ನಪ್ಪಿವೆ.

ಸಾಮಾನ್ಯವಾಗಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಾಗ ರೊಚ್ಚಿಗೆದ್ದ ಜನರುಪ್ರತಿಭಟನೆ ಮಾಡುವುದು, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ವಿತರಿಸುವುದುಮಾಮೂಲಿ ಆಗಿದೆ.

ಆನೆ ಹಾವಳಿಯಿಂದ ಬೇಸತ್ತ ಹೆತ್ತೂರು, ಯಸಳೂರು ಹೋಬಳಿಯ ರೈತರು ಬೆಳೆ ಬೆಳೆಯದೆ ಭೂಮಿಯನ್ನು ಪಾಳು ಬಿಟ್ಟಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಜತೆ ಕಾಡುಹಂದಿಗಳ ದಾಳಿಯೂ ಭೀತಿ ಹುಟ್ಟಿಸಿದೆ.

ಕಾಡಾನೆ ಸಮಸ್ಯೆಗೆ ಸಾಮೂಹಿಕ ಸೆರೆ ಕಾರ್ಯಾಚರಣೆ ಮತ್ತು ಸ್ಥಳಾಂತರವೊಂದೇಪರಿಹಾರ ಎಂಬ ಆಗ್ರಹ ಕೇಳಿ ಬಂದಿದೆ. ಹತ್ತು ವರ್ಷಗಳಲ್ಲಿ ಸೆರೆ ಹಿಡಿದು ಸ್ಥಳಾಂತರ ಮಾಡಿರುವುದು 70 ಆನೆಗಳು. ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂತತಿಗಣನೀಯವಾಗಿ ಏರಿಕೆಯಾಗಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿದೆ.

ಕೇವಲ ಪರಿಹಾರ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಆನೆ ಕಾರಿಡಾರ್‌ನಿರ್ಮಿಸಿ ಎಲ್ಲ ಆನೆಗಳನ್ನು ಸ್ಥಳಾಂತರ ಮಾಡಿ ಸಂಘರ್ಷ ಕೊನೆಗಾಣಿಸಬೇಕುಎಂಬುದು ಸಾರ್ವಜನಿಕರ ಒತ್ತಾಯ.

‘ಮಲೆನಾಡು ಭಾಗದಲ್ಲಿ ಕಾಡಾನೆಗಳಿಂದ ಮಾನವ ಹಾನಿ ಜೊತೆಗೆ ಬೆಳೆನಷ್ಟವಾಗುತ್ತಿದೆ. ಐದು ಆನೆಗಳ ಪೈಕಿ ಎರಡಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಕೋವಿಡ್‌ ಹಿನ್ನಲೆಯಲ್ಲಿ ಆನೆ ಸೆರೆ ಕಾರ್ಯಾಚರಣೆ ಆರಂಭಿಸಲು ಆಗಿರಲಿಲ್ಲ. ಲಾಕ್‌ಡೌನ್‌ ನಿರ್ಬಂಧದಿಂದ ಕೆಲ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯವಾಯಿತು.ಎರಡು ದಿನ ತಡವಾಗಿ ಕಾರ್ಯಾಚರಣೆ ಆರಂಭವಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್‌.ಬಸವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.